ಗುತ್ತಿಗೆ ನೌಕರರ ವೇತನ ಶೇ.15 ರಷ್ಟು ಹೆಚ್ಚಳ, ಏಪ್ರಿಲ್ 1 ರಿಂದ ಜಾರಿ
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಭರವಸೆ ನೀಡಿದ್ದಂತೆಯೇ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ನೌಕರರ ವೇತನವನ್ನು ಶೇ.15 ರಷ್ಟು ಹೆಚ್ಚಿಸಲಾಗಿದೆ.
Published: 04th March 2023 05:37 PM | Last Updated: 04th March 2023 05:37 PM | A+A A-

ಸುಧಾಕರ್
ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಭರವಸೆ ನೀಡಿದ್ದಂತೆಯೇ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ನೌಕರರ ವೇತನವನ್ನು ಶೇ.15 ರಷ್ಟು ಹೆಚ್ಚಿಸಲಾಗಿದೆ.
ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದು, ಏಪ್ರಿಲ್ 1 ರಿಂದ ಇದು ಅನ್ವಯವಾಗಲಿದೆ.
ಇದನ್ನು ಓದಿ: ಶೇ.17ರಷ್ಟು ವೇತನ ಹೆಚ್ಚಳ: ಸಿಎಂ ಬೊಮ್ಮಾಯಿಗೆ ಸರ್ಕಾರಿ ನೌಕರರ ಸಂಘದಿಂದ ಅಭಿನಂದನೆ
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕೆಲಸ ಮಾಡುವ ಗುತ್ತಿಗೆ ನೌಕರರಿಗೆ ವೇತನ ಹೆಚ್ಚಳ ಮಾಡುವ ಆಗ್ರಹ ಬಂದಿತ್ತು. ಈ ವೇಳೆ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ವೇತನ ಹೆಚ್ಚಳ ಮಾಡಲು ಕ್ರಮ ವಹಿಸುವ ಬಗ್ಗೆ ಆಶ್ವಾಸನೆ ನೀಡಿದ್ದರು.
ಕೆಲಸಕ್ಕೆ ಸೇರ್ಪಡೆಯಾಗುವ ಸಂದರ್ಭದಲ್ಲಿ 20 ಸಾವಿರ ರೂ. ಗಿಂತ ಕಡಿಮೆ ಸಂಭಾವನೆ ಇರುವ ನೌಕರರಿಗೆ ಶೇ.15 ರಷ್ಟು ಹೆಚ್ಚಳವಾಗಲಿದೆ. 5 ವರ್ಷಕ್ಕಿಂತ ಹೆಚ್ಚು ಕಾಲ ನಿರಂತರವಾಗಿ ಕಾರ್ಯನಿರ್ವಹಿಸಿದ ಎನ್‌ಎಚ್‌ಎಂ ಮೆಡಿಕಲ್ ಅಧಿಕಾರಿಗಳಿಗೆ(ಎಂಬಿಬಿಎಸ್, ಆಯುಷ್, ಆರ್‌ಬಿಎಸ್‌ಕೆ, ದಂತವೈದ್ಯ ಸರ್ಜನ್‌ಗಳು) ಕೂಡ ಶೇ.15 ರಷ್ಟು ಸಂಭಾವನೆ ಹೆಚ್ಚಿಸಲಾಗಿದೆ.
ಎನ್‌ಎಚ್‌ಎಂ ಗುತ್ತಿಗೆ ತಜ್ಞರಿಗೆ, 3-5 ವರ್ಷಗಳ ಸೇವೆಯಲ್ಲಿರುವವರಿಗೆ ಶೇ.5, 5-10 ವರ್ಷಗಳ ಸೇವೆಯಲ್ಲಿರುವವರಿಗೆ ಶೇ.10 ಹಾಗೂ 10 ವರ್ಷಕ್ಕೂ ಅಧಿಕ ಕಾಲ ಸೇವೆಯಲ್ಲಿರುವವರಿಗೆ ಶೇ.15 ರಷ್ಟು ಸಂಭಾವನೆ ಹೆಚ್ಚಳ ಮಾಡಲಾಗಿದೆ.
ನೌಕರರಿಗೆ ಮಾತು ನೀಡಿದ್ದಂತೆಯೇ ಕ್ರಮ ವಹಿಸಲಾಗಿದೆ. ಈ ಮೂಲಕ ನಮ್ಮ ಸರ್ಕಾರ ನೌಕರರ ಕ್ಷೇಮದ ಬದುಕಿಗೆ ಸದಾ ಶ್ರಮಿಸುತ್ತದೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.