ನಗರದ ಸಂಸ್ಕೃತಿ, ಇತಿಹಾಸ ಪರಂಪರೆ ಪರಿಚಯಿಸಲು ಮಾರ್ಚ್ 25-26ಕ್ಕೆ 'ನಮ್ಮ ಬೆಂಗಳೂರು ಹಬ್ಬ'
ಬೆಂಗಳೂರಿನ ಸಂಸ್ಕೃತಿ ಮತ್ತು ಅದರ ವಿಕಸನವನ್ನು ನಗರದಲ್ಲಿ ನೆಲೆಸಿರುವ ಇತರೆ ಭಾಷಿಕರು ಸೇರಿದಂತೆ ನಾಡಿನ ಜನರಿಗೆ ಪರಿಚಯಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಾರ್ಚ್ 25 ಮತ್ತು 26 ರಂದು ನಮ್ಮ ಬೆಂಗಳೂರು ಹಬ್ಬವನ್ನು ಆಯೋಜಿಸಿದೆ.
Published: 21st March 2023 10:35 AM | Last Updated: 21st March 2023 05:46 PM | A+A A-

ಸಚಿವ ಆರ್.ಅಶೋಕ್.
ಬೆಂಗಳೂರು: ಬೆಂಗಳೂರಿನ ಸಂಸ್ಕೃತಿ ಮತ್ತು ಅದರ ವಿಕಸನವನ್ನು ನಗರದಲ್ಲಿ ನೆಲೆಸಿರುವ ಇತರೆ ಭಾಷಿಕರು ಸೇರಿದಂತೆ ನಾಡಿನ ಜನರಿಗೆ ಪರಿಚಯಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಾರ್ಚ್ 25 ಮತ್ತು 26 ರಂದು ನಮ್ಮ ಬೆಂಗಳೂರು ಹಬ್ಬವನ್ನು ಆಯೋಜಿಸಿದೆ.
ಕಾರ್ಯಕ್ರಮವು ಎರಡು ದಿನಗಳ ಕಾಲ ಕಬ್ಬನ್ ಪಾರ್ಕ್ ಮತ್ತು ವಿಧಾನಸೌಧದ ಸುತ್ತಮುತ್ತ ನಡೆಯಲಿದೆ. ಇಲ್ಲಿ ನೃತ್ಯ, ನಾಟಕ, ಕಲೆ, ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಸೋಮವಾರ ಮಾಹಿತಿ ನೀಡಿದರು.
ವಿಧಾನಸೌಧದಲ್ಲಿ ಬೆಂಗಳೂರು ಹಬ್ಬದ ಲಾಂಛನ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು, ಈ ವರ್ಷ ಸಮಯಾವಕಾಶದ ಕೊರತೆಯಿಂದ ಹಬ್ಬವನ್ನು ಚಿಕ್ಕ ಪ್ರಮಾಣದಲ್ಲಿ ನಡೆಸಲಾಗುತ್ತಿದೆ, ಆದರೆ, ಮುಂದಿನ ವರ್ಷದಿಂದ ಅದ್ಧೂರಿಯಾಗಿ ಆಚರಿಸಲು ಚಿಂತನೆ ನಡೆಸಲಾಗಿದೆ. 'ಮಾರ್ಚ್ 25ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆಂದು ಹೇಳಿದರು.
ಇದನ್ನೂ ಓದಿ: ಉರಿಗೌಡ, ನಂಜೇಗೌಡ ಕುರಿತು ಇತಿಹಾಸ ಮರು ಪರಿಶೀಲನೆ- ಸಚಿವ ಆರ್. ಅಶೋಕ್
ಮಾರ್ಚ್ 26 ರಂದು ಕೆಂಪೇಗೌಡ ಮತ್ತು ಬಸವೇಶ್ವರರ ಪ್ರತಿಮೆಗಳನ್ನು ಅನಾವರಣಗೊಳಿಸಲಾಗುವುದು. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಭಾಗಿಯಾಗಲಿದ್ದಾರೆ. ಬೆಂಗಳೂರಿನ ಸಂಸ್ಕೃತಿ ಮತ್ತು ಪರಿವರ್ತನೆಯನ್ನು ಪ್ರದರ್ಶಿಸುವುದು ಉತ್ಸವದ ಉದ್ದೇಶವಾಗಿದೆ. ನಗರಕ್ಕೆ ಬರುವವರೆಲ್ಲರೂ ಬೆಂಗಳೂರಿಗರಾಗಬೇಕು ಮತ್ತು ಅದರ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಬೇಕು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮಾತನಾಡಿ, ಮುಂದಿನ ವರ್ಷದಿಂದ ಜನವರಿಯಲ್ಲಿ ಸಂಕ್ರಾಂತಿ ವಾರದ ಮೊದಲ ಶನಿವಾರ ಮತ್ತು ಭಾನುವಾರದಂದು ಬೆಂಗಳೂರು ಹಬ್ಬ ನಡೆಯಲಿದೆ ಎಂದು ಹೇಳಿದರು.
“ಈ ಬೆಂಗಳೂರು ಹಬ್ಬವನ್ನು ಬಹಳ ಸಮಯದಿಂದ ನಡೆಸಲು ಚಿಂತನೆ ನಡೆಸಲಾಗಿತ್ತು, ಆದರೆ ಅನುಮತಿಗಳು ಮತ್ತು ನಿಧಿಯ ಸಮಸ್ಯೆಗಳಿಂದಾಗಿ ವಿಳಂಬವಾಗಿತ್ತು. ಈಗ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, ಅದರ ಪ್ರಕಾರ ಮುಂದಿನ ವರ್ಷದ ಬೆಂಗಳೂರು ಹಬ್ಬಕ್ಕೆ ಆರು ತಿಂಗಳ ಮೊದಲು ಸಮಿತಿಯನ್ನು ರಚಿಸಲಾಗುವುದು, ಈ ಸಮಿತಿಯು ಎಲ್ಲ ವ್ಯವಸ್ಥೆಗಳು ನೋಡಿಕೊಳ್ಳಲಿದೆ. ಬೆಂಗಳೂರು ಕಾಸ್ಮೋಪಾಲಿಟನ್ ಸಿಟಿ ಆಗಿರುವುದರಿಂದ ಇತರ ರಾಜ್ಯಗಳೂ ಉತ್ಸವದ ಭಾಗವಾಗಲಿವೆ. ಇಲ್ಲಿಯವರೆಗೆ, ಒಡಿಶಾ, ಗುಜರಾತ್, ಪಂಜಾಬ್, ಅಸ್ಸಾಂ ಮತ್ತು ಕೇರಳದ ಸಂಸ್ಕೃತಿಯನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.