ಹಾಸನ ಪಶ್ಚಿಮ ಘಟ್ಟದಲ್ಲಿ ಕಾಡ್ಗಿಚ್ಚು: ಶೇ.40ರಷ್ಟು ಗಾಯಗೊಂಡಿದ್ದರೂ ಸಹಾಯಕ್ಕಾಗಿ 4 ಕಿಮೀ ನಡೆದಿದ್ದ ಅರಣ್ಯ ವೀಕ್ಷಕ!

ಫೆಬ್ರವರಿ 16 ರಂದು ಸಕಲೇಶಪುರದಲ್ಲಿ ಕಾಡ್ಗಿಚ್ಚು ನಂದಿಸಲು ಹೋಗಿ ಶೇ 40ರಷ್ಟು ಸುಟ್ಟ ಗಾಯಕ್ಕೆ ಒಳಗಾಗಿದ್ದ ಅರಣ್ಯ ವೀಕ್ಷಕ ತುಂಗೇಶ್ ಡಿಎಂ (37) ಅವರು, ಸಹಾಯ ಪಡೆದುಕೊಳ್ಳಲು ಸುಮಾರು 4 ಕಿಮೀ ದೂರ ನಡೆದಿದ್ದರು ಎಂಬ ಮಾಹಿತಿ ಇದೀಗ ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಫೆಬ್ರವರಿ 16 ರಂದು ಸಕಲೇಶಪುರದಲ್ಲಿ ಕಾಡ್ಗಿಚ್ಚು ನಂದಿಸಲು ಹೋಗಿ ಶೇ 40ರಷ್ಟು ಸುಟ್ಟ ಗಾಯಕ್ಕೆ ಒಳಗಾಗಿದ್ದ ಅರಣ್ಯ ವೀಕ್ಷಕ ತುಂಗೇಶ್ ಡಿಎಂ (37) ಅವರು, ಸಹಾಯ ಪಡೆದುಕೊಳ್ಳಲು ಸುಮಾರು 4 ಕಿಮೀ ದೂರ ನಡೆದಿದ್ದರು ಎಂಬ ಮಾಹಿತಿ ಇದೀಗ ತಿಳಿದುಬಂದಿದೆ.

ಸಕಲೇಶಪುರ ವ್ಯಾಪ್ತಿಯಲ್ಲಿ ಕಾಲ್ನಡಿಗೆ ಮೂಲಕ ನಾವು 6 ಮಂದಿ ಗಸ್ತು ತಿರುಗುತ್ತಿದ್ದೆವು. ಈ ವೇಳೆ ಮಾರೇನಹಳ್ಳಿ ವಿಭಾಗದಲ್ಲಿ ಕಾಡಿನಿಂದ ಹೊಗೆ ಬರುತ್ತಿರುವುದನ್ನು ನೋಡಿದ್ದೆವು. ಸುಮಾರು 10-12 ಕಿಮೀ ನಡೆದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದ್ದೆವು. ಅಂಚುಗಳಲ್ಲಿ ಬೆಂಕಿ ಕಡಿಮೆಯಿದ್ದ ಹಿನ್ನೆಲೆಯಲ್ಲಿ ಮೇಲೆ ಹೋಗಲು ಮುಂದಾದೆವು. ಆದರೆ, ತೀವ್ರ ಗಾಳಿ ಹಿನ್ನೆಲೆಯಲ್ಲಿ ಬೆಂಕಿ ಕೆನ್ನಾಲಿಗೆ ಮತ್ತಷ್ಟು ಹೆಚ್ಚಾಯಿತು.

ಇದರಿಂದ ಸ್ಥಳದಲ್ಲಿ ಸಿಲುಕಿಕೊಂಡೆವು. ತಂಡದಲ್ಲಿದ್ದ ದಿವಾಕರ್ ಹಾಗೂ ಸೋಮಶೇಖರ್ ಜಿಗಿದು ಪ್ರಾಣಾಪಾಯದಿಂದ ಪಾರಾದರು. ಆದರೆ, ನಾವು ನಾಲ್ವರು ಸಿಲುಕಿಕೊಂಡೆವು. ಕೆಲವೇ ನಿಮಿಷಗಳಲ್ಲಿ ಬೆಂಕಿ 30-40 ಎಕರೆ ಪ್ರದೇಶಕ್ಕೆ ಆವರಿಸಿತು. ನಮ್ಮ ಕೈಗಳು, ಎದೆ, ಮುಖ, ಕೂದಲು ಹಾಗೂ ಕಾಲುಗಳಿಗೆ ಬೆಂಕಿ ತಗುಲಿತು. ಬೆಂಕಿ ಕಡಿಮೆಯಾಗುತ್ತಿದ್ದಂತೆಯೇ ಕೆಳಗೆ ಜಿಗಿದು, ನಡೆಯಲು ಆರಂಭಿಸಿದೆವು. ಬಳಿಕ ಸ್ಥಳೀಯ ಎಸ್ಟೇಟ್ ಮ್ಯಾನೇಜರ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದೆ ಎಂದು ತುಂಗೇಶ್ ಅವರು ಹೇಳಿದ್ದಾರೆ.

ಸುಟ್ಟಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಂತೆಯೇ ಕರ್ತವ್ಯಕ್ಕೆ ಹಾಜರಾಗುತ್ತೇನೆ. ಹಲವು ವರ್ಶಗಳಿಂದರೂ ಅರಣ್ಯದಲ್ಲಿ ಎದುರಾಗುವ ಕಾಡ್ಗಿಚ್ಚನ್ನು ನಿಯಂತ್ರಿಸುತ್ತಿದ್ದೇನೆ. ಆದರೆ, ಇದೇ ಮೊದಲ ಬಾರಿಗೆ ಬೆಂಕಿಯ ಕೆನ್ನಾಲಿಗಿಗೆ ಸಿಲುಕಿಕೊಂಡೆ ಎಂದು ತಿಳಿಸಿದ್ದಾರೆ.

ಸಕಲೇಶಪುರ ತಾಲ್ಲೂಕಿನ, ಕಾಡುಮನೆ ಗ್ರಾಮದ ಮಣಿಬೀಡು ದೇವಸ್ಥಾನದ ಸಮೀಪದ ಪಶ್ಚಿಮಘಟ್ಟದ ಕಾಡಿನಲ್ಲಿ ಕೆಲ ದಿನಗಳ ಹಿಂದೆ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ಕ್ರಮೇಣ ಎಲ್ಲೆಡೆ ವ್ಯಾಪಿಸಲು ಆರಂಭಿಸಿತ್ತು. ಈ ವೇಳೆ ಗಸ್ತು ತಿರುಗುತ್ತಿದ್ದ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್, ಸುಂದರೇಶ್ ಮತ್ತು ನಾಲ್ವರು ವಾಚರ್‌ಗಳಾದ ತುಂಗೇಶ್ ಡಿಎಂ, ಮಹೇಶ್, ದಿವಾಕರ್ ಮತ್ತು ಸೋಮಶೇಖರ್ ಬೆಂಕಿ ನಂದಿಸಲು ಮುಂದಾಗಿದ್ದರು. ಬೆಂಕಿ ಕೆನ್ನಾಲಿಗೆ ಎಲ್ಲೆಡೆ ಹರಡಿದ್ದರಿಂದ 6 ಮಂದಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಘಟನೆಯಲ್ಲಿ ಸುಂದರೇಶ್ ಎಂಬುವವರಿಗೆ ಶೇ.80ರಷ್ಟು ಸುಟ್ಟ ಗಾಯಗಳಾಗಿದ್ದವು. ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಸುಂದರೇಶ್ ಸಾವನ್ನಪ್ಪಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com