ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ: 5.21 ಕೋಟಿ ರೂ. ಮೊತ್ತದ ಆಸ್ತಿ ಇಡಿ ವಶಕ್ಕೆ

ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಆರೋಪಿತ ವ್ಯಕ್ತಿಯ ಮಾಲೀಕತ್ವದ ರೂ. 5.21 ಕೋಟಿ ಮೊತ್ತದ ಆರು ಸ್ಥಿರಾಸ್ತಿಯನ್ನು ಇಡಿ ಬೆಂಗಳೂರು ವಲಯ ಅಧಿಕಾರಿ ವಶಕ್ಕೆ ಪಡೆದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಆರೋಪಿತ ವ್ಯಕ್ತಿಯ ಮಾಲೀಕತ್ವದ ರೂ. 5.21 ಕೋಟಿ ಮೊತ್ತದ ಆರು ಸ್ಥಿರಾಸ್ತಿಯನ್ನು ಇಡಿ ಬೆಂಗಳೂರು ವಲಯ ಅಧಿಕಾರಿ ವಶಕ್ಕೆ ಪಡೆದಿದ್ದಾರೆ.

ವಿವಿಧ ವ್ಯಾಪಾರಿಗಳು ಅಕ್ರಮವಾಗಿ ನಡೆಸಿದ ಕಬ್ಬಿಣದ ಅದಿರು ವಹಿವಾಟಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಸುಪ್ರೀಂಕೋರ್ಟ್ ನಿರ್ದೇಶನ, ಗಣಿ ಮತ್ತು ಖನಿಜಗಳ ಅಭಿವೃದ್ಧಿ ನಿಯಂತ್ರಣ ಕಾಯ್ಜೆ, 1957 ಮತ್ತು 1988ರ ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ  ಮಿನರಲ್ ಎಂಟರ್‌ಪ್ರೈಸಸ್ ಲಿಮಿಟೆಡ್, ಅಪರಿಚಿತ ಸರ್ಕಾರಿ ನೌಕರರು ಮತ್ತು ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಲೋಕಾಯುಕ್ತದ ವಿಶೇಷ ತನಿಖಾ ತಂಡ ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ಪಿಎಂಎಲ್‌ಎ ಅಡಿಯಲ್ಲಿ ತನಿಖೆಯನ್ನು ಪ್ರಾರಂಭಿಸಿತ್ತು.

ತನಿಖೆಯ ಸಮಯದಲ್ಲಿ, ಕಾನೂನುಬಾಹಿರವಾಗಿ ಗಣಿಗಾರಿಕೆ, ಕಬ್ಬಿಣ ಅದಿರಿನ ಸಾಗಣೆ ಮತ್ತು ಮಾನ್ಯ ಪರವಾನಗಿಗಳಿಲ್ಲದೆ ವ್ಯವಾಹರ ಮಾಡಿರುವುದು ಗಮನಕ್ಕೆ ಬಂದಿದೆ, ಇದು ಬೊಕ್ಕಸಕ್ಕೆ ನಷ್ಟವನ್ನು ಉಂಟುಮಾಡಿದೆ. ಅಂತಹ ಅಕ್ರಮ ಕಬ್ಬಿಣದ ಅದಿರಿನ ಮೂಲವು  ಬಿಪಿ ಆನಂದ್ ಕುಮಾರ್, ಪಾಂಡುರಂಗ ಸಿಂಗ್ ಮತ್ತು ಗೋಪಾಲ್ ಸಿಂಗ್ ಪಾಲುದಾರಿಕೆ ಹೊಂದಿರುವ ಎಸ್‌ಬಿ ಮಿನರಲ್ಸ್ ಒಡೆತನದ ಗಣಿ, ಶಾಂತಲಕ್ಷ್ಮಿ ಮತ್ತು ಜೆ ಮಿಥಿಲೇಶ್ವರ್ ಒಡೆತನದ  ಗಣಿ ಮತ್ತು BMM ಇಸ್ಪಾಟ್ ಲಿಮಿಟೆಡ್ ಮತ್ತು ದಿನೇಶ್ ಕುಮಾರ್ ಸಿಂಘಿ ಪಾಲುದಾರಿಕೆ ಹೊಂದಿರುವ ಭಾರತ್ ಮೈನ್ಸ್  ಮಿನರಲ್ಸ್  ಎಂಬುದು ಅಧಿಕೃತ ಹೇಳಿಕೆಯಿಂದ ತಿಳಿದುಬಂದಿದೆ. 

ಈ ಹಿಂದೆ, ಸುಪ್ರೀಂ ಕೋರ್ಟ್ ನೇಮಿಸಿದ ಕೇಂದ್ರೀಯ ಸಬಲೀಕರಣ ಸಮಿತಿಯು (CEC) ರಾಜ್ಯದಲ್ಲಿ ಗಣಿಗಾರಿಕೆ ಗುತ್ತಿಗೆಯ ಸಮೀಕ್ಷೆಯ ಸಮಯದಲ್ಲಿ, ಈ ನಾಲ್ಕು ಗಣಿಗಳಿಗೆ ಸಂಬಂಧಿಸಿದಂತೆ ಸಮಗ್ರ ಅಕ್ರಮ,ಅತಿಕ್ರಮಣವನ್ನು ಕಂಡುಹಿಡಿದಿದ್ದು, ಅವುಗಳನ್ನು ಸಿ ವರ್ಗದಲ್ಲಿ ಇರಿಸಿದೆ ಮತ್ತು ಸಿಇಸಿ, ಶಿಫಾರಸಿನ ಮೇರೆಗೆ ಸುಪ್ರೀಂಕೋರ್ಟ್ ನ್ಯಾಯಾಲಯ ಅವರ ಪರವಾನಗಿಯನ್ನು ರದ್ದುಗೊಳಿಸಿದೆ.  

ಆರೋಪಿಗಳು ಸರ್ಕಾರದ ಬೊಕ್ಕಸಕ್ಕೆ ಅನುಚಿತವಾದ ನಷ್ಟವನ್ನು ಉಂಟುಮಾಡಿದ್ದಾರೆ ಮತ್ತು ಅನುಗುಣವಾದ ಅಕ್ರಮ ಲಾಭವನ್ನು ಹೊಂದಿದ್ದಾರೆ ಎಂದು ಪಿಎಂಎಲ್‌ಎ ಅಡಿಯಲ್ಲಿ ನಡೆಸಿದ ತನಿಖೆ ದೃಢಪಡಿಸಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com