ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಮಳೆ ನೀರು ಅವಾಂತರ: ಕಾರಣ ತಿಳಿಸಿದ ಕೇಂದ್ರ ಸಚಿವಾಲಯ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ವತಿಯಿಂದ ಇತ್ತೀಚೆಗೆ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ರಾಮನಗರದ ಬಳಿ ಇತ್ತೀಚೆಗೆ ಸುರಿದ ಮಳೆಗೆ ನೀರು ನಿಂತು ಹೊಳೆಯಂತಾಗಿತ್ತು. ಭಾರೀ ಅವಾಂತರ ಸೃಷ್ಟಿಯಾಗಿತ್ತು.
ರಾಮನಗರ ಬಳಿ ನೀರು ನಿಂತಿರುವುದು
ರಾಮನಗರ ಬಳಿ ನೀರು ನಿಂತಿರುವುದು

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ವತಿಯಿಂದ ಇತ್ತೀಚೆಗೆ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ರಾಮನಗರದ ಬಳಿ ಇತ್ತೀಚೆಗೆ ಸುರಿದ ಮಳೆಗೆ ನೀರು ನಿಂತು ಹೊಳೆಯಂತಾಗಿತ್ತು. ಭಾರೀ ಅವಾಂತರ ಸೃಷ್ಟಿಯಾಗಿತ್ತು. ಈ ಬಗ್ಗೆ ವಿರೋಧ ಪಕ್ಷಗಳಿಂದ, ಸಾರ್ವಜನಿಕರಿಂದ ತೀವ್ರ ಟೀಕೆ ಕೂಡ ವ್ಯಕ್ತವಾಗಿತ್ತು. ಇದಕ್ಕೆ ಕೇಂದ್ರ ಹೆದ್ದಾರಿ ಸಚಿವಾಲಯ ಸ್ಪಷ್ಟೀಕರಣ ನೀಡಿದೆ. 

`ರಾಮನಗರ ಸಮೀಪದ ಗ್ರಾಮಸ್ಥರು ಚರಂಡಿಯ ಮಾರ್ಗವನ್ನು ತಡೆಹಿಡಿದಿದ್ದರು. ಆದ್ದರಿಂದ ರಸ್ತೆಯಲ್ಲಿ ನೀರು ನಿಲ್ಲುವಂತಾಯಿತು ಎಂದು ಎಂದು ಸರ್ಕಾರ ಹೇಳಿಕೊಂಡಿದೆ. ಸಚಿವಾಲಯವು ಹೇಳಿಕೆಯಲ್ಲಿ, “ಮಾದಾಪುರ ಮತ್ತು ಸುತ್ತಮುತ್ತಲ ಇತರ ಗ್ರಾಮಸ್ಥರು ಅಡ್ಡದಾರಿ ನಿರ್ಮಿಸಿಕೊಂಡು ಆ ಮೂಲಕ ಪ್ರವೇಶಿಸಲು ಪ್ರಯತ್ನಿಸಿದ್ದರು. ಅದಕ್ಕಾಗಿ 3 ಮೀಟರ್ ಅಗಲಕ್ಕೆ ಚರಂಡಿಯನ್ನು ಮಣ್ಣಿನಿಂದ ಮುಚ್ಚಿದ್ದರು. ಅವರು ನಿರ್ಮಿಸಿದ್ದ ಅಡ್ಡದಾರಿಯನ್ನು ಮಾರ್ಚ್ 18 ರಂದು ತೆಗೆದುಹಾಕಿದ್ದು, ಚರಂಡಿಮಾರ್ಗವನ್ನು ಮುಕ್ತಗೊಳಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ಶನಿವಾರ ಬೆಳಗ್ಗೆ ಬೆಂಗಳೂರಿನ ಹೊರವಲಯದಲ್ಲಿ ಮಳೆ ಸುರಿದ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ರಾಮನಗರದ ರಸ್ತೆಯಲ್ಲಿ ನೀರು ತುಂಬಿತ್ತು. ವಾಹನಗಳು ಎಕ್ಸ್‌ಪ್ರೆಸ್‌ವೇಯಲ್ಲಿ ಮೊಣಕಾಲು ಆಳದ ನೀರಿನ ಮೂಲಕ ಚಲಿಸುತ್ತಿರುವುದು ಕಂಡುಬಂದಿದ್ದು, ಈ 119 ಕಿಲೋಮೀಟರ್ ಎಕ್ಸ್‌ಪ್ರೆಸ್‌ವೇ ಗುಣಮಟ್ಟದ ಬಗ್ಗೆ ಪ್ರಶ್ನೆಯನ್ನು ಎತ್ತಿದೆ. ಚುನಾವಣೆಗೆ ಮುನ್ನ ಬಿಜೆಪಿ ತರಾತುರಿಯಲ್ಲಿ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಮಾಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಮಾರ್ಚ್ 12 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಡ್ಯದಲ್ಲಿ ಸಾರ್ವಜನಿಕ ಸಭೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದರು. ಅದನ್ನು ಕರ್ನಾಟಕದ ಜನರಿಗೆ 'ಉಡುಗೊರೆ' ಎಂದು ಕರೆದರು. ಎಕ್ಸ್‌ಪ್ರೆಸ್‌ವೇ ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು 75 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ಎರಡೂ ನಗರಗಳ ನಡುವೆ ಪ್ರಯಾಣಿಸಲು ಇದು ಸರಿಸುಮಾರು ಮೂರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ಯೋಜನೆಯು 11 ಮೇಲ್ಸೇತುವೆಗಳು, 64 ಅಂಡರ್‌ಪಾಸ್‌ಗಳು, ಐದು ಬೈಪಾಸ್‌ಗಳು, 42 ಸಣ್ಣ ಸೇತುವೆಗಳನ್ನು ಒಳಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com