ಸಾರಿಗೆ ನೌಕರರ ಮುಷ್ಕರಕ್ಕೆ ಕರ್ನಾಟಕ ಹೈಕೋರ್ಟ್ ತಡೆ!
ಸಾರಿಗೆ ನೌಕರರ ವೇತನ ಶೇಕಡ 15ರಷ್ಟು ಹೆಚ್ಚಳಕ್ಕೆ ರಾಜ್ಯ ಸರ್ಕಾರ ಆದೇಶಿಸಿದ್ದರೂ ಇದಕ್ಕೆ ಒಪ್ಪದ ಸಾರಿಗೆ ನೌಕರರ ಸಂಘದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಆರ್. ಚಂದ್ರಶೇಖರ್ ನಾಳೆಯಿಂದ ಮುಷ್ಕರ ನಡೆಸುವುದಾಗಿ ಘೋಷಿಸಿದ್ದರು.
Published: 23rd March 2023 04:59 PM | Last Updated: 23rd March 2023 05:15 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಸಾರಿಗೆ ನೌಕರರ ವೇತನ ಶೇಕಡ 15ರಷ್ಟು ಹೆಚ್ಚಳಕ್ಕೆ ರಾಜ್ಯ ಸರ್ಕಾರ ಆದೇಶಿಸಿದ್ದರೂ ಇದಕ್ಕೆ ಒಪ್ಪದ ಸಾರಿಗೆ ನೌಕರರ ಸಂಘದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಆರ್. ಚಂದ್ರಶೇಖರ್ ನಾಳೆಯಿಂದ ಮುಷ್ಕರ ನಡೆಸುವುದಾಗಿ ಘೋಷಿಸಿದ್ದರು.
ಇದೀಗ ಹೈಕೋರ್ಟ್ ನಾಳಿನ ಸಾರಿಗೆ ನೌಕರರ ಮುಷ್ಕರಕ್ಕೆ ತಡೆ ನೀಡಿದೆ. ರಾಜ್ಯದಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು ಮುಷ್ಕರದಿಂದ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಮೂರು ವಾರಗಳ ಕಾಲ ಮುಷ್ಕರ ನಡೆಸಬಾರದು ಎಂದು ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ, ಅಶೋಕ್ ಎಸ್.ಕಿಣಗಿ ಅವರಿದ್ದ ಪೀಠ ಸಂಘಟನೆಗಳಿಗೆ ಸೂಚನೆ ನೀಡಿದೆ.
ಇದನ್ನೂ ಓದಿ: SSLC ವಿದ್ಯಾರ್ಥಿಗಳಿಗೆ ಪರೀಕ್ಷೆಯಂದು KSRTC ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ
ಸಾರಿಗೆ ನೌಕರರ ಸಂಘದ ಸಮಾನ ಮನಸ್ಕರ ವೇದಿಕೆಯ ಮುಷ್ಕರನ್ನು ಪ್ರಶ್ನಿಸಿ ಹೆಚ್ ಎಂ ವೆಂಕಟೇಶ್ ಎಂಬುವವರು ಹೈಕೋರ್ಟ್ ಗೆ ಪಿಐಎಲ್ ಹಾಕಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮುಷ್ಕರಕ್ಕೆ ತಡೆ ನೀಡಿದೆ.
ಮಾರ್ಚ್ 21ರಂದೇ ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ಮುಂದಾಗಿದ್ದರು. ಈ ವೇಳೆ ರಾಜ್ಯ ಸರ್ಕಾರ ಶೇಕಡ 15ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಹೀಗಾಗಿ ಮುಷ್ಕರ ಹಿಂಪಡೆಯಲಾಗಿತ್ತು. ಆದರೆ ಈಗ ಮತ್ತೆ ಸಮಾನ ಮನಸ್ಕರ ವೇದಿಕೆ ಸಾರಿಗೆ ಮುಷ್ಕರಕ್ಕೆ ಕರೆ ನೀಡಿದೆ. ಸಾರಿಗೆ ನೌಕರರ ಮುಖಂಡ ಚಂದ್ರು ನಾಲ್ಕು ನಿಗಮದ ಬಸ್ಗಳನ್ನ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ಕರೆ ನೀಡಿದ್ದರು.