ಸರ್ಕಾರದ ವಿರುದ್ಧ ನೌಕರರ ಆಕ್ರೋಶ: ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ, ಬಹುತೇಕ ಎಲ್ಲಾ ಸರ್ಕಾರಿ ಸೇವೆಗಳು ಬಂದ್
7ನೇ ವೇತನ ಆಯೋಗ ಜಾರಿ, ನೂತನ ಪಿಂಚಣಿ ಪದ್ಧತಿ (ಎನ್'ಪಿಎಸ್) ರದ್ದು ಮಾಡಬೇಕೆಂದು ಒತ್ತಾಯಿಸಿ ಸರ್ಕಾರಿ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧೀನದಲ್ಲಿರುವ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸರ್ಕಾರಿ ಸೇವೆಗಳು ಬುಧವಾರ ಬಹುತೇಕ ಬಂದ್ ಆಗುವ ಸಾಧ್ಯತೆಗಳಿವೆ.
Published: 01st March 2023 08:26 AM | Last Updated: 01st March 2023 05:14 PM | A+A A-

ಮುಷ್ಕರ ಹಿನ್ನೆಲೆಯಲ್ಲಿ ಮಂಗಳವಾರ ಬೆಂಗಳೂರಿನ ಸರ್ಕಾರಿ ಕಚೇರಿಯ ಹೊರಗೆ ಸರ್ಕಾರಿ ನೌಕರರೊಬ್ಬರು ಪೋಸ್ಟರ್ ಅಂಟಿಸಿತ್ತಿರುವುದು.
ಬೆಂಗಳೂರು: 7ನೇ ವೇತನ ಆಯೋಗ ಜಾರಿ, ನೂತನ ಪಿಂಚಣಿ ಪದ್ಧತಿ (ಎನ್'ಪಿಎಸ್) ರದ್ದು ಮಾಡಬೇಕೆಂದು ಒತ್ತಾಯಿಸಿ ಸರ್ಕಾರಿ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧೀನದಲ್ಲಿರುವ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸರ್ಕಾರಿ ಸೇವೆಗಳು ಬುಧವಾರ ಬಹುತೇಕ ಬಂದ್ ಆಗುವ ಸಾಧ್ಯತೆಗಳಿವೆ.
ವಿಧಾನಸಭೆ ಚುನಾವಣೆಗೆ ಮುನ್ನವೇ ಸರ್ಕಾರಿ ನೌಕರರ ಈ ಮುಷ್ಕರ ಆಡಳಿತಾರೂಢ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ,
ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಜತೆ ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿದರು. ಆದರೆ, ಈ ಸಭೆ ವಿಫಲವಾಗಿದೆ. ತಡರಾತ್ರಿವರೆಗೂ ನಡೆದ ಸರಣಿ ಸಭೆ ಬಳಿಕ ಮುಷ್ಕರಕ್ಕೆ ಕೊಟ್ಟಿರುವ ಕರೆಯನ್ನು ವಾಪಸ್ ಪಡೆಯದಿರಲು ಸರ್ಕಾರಿ ನೌಕರರ ಸಂಘ ನಿರ್ಧರಿಸಿದೆ. ಇದರಿಂದ ರಾಜ್ಯದಲ್ಲಿ ಇಂದು ಬಹುತೇಕ ಎಲ್ಲಾ ಸರ್ಕಾರಿ ಸೇವೆಗಳು ಬಂದ್ ಆಗುವ ಸಾಧ್ಯತೆಗಳಿವೆ.
ಸಭೆಯಲ್ಲಿ ಪಾಲ್ಗೊಂಡಿದ್ದ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು ಮಾತನಾಡಿ, “ಇದು ಕೇವಲ ಮೊದಲ ಸುತ್ತಿನ ಸಭೆಯಷ್ಟೇ. ನಾವೀಗ ಏನನ್ನೂ ನಿರ್ಧರಿಸಿಲ್ಲ. ಸಿಎಂ ಸಕಾರಾತ್ಮಕವಾಗಿದ್ದು, ಸರ್ಕಾರಕ್ಕೆ ಸಮಯ ಬೇಕು ಎಂದು ಹೇಳಿದ್ದಾರೆ. ಆದರೆ, ಈಗಲೇ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ಮುಷ್ಕರ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 87 ಇಲಾಖೆಗಳಿದ್ದು, ಮಂಜೂರಾದ 7.7 ಲಕ್ಷ ಹುದ್ದೆಗಳಲ್ಲಿ 2.5 ಲಕ್ಷ ಖಾಲಿ ಇವೆ. “ಹುದ್ದೆಗಳನ್ನು ಭರ್ತಿ ಮಾಡದ ಕಾರಣ ನಾವು ಹೆಚ್ಚಿನ ಕೆಲಸವನ್ನು ಮಾಡುತ್ತಿದ್ದೇವೆ. ಇಂತಹ ಸಮಸ್ಯೆಗಳ ನಡುವೆಯೂ ಕರ್ನಾಟಕ ಅಭಿವೃದ್ಧಿಯಲ್ಲಿ ಅಗ್ರಸ್ಥಾನದಲ್ಲಿದೆ. ರಾಜ್ಯ ಸರ್ಕಾರದಲ್ಲಿ ಗುತ್ತಿಗೆ ಕಾರ್ಮಿಕರು ಸೇರಿದಂತೆ 10 ಲಕ್ಷಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಮತ್ತು ಇತರ ರಾಜ್ಯಗಳಲ್ಲಿನ ನೌಕರರಿಗೆ ಹೋಲಿಸಿದರೆ ಇಲ್ಲಿನ ನೌಕರರಿಗೆ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ಭರವಸೆಗೆ ಬಗ್ಗದ ನೌಕರರ ಸಂಘ; ಮುಷ್ಕರಕ್ಕೆ ನಿರ್ಧಾರ
ಸಭೆಯಲ್ಲಿ ಮುಖ್ಯಮಂತ್ರಿಗಳು ಹಣ ಮಂಜೂರು ಮಾಡಲಾಗಿದ್ದು, 2023-24ರಲ್ಲಿ ಆಯೋಗದ ವರದಿ ಜಾರಿಯಾಗಲಿದೆ ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದರು. ಆದರೆ, ಬೇಡಿಕೆ ಈಡೇರುವವರೆಗೂ ನಾವು ಮುಷ್ಕರವನ್ನು ಬಿಡುವುದಿಲ್ಲ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಇಲಾಖೆಗಳ ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದ, ಮಧ್ಯಂತರ ವರದಿ ನೀಡುವಂತೆ 7ನೇ ವೇತನ ಆಯೋಗಕ್ಕೆ ಸೂಚನೆ ನೀಡಿದ್ದೇನೆ. ಆದಷ್ಟು ಬೇಗ ವರದಿ ತರಿಸಿ ವೇತನ ಹೆಚ್ಚಳಕ್ಕೆ ಆದೇಶಿಸುತ್ತೇನೆ. ಇದನ್ನೇ ಸರ್ಕಾರಿ ನೌಕರರಿಗೆ ಸಭೆಯಲ್ಲಿ ವಿವರಿಸಿದ್ದೇನೆ. ಮುಷ್ಕರ ವಾಪಸ್ ಪಡೆದುಕೊಳ್ಳುವ ಭರವಸೆ ಇದೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಸಂಘದ ಸದಸ್ಯರೂ ಕೂಡ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನಾವು ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ಈ ಬಗ್ಗೆ ಸರ್ಕಾರ ಹಣಕಾಸು ಇಲಾಖೆ ಜತೆ ಚರ್ಚೆ ನಡೆಸಲಿದೆ ಎಂದರು.
ಸರ್ಕಾರಿ ನೌಕರರು ಮುಷ್ಕರ ನಿರ್ಧಾರದಿಂದ ಹಿಂದೆ ಸರಿಯದ ಹಿನ್ನೆಲೆಯಲ್ಲಿ ಇದು ಬಿಬಿಎಂಪಿ, ಜಿಲ್ಲಾ ಪಂಚಾಯತ್'ಗಳು, ಸರ್ಕಾರಿ ಶಾಲಾ-ಕಾಲೇಜುಗಳು, ವಿಧಾನಸೌಧದ ಕಚೇರಿಗಳು, ವಿಕಾಸಸೌಧ ಮತ್ತು ಎಂಎಸ್ ಬಿಲ್ಡಿಂಗ್, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.