ಯುಗಾದಿ ಹೊಸತೊಡಕು: ಹಲಾಲ್'ಗೆ ಸೆಡ್ಡು ಹೊಡೆಯಲು ಹಿಂದವೀ ಮೀಟ್ ಮಾರ್ಟ್ ಸಿದ್ದತೆ

ಯುಗಾದಿ ಹಬ್ಬದ ಮರುದಿನ “ಹೊಸತೊಡಕು’ ದಿನ ಆಚರಿಸಲಾಗುತ್ತಿದ್ದು, ಹಲಾಲ್ ಬಾಯ್ಕಾಟ್ ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಯುಗಾದಿ ಹಬ್ಬದ ಮರುದಿನ “ಹೊಸತೊಡಕು’ ದಿನ ಆಚರಿಸಲಾಗುತ್ತಿದ್ದು, ಹಲಾಲ್ ಬಾಯ್ಕಾಟ್ ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದೆ.

ಕೆಲ ಹಿಂದೂಪರ ಕಾರ್ಯಕರ್ತರು ಹಲಾಲ್'ಗೆ ಸೆಡ್ಡು ಹೊಡೆಯಲು ಹಿಂದವೀ ಮೀಟ್ ಮಾರ್ಟ್'ನಲ್ಲಿ ಮಾಂಸ ಖರೀದಿ ಮಾಡುವಂತೆ ಅಭಿಯಾನ ಶುರು ಮಾಡಿದ್ದು, ಇದಕ್ಕೆ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗುತ್ತಿವೆ.

ರಾಜ್ಯದಲ್ಲಿ ಮೊದಲಿಗೆ ಹಿಂದವೀ ಮೀಟ್ ಮಾರ್ಟ್'ನ್ನು ಆರಂಭಿಸಿದ್ದು ಮುನೇಗೌಡ ಎಂಬ ವ್ಯಕ್ತಿ. ಹಲಾಲ್ ಕಟ್ ಮಾಂಸದ ವಿರುದ್ಧ ಮುನೇಗೌಡ ಅವರು ಅಭಿಯಾನ ಆರಂಭಿಸಿದ್ದರು.

ಹಿಂದವಿ ಬ್ರಾಂಡ್‌ನ ಅಡಿಯಲ್ಲಿ, ಬೆಂಗಳೂರು ಮತ್ತು ಹೊರವಲಯದಲ್ಲಿ ನಾಲ್ಕು ಅಂಗಡಿಗಳನ್ನು ತೆರೆಯಲಾಗಿತ್ತು. ಈ ವರ್ಷ ನಗರದಾದ್ಯಂತ 18 ಅಂಗಡಿಗಳ ತೆರೆಯಲಾಗಿದೆ. ಕಮ್ಮನಹಳ್ಳಿ, ಇಟ್ಟಮಡು, ದಾಸರಹಳ್ಳಿ, ಸಂಜಯ್ ನಗರ, ಗೆದ್ದಲಹಳ್ಳಿ, ಯಲಹಂಕ, ಇಂದಿರಾನಗರ, ಟ್ಯಾನರಿ ರಸ್ತೆ, ಹೊರಮಾವು, ಅನ್ನಪೂರ್ಣೇಶ್ವರಿ ನಗರ ಮತ್ತಿತರ ಕಡೆ ಅಂಗಡಿಗಳನ್ನು ತೆರೆಯಲಾಗಿದೆ ಎಂದು ಮುನೇಗೌಡ ಅವರು ಹೇಳಿದ್ದಾರೆ.

ಹಿಂದೂಪರ ಕಾರ್ಯಕರ್ತರ ಇಂತಹ ಅಭಿಯಾನದ ವಿರುದ್ಧ ಕೆಲವರು ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಬಹುತ್ವ ಕರ್ನಾಟಕದ ಎನ್‌ಜಿಒ ಸದಸ್ಯೆ ಮೈತ್ರೇಯಿ ಕೃಷ್ಣನ್ ಮಾತನಾಡಿ, ಕೋಮುವಾದ ಸೃಷ್ಟಿಸಲು ಮತ್ತು ಜನರನ್ನು ವಿಭಜಿಸಲು ಸಂಘ ಪರಿವಾರದವರು ಇಂತಹ ಪ್ರಯತ್ನಗಳನ್ನು ನಡೆಸುತ್ತಿದ್ದು, ಇದನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಪ್ರಸ್ತುತ ನಿಜಕ್ಕೂ ನಮ್ಮ ಮುಂದೆ ತುಳಿತಕ್ಕೊಳಗಾಗುತ್ತಿರುವ ಕಾರ್ಮಿಕರ ಹಕ್ಕುಗಳು, ನಿರುದ್ಯೋಗ ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ಪರಿಹರಿಸುವ ಬದಲು, ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವ ಪ್ರಯತ್ನಗಳ ನಡೆಸುತ್ತಿರುವುದು ಅವರಲ್ಲಿರುವ ಜನವಿರೋಧಿ ಮನೋಭಾವವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

ನಮ್ಮ ಸಂವಿಧಾನವು ಭ್ರಾತೃತ್ವದ ಮಹತ್ವವನ್ನು ಹೇಳುತ್ತದೆ. ಅದನ್ನು ಎತ್ತಿಹಿಡಿಯಲು ಕೆಲಸವನ್ನು ನಾವು ಮಾಡುತ್ತೇವೆ ಎಂದಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com