ಆಸ್ತಿ ಪತ್ರಗಳ ನಷ್ಟ: 5 ಲಕ್ಷ ರೂಪಾಯಿ ನೀಡಲು ಬ್ಯಾಂಕ್ ಗೆ ಗ್ರಾಹಕರ ಆಯೋಗ ಸೂಚನೆ
ಸಂಸ್ಥೆಯೊಂದರ ಮಾಲೀಕರಿಗೆ ಸೇರಿದ, ಬ್ಯಾಂಕ್ ನಲ್ಲಿ ಅಡ ಇಡಲಾಗಿದ್ದ ಆಸ್ತಿ ಪತ್ರಗಳು ನಷ್ಟವಾಗಿರುವುದಕ್ಕೆ ಮಾಲಿಕರಿಗೆ 5.30 ಲಕ್ಷ ರೂಪಾಯಿ ಮೊತ್ತವನ್ನು ನೀಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಸೂಚಿಸಿದೆ.
Published: 21st March 2023 03:40 PM | Last Updated: 21st March 2023 03:40 PM | A+A A-

ಬ್ಯಾಂಕ್ (ಸಾಂಕೇತಿಕ ಚಿತ್ರ)
ಬೆಂಗಳೂರು: ಸಂಸ್ಥೆಯೊಂದರ ಮಾಲೀಕರಿಗೆ ಸೇರಿದ, ಬ್ಯಾಂಕ್ ನಲ್ಲಿ ಅಡ ಇಡಲಾಗಿದ್ದ ಆಸ್ತಿ ಪತ್ರಗಳು ನಷ್ಟವಾಗಿರುವುದಕ್ಕೆ ಮಾಲಿಕರಿಗೆ 5.30 ಲಕ್ಷ ರೂಪಾಯಿ ಮೊತ್ತವನ್ನು ನೀಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್)ಗೆ ಮೂರನೇ ಹೆಚ್ಚುವರಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.
ಸಿರಿ ಮಾರ್ಕೆಂಟಿಂಗ್ ನ ಮಾಲಿಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಆಯೋಗ, ಆಸ್ತಿ ಪತ್ರ ನಷ್ಟವಾಗಿರುವುದರಿಂದ ಆಸ್ತಿಯ ಮಾರುಕಟ್ಟೆ ಬೆಲೆಯಲ್ಲಿ ಅವರಿಗೆ ಉಂಟಾಗುವ ನಷ್ಟಕ್ಕೆ ಪರಿಹಾರವಾಗಿ 5 ಲಕ್ಷ ರೂಪಾಯಿ, ಅನಾನುಕೂಲತೆ ಮತ್ತು ಕಿರುಕುಳ, ಮತ್ತು ಮಾನಸಿಕ ಸಂಕಟಕ್ಕೆ ರೂ 20,000 ಮತ್ತು ವ್ಯಾಜ್ಯ ವೆಚ್ಚಕ್ಕಾಗಿ ರೂ 10,000 ರೂಪಾಯಿ ಪಾವತಿಸುವಂತೆ ನಿರ್ದೇಶನ ನೀಡಿದೆ.
ಮೂಲ ಮಾರಾಟ ಡೀಡ್ ಪತ್ರದ ಒಪ್ಪಂದ, ಹಕ್ಕು ಪತ್ರ, ಠೇವಣಿ ಜ್ಞಾಪಕ ಪತ್ರ, ಗುತ್ತಿಗೆ-ಮಾರಾಟದ ಪತ್ರ ಮತ್ತು ಮೂಲ ಮಾರಾಟ ಪತ್ರವು ತನ್ನ ವಶದಲ್ಲಿದ್ದಾಗ ಕಳೆದುಹೋಗಿದೆ ಎಂಬುದನ್ನು ತಿಳಿಸುವ ಜಾಹೀರಾತನ್ನು "ಬ್ಯಾಂಕ್ ತನ್ನ ವೆಚ್ಚದಲ್ಲಿ ಎರಡು ದೈನಿಕ ಭಾಷೆಗಳ ಪತ್ರಿಕೆಗಳಲ್ಲಿ ನೀಡಬೇಕು. ಬ್ಯಾಂಕ್ ಮತ್ತು ದೂರುದಾರರು ಸಂಬಂಧಪಟ್ಟ ಅಧಿಕಾರಿಗಳಿಂದ ಆ ದಾಖಲೆಗಳ ಪ್ರಮಾಣೀಕೃತ ಪ್ರತಿಯನ್ನು ಪಡೆಯಬಹುದು. ದಾಖಲೆಗಳು ಪತ್ತೆಯಾದಲ್ಲಿ, ಬ್ಯಾಂಕ್ ಅದನ್ನು ದೂರುದಾರರಿಗೆ ಹಸ್ತಾಂತರಿಸುತ್ತದೆ ಎಂದು ಆಯೋಗದ ಅಧ್ಯಕ್ಷ ಕೆ.ಶಿವರಾಮ ಮತ್ತು ಅದರ ಸದಸ್ಯರನ್ನೊಳಗೊಂಡ ಆಯೋಗ ಹೇಳಿದೆ.
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಡಾ.ಸಿದ್ದಗಂಗಯ್ಯ ಅವರ ಸಿರಿ ಮಾರ್ಕೆಂಟಿಂಗ್ ಗೆ, ಆಸ್ತಿಯ ಹಕ್ಕು ಪತ್ರಗಳನ್ನು ಅಡ ಇಟ್ಟುಕೊಂಡು ಸಾಲ ನೀಡಿತ್ತು. ಡಾ.ಸಿದ್ದಗಂಗಯ್ಯ 2012 ರಲ್ಲಿ ನಿಧನರಾದರು ಅವರ ಪುತ್ರ ಡಿಎಸ್ ಪರಮಶಿವಯ್ಯ 2019 ರಲ್ಲಿ ಸಾಲ ಮರುಪಾವತಿ ಮಾಡಿದ್ದರು.
ಬ್ಯಾಂಕ್ ಸಾಲ ತೀರಿಸಿದ್ದಕ್ಕೆ ಪ್ರಮಾಣ ಪತ್ರ ನೀಡಿತ್ತು. ಆದರೆ ಪತ್ರಗಳನ್ನು ವಾಪಸ್ ನೀಡಲಿಲ್ಲ. ಒಂಬುಡ್ಸ್ ಮನ್ ಗೆ ಗ್ರಾಹಕರು ದೂರು ನೀಡಿದ್ದರು. ಈ ಬಳಿಕ ಅವರು ಆಯೋಗದ ಮೊರೆ ಹೋಗಿದ್ದರು.