ಕೆಎಸ್ ಡಿಎಲ್ ನಲ್ಲಿ ಮತ್ತೊಂದು ಭ್ರಷ್ಟಾಚಾರ, 20 ಕೋಟಿ ರೂ ಮೌಲ್ಯದ ಅಕ್ರಮ ಬಹಿರಂಗ!

ಗುತ್ತಿಗೆಗಾಗಿ ಹಣದ ಹಗರಣದ ಮಸಿ ಮೆತ್ತಿಕೊಂಡಿರುವ ಕರ್ನಾಟಕ ಸಾಬೂನು ಹಾಗೂ ಡಿಟರ್ಜೆಂಟ್ ಲಿಮಿಟೆಡ್ ನಲ್ಲಿ ಮತ್ತೊಂದು ಭ್ರಷ್ಟಾಚಾರ ಪ್ರಕರಣ ಬಯಲಾಗಿದೆ. 
ಕೆಎಸ್ ಡಿಎಲ್ ಹಗರಣ (ಸಂಗ್ರಹ ಚಿತ್ರ)
ಕೆಎಸ್ ಡಿಎಲ್ ಹಗರಣ (ಸಂಗ್ರಹ ಚಿತ್ರ)

ಬೆಂಗಳೂರು: ಗುತ್ತಿಗೆಗಾಗಿ ಹಣದ ಹಗರಣದ ಮಸಿ ಮೆತ್ತಿಕೊಂಡಿರುವ ಕರ್ನಾಟಕ ಸಾಬೂನು ಹಾಗೂ ಡಿಟರ್ಜೆಂಟ್ ಲಿಮಿಟೆಡ್ ನಲ್ಲಿ ಮತ್ತೊಂದು ಭ್ರಷ್ಟಾಚಾರ ಪ್ರಕರಣ ಬಯಲಾಗಿದೆ. 

ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ತನ್ನ ಉತ್ಪನ್ನಗಳಿಗೆ  ಕಳಪೆ ಗುಣಮಟ್ಟದ ಕಚ್ಚಾ ವಸ್ತುಗಳನ್ನು ಖರೀದಿ ಸಂಬಂಧ 20 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಈಗ ಸರ್ಕಾರದ ಡಾಕ್ಯುಮೆಂಟ್ ನಿಂದಲೇ ಬಹಿರಂಗವಾಗಿದೆ. ಕೆಎಸ್ ಡಿಎಲ್ ಗೆ ನ ನಿರ್ದೇಶಕರಿಗೆ ಫೆ.28 ರಂದು ಪತ್ರ ಬರೆದಿದ್ದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, 3 ವರ್ಷಗಳ ಹಿಂದೆ ಕಚ್ಚಾ ವಸ್ತುಗಳ ಖರೀದಿಯಲ್ಲಿ ನಡೆದಿದ್ದ 20 ಕೋಟಿ ರೂಪಾಯಿಗೂ ಹೆಚ್ಚಿನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದರು.
 
ಇದಾದ ಕೆಲವೇ ದಿನಗಳಲ್ಲಿ ಕೆಎಸ್ ಡಿಎಲ್ ಅಧ್ಯಕ್ಷ ಹಾಗೂ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಅವರು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಲೋಕಾಯುಕ್ತ ಸಂಸ್ಥೆ ಮುಂದುವರೆಸಿದ್ದ ದಾಳಿಯಲ್ಲಿ ಮಾಡಾಳ್ ಕುಟುಂಬಕ್ಕೆ ಸೇರಿದ ಮನೆಯಲ್ಲಿ 8.23 ಕೋಟಿ ರೂಪಾಯಿ ನಗದು, ಅಪಾರ ಪ್ರಮಾಣದ ಚಿನ್ನಾಭರಣ, ಹೂಡಿಕೆಗಳು ಪತ್ತೆಯಾಗಿತ್ತು. 

ಈಗ ಹೊಸದಾಗಿ ಬೆಳಕಿಗೆ ಬಂದಿರುವ ಹಗರಣ ನಡೆದಿರುವುದು 2020 ರಲ್ಲಿ ಹಾಗೂ ಅದರ ತನಿಖೆಗಾಗಿ ತಂಡವನ್ನು ನೇಮಿಸಲಾಗಿತ್ತು. ತನಿಖೆಯಲ್ಲಿ, ಕೆಎಸ್ ಡಿಎಲ್ ನಲ್ಲಿ ಉನ್ನತ ಸ್ಥಾನಗಳನ್ನು ಹೊಂದಿರುವ ಕನಿಷ್ಠ ನಾಲ್ವರು ಅಧಿಕಾರಿಗಳು ಮಾನ್ಯತೆ ಪಡೆಯದ ವಿಶ್ವವಿದ್ಯಾಲಯದ ಪದವಿಯ ಆಧಾರದಲ್ಲಿ ಈ ಹುದ್ದೆ ಪಡೆದಿದ್ದಾರೆ ಎಂಬುದು ತನಿಖಾಧಿಕಾರಿ ಬೆಳಕಿಗೆ ಬಂದಿದ್ದು, ತನಿಖಾಧಿಕಾರಿಗಳು, ಸೂಕ್ತ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದ್ದಾರೆ.

ಮೇ.31, 2021 ರ ಒಳಗೆ ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಕೆಎಸ್ ಡಿಎಲ್ ಗೆ ಸರ್ಕಾರ ಸೂಚಿಸಿತ್ತು. ಆದರೆ ಕ್ರಮ ಕೈಗೊಂಡ ಬಗ್ಗೆ ಸರ್ಕಾರಕ್ಕೆ ಯಾವುದೇ ವರದಿಯೂ ಸಲ್ಲಿಕೆಯಾಗಿಲ್ಲ. ಕೆಎಸ್ ಡಿಎಲ್ ಅಕ್ರಮಗಳೆಡೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಸರ್ಕಾರಕ್ಕೆ ತಿಳಿಸಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com