ರೂಪಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ರೋಹಿಣಿ ಸಿಂಧೂರಿ: 1 ಕೋಟಿ ರೂ. ಪರಿಹಾರಕ್ಕೆ ಕೋರಿಕೆ
ಐಪಿಎಸ್ ಅಧಿಕಾರಿ ರೂಪ ಡಿ ಮೌದ್ಗಿಲ್ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸೋಮವಾರ ನಗರದ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
Published: 01st March 2023 08:34 AM | Last Updated: 01st March 2023 05:16 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಐಪಿಎಸ್ ಅಧಿಕಾರಿ ರೂಪ ಡಿ ಮೌದ್ಗಿಲ್ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸೋಮವಾರ ನಗರದ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ನಗರದ 24ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ರೋಹಿಣಿ ಸಿಂಧೂರಿಯವರು ದೂರು ದಾಖಲಿಸಲಾಗಿದೆ.
ರೂಪಾ ಮೌದ್ಗಿಲ್ ಅವರು ಫೇಸ್‌ಬುಕ್, ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಮಾನಹಾನಿ ಮಾಡಿದ್ದಾರೆ. ಹಾಗಾಗಿ, ಅವರಿಂದ ಒಂದು ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ಕೊಡಿಸಬೇಕು. ಅವರ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು ಎಂದು ಕೋರಿ ರೋಹಿಣಿ ಸಿಂಧೂರಿ ನಗರದ 24ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಕೋರ್ಟ್‌ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಮೊಕದ್ದಮೆಯ ವಿಚಾರಣೆಯನ್ನು ನ್ಯಾಯಾಧೀಶ ಬಿ ಸಿ ಚಂದ್ರಶೇಖರ ಅವರು ಮಂಗಳವಾರ ನಡೆಸಿದರು. ಈ ವೇಳೆ ರೋಹಿಣಿ ಪರ ವಕೀಲರು, ದೂರುದಾರರು ಚಾಮರಾಜನಗರ ಹಾಗೂ ಮೈಸೂರಿನ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ವಿರುದ್ಧ ಆರೋಪಿ ಡಿ.ರೂಪಾ ಕಪೋಲಕಲ್ಪಿತ ಆರೋಪಗಳನ್ನು ಮಾಡಿದ್ದಾರೆ. ಹಾಗಾಗಿ, ಈ ಖಾಸಗಿ ದೂರನ್ನು ವಿಚಾರಣೆಗೆ ಅಂಗೀಕರಿಸಬೇಕು. ಆರೋಪಿ ರೂಪಾ ಮೌದ್ಗಿಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಇದನ್ನೂ ಓದಿ: 'ರೆಬೆಲ್' ರೂಪಾ v/s 'ಸುಂದರಿ' ಸಿಂಧೂರಿ: ಸಿನಿಮಾ ಕಥೆಯಾಗಿ ತೆರೆ ಮೇಲೆ ಬರಲಿದೆ ಐಎಎಸ್-ಐಪಿಎಸ್ ಅಧಿಕಾರಿಗಳ ಜಟಾಪಟಿ!
ಅರ್ಜಿದಾರರ ವಾದವನ್ನು ಪರಿಗಣಿಸಿರುವ ನ್ಯಾಯಾಲಯವು ಮೊಕದ್ದಮೆಯನ್ನ ಹೆಚ್ಚಿನ ವಿಚಾರಣೆಗಾಗಿ ಮಾರ್ಚ್ 3ಕ್ಕೆ ಮುಂದೂಡಿದೆ.
ರೂಪಾ ಅವರು ಇದೇ ಫೆಬ್ರವರಿ 18 ಮತ್ತು 19ರಂದು ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ನನ್ನ ವಿರುದ್ಧ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ವಿದ್ಯುನ್ಮಾನ ಮಾಧ್ಯಮದಲ್ಲೂ ಹೇಳಿಕೆ ನೀಡಿದ್ದಾರೆ. ಆ ಆರೋಪಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ನನ್ನ ತೇಜೋವಧೆ ಮಾಡುವ ದುರದ್ದೇಶದಿಂದಲೇ ರೂಪ ಈ ಕೃತ್ಯ ಎಸಗಿದೆ. ಅದು ನನ್ನ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿ, ಮಾನಸಿಕ ಯಾತನೆ ಉಂಟು ಮಾಡಿವೆ ಎಂದು ದೂರಿನಲ್ಲಿ ರೋಹಿಣಿ ವಿವರಿಸಿದ್ದಾರೆ.
ಅಲ್ಲದೆ, ಭಾರತೀಯ ನಾಗರಿಕ ಸೇವಾ ನಿಯಮಗಳಿಗೆ ವಿರುದ್ಧವಾಗಿ ಮಾಧ್ಯಮಗಳ ಮುಂದೆ ಬಹಿರಂಗವಾಗಿ ನನ್ನನ್ನು ಟೀಕೆ ಮಾಡುವ ಮೂಲಕ ನನಗೆ ಮಾತ್ರವಲ್ಲದೆ ಸರ್ಕಾರಕ್ಕೂ ಮುಜುಗುರ ಉಂಟು ಮಾಡಿದ್ದಾರೆ. ಆದ್ದರಿಂದ, ನನಗಾಗಿರುವ ಮಾನಸಿಕ ಯಾತನೆ ಮತ್ತು ಮಾನನಷ್ಟಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ಕೊಡಿಸಿಕೊಡಬೇಕು. ರೂಪಾ ಅವರ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರೆ ರೋಹಿಣಿ ಸಿಂಧೂರಿ ಕೋರಿದ್ದಾರೆ.