ಕುಟುಂಬ ಕಲಹ: ಹಾಸನದ ಹೊಳೆನರಸೀಪುರದಲ್ಲಿ ಪತ್ನಿಯನ್ನು ಅಟ್ಟಾಡಿಸಿ ಮಚ್ಚಿನಿಂದ ಹಲ್ಲೆ ನಡೆಸಿದ ಪತಿ
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ತಿರುಮಲಾಪುರದಲ್ಲಿ ಪತಿ ತನ್ನ ಪತ್ನಿಯನ್ನು ಹಾಡುಹಗಲೇ ಜನರ ಮುಂದೆ ಅಟ್ಟಾಡಿಸಿಕೊಂಡು ಹೋಗಿ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.
Published: 25th June 2023 12:21 PM | Last Updated: 25th June 2023 12:21 PM | A+A A-

ಪತ್ನಿ ಮೇಲೆ ಹಲ್ಲೆ ಮಾಡುತ್ತಿರುವ ಪತಿ ಶ್ರೀನಿವಾಸ್ ದೃಶ್ಯ ವಿಡಿಯೊಗಳಲ್ಲಿ ಸೆರೆಯಾಗಿರುವುದು
ತಿರುಮಲಾಪುರ(ಹಾಸನ): ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ತಿರುಮಲಾಪುರದಲ್ಲಿ ಪತಿ ತನ್ನ ಪತ್ನಿಯನ್ನು ಹಾಡುಹಗಲೇ ಜನರ ಮುಂದೆ ಅಟ್ಟಾಡಿಸಿಕೊಂಡು ಹೋಗಿ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.ಪತಿ ಶ್ರೀನಿವಾಸ್ ಪತ್ನಿ ಸವಿತಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ ಸವಿತಾ ಸಹೋದರಿ ಅನಿತಾ ಕಾರಿನ ಮೇಲೂ ದಾಳಿ ನಡೆಸಿದ್ದಾನೆ.
ಕೌಟುಂಬಿಕ ಕಲಹ ಹಿನ್ನೆಲೆ 2 ವರ್ಷಗಳಿಂದ ಪತಿ, ಪತ್ನಿ ದೂರವಾಗಿ ಆಗಾಗ ಕಲಹಗಳು ನಡೆಯುತ್ತಿದ್ದವು. ಆಸ್ತಿ ವಿಚಾರವಾಗಿ ಪತಿ ವಿರುದ್ಧ ಪತ್ನಿ ಸವಿತಾ ಕೇಸ್ ದಾಖಲಿಸಿ ಕೋರ್ಟ್ ನಲ್ಲಿ ವಿಚಾರಣೆ ಮುಂದುವರಿದಿತ್ತು. ಸವಿತಾ ಪತಿಯಲ್ಲಿ ಜೀವನಾಂಶಕ್ಕೆ ಬೇಡಿಕೆಯಿಟ್ಟಿದ್ದಳು.
ಇದೇ ವಿಚಾರದಲ್ಲಿ ನಿನ್ನೆ ಜಗಳ ತೆಗೆದು ಪತ್ನಿ ಮೇಲೆ ಶ್ರೀನಿವಾಸ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.ಜೈಲಿಗೆ ಹೋಗಲೂ ಬೇಕಾದರೆ ಸಿದ್ಧ ಎಂದು ಶ್ರೀನಿವಾಸ ರೊಚ್ಚಿಗೆದ್ದು ಪತ್ನಿಗೆ ಹೊಡೆಯುತ್ತಿರುವ ದೃಶ್ಯವನ್ನು ನೆರೆದಿದ್ದವರು ಮೊಬೈಲ್ ನಲಲಿ ವಿಡಿಯೊ ಮಾಡಿದ್ದು, ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲು: ಘಟನೆ ಬೆಳಕಿಗೆ ಬರುತ್ತಿದ್ದಂತೆ ಹೊಳೆನರಸೀಪುರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಶ್ರೀನಿವಾಸ್ ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ. ಸದ್ಯ ಸವಿತಾ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.