ಬೆಂಗಳೂರು: ಅಕ್ರಮ ಅಡುಗೆ ಅನಿಲ ರಿಫಿಲ್ಲಿಂಗ್ ದಂಧೆ; ಸ್ಫೋಟದಿಂದ ನೆರೆಮನೆಯಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿ ಸಾವು!

ಶೆಡ್‌ವೊಂದರಲ್ಲಿ ಅಡುಗೆ ಅನಿಲ ಅಕ್ರಮ ರಿಫಿಲ್ಲಿಂಗ್ ವೇಳೆ ಸ್ಫೋಟ ಸಂಭವಿಸಿದ್ದು, ರಸ್ತೆಯಲ್ಲಿ ಆಟವಾಡುತ್ತಿದ್ದ 11 ವರ್ಷದ ಬಾಲಕ ಮಹೇಶ್ ಎಂಬಾತ ಮೃತಪಟ್ಟಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಶೆಡ್‌ವೊಂದರಲ್ಲಿ ಅಡುಗೆ ಅನಿಲ ಅಕ್ರಮ ರಿಫಿಲ್ಲಿಂಗ್ ವೇಳೆ ಸ್ಫೋಟ ಸಂಭವಿಸಿದ್ದು, ರಸ್ತೆಯಲ್ಲಿ ಆಟವಾಡುತ್ತಿದ್ದ 11 ವರ್ಷದ ಬಾಲಕ ಮಹೇಶ್ ಎಂಬಾತ ಮೃತಪಟ್ಟಿದ್ದಾನೆ.

ಹೆಬ್ಬಾಳ ಸಮೀಪದ ಗುಡ್ಡದಹಳ್ಳಿಯ ಮನೆಯೊಂದರ ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಘಟಕದಲ್ಲಿ ಭಾನುವಾರ ಬೆಳಗ್ಗೆ ಸ್ಫೋಟ ಸಂಭವಿಸಿ  ಬಾಲಕ ಮಹೇಶ್ ಸಾವನ್ನಪ್ಪಿದ್ದಾನೆ.  ಸರ್ಕಾರಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ. ಇವರ ತಂದೆ ತಾಯಿ ಯಾದಗಿರಿಯ ಮಲ್ಲಪ್ಪ ಮತ್ತು ಸರಸ್ವತಿ ಗುಡ್ಡದಹಳ್ಳಿಯಲ್ಲಿ ದಿನಗೂಲಿ ಕಾರ್ಮಿಕರಾಗಿದ್ದಾರೆ  ಎಂದು ಹೆಬ್ಬಾಳ ಪೊಲೀಸರು ತಿಳಿಸಿದ್ದಾರೆ.

ಕೆಲಸ ಹುಡುಕಿಕೊಂಡು ಕೆಲ ವರ್ಷಗಳ ಹಿಂದೆಯೇ ದಂಪತಿ ಬೆಂಗಳೂರಿಗೆ ಬಂದಿದ್ದರು. ಗುಡ್ಡದಹಳ್ಳಿಯಲ್ಲಿ ವಾಸವಿದ್ದರು. ಬಾಲಕ ಮಹೇಶ್, ಚೋಳನಾಯಕನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ. ಗುಡ್ಡದಹಳ್ಳಿಯಲ್ಲಿರುವ ರಮೇಶ್ ಎಂಬುವರಿಗೆ ಸೇರಿದ್ದ ಶೆಡ್‌ ಬಾಡಿಗೆ ಪಡೆದಿದ್ದ ಲಿಯಾಕತ್ ಎಂಬಾತ, ಅಕ್ರಮವಾಗಿ ಅಡುಗೆ ಅನಿಲ ರಿಫಿಲ್ಲಿಂಗ್ ಮಾಡುತ್ತಿದ್ದ. ಶೆಡ್‌ ಪಕ್ಕದ ಮನೆಯಲ್ಲಿ ಪೋಷಕರ ಜೊತೆ ಮಹೇಶ್ ವಾಸವಿದ್ದ’ ಎಂದು ತಿಳಿಸಿದರು.

‘ಭಾನುವಾರ ಬೆಳಿಗ್ಗೆ ಮನೆ ಎದುರು ಮಹೇಶ್ ಆಟವಾಡುತ್ತಿದ್ದ. ಆಗಾಗ, ಮನೆ ಪಕ್ಕದ ಶೆಡ್‌ ಎದುರಿನ ರಸ್ತೆಗೂ ಹೋಗಿ ಬರುತ್ತಿದ್ದ. ಬೆಳಿಗ್ಗೆ ಶೆಡ್‌ಗೆ ಬಂದಿದ್ದ ಲಿಯಾಕತ್, ದೊಡ್ಡ ಸಿಲಿಂಡರ್‌ನಿಂದ ಸಣ್ಣ ಸಿಲಿಂಡರ್‌ಗೆ ಅಕ್ರಮವಾಗಿ ಅಡುಗೆ ಅನಿಲ ರಿಫಿಲ್ಲಿಂಗ್ ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿತ್ತು’ ಎಂದು ಹೇಳಿದರು.

ಭಾರೀ ಸ್ಫೋಟದ ಸದ್ದು ಕೇಳಿದ ನಿವಾಸಿಗಳು ಮನೆಗೆ ಧಾವಿಸಿದ್ದಾರೆ. ಅವರು ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ಹುಡುಗನನ್ನು ಕಂಡು ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ಅವನು ಸತ್ತನೆಂದು ಘೋಷಿಸಲಾಯಿತು.

ಸ್ಫೋಟದ ರಭಸಕ್ಕೆ ಹಾರಿದ್ದ ಸಿಲಿಂಡರ್, ಮಹೇಶ್‌ಗೆ ತಾಗಿತ್ತು. ಅದರ ಜೊತೆ ಬೆಂಕಿಯೂ ಹೊತ್ತಿಕೊಂಡಿತ್ತು. ಇದರಿಂದಾಗಿ ತೀವ್ರ ಗಾಯಗೊಂಡು ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಸ್ಫೋಟದ ಸಂದರ್ಭದಲ್ಲಿ ಶೆಡ್‌ನಲ್ಲಿದ್ದವರಿಗೆ ಯಾವುದೇ ತೊಂದರೆ ಆಗಿಲ್ಲ. ಅವಘಡದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಶೆಡ್ ಮಾಲೀಕ ರಮೇಶ್ ಹಾಗೂ ಲಿಯಾಕತ್ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com