ಆರ್‌ಬಿಐ ಬ್ಯಾಂಕ್ ಹೆಸರಿನಲ್ಲಿ ವಂಚನೆ: 8 ಮಂದಿ ಆರೋಪಿಗಳ ಬಂಧನ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುದ್ರೆ ಮತ್ತು ಲಾಂಛನ ಬಳಸಿಕೊಂಡು ನಕಲಿ ದಾಖಲೆಗಳ ಸೃಷ್ಟಿಸಿ ಜನರನ್ನು ವಂಚಿಸುತ್ತಿದ್ದ ಎಂಟು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
Published: 25th March 2023 01:41 PM | Last Updated: 25th March 2023 01:41 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುದ್ರೆ ಮತ್ತು ಲಾಂಛನ ಬಳಸಿಕೊಂಡು ನಕಲಿ ದಾಖಲೆಗಳ ಸೃಷ್ಟಿಸಿ ಜನರನ್ನು ವಂಚಿಸುತ್ತಿದ್ದ ಎಂಟು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ಆಶೋಕ್ ಕುಮಾರ್, ರಮೇಶ್ ಕುಮಾರ್, ಮಂಜುನಾಥ್, ರಾಜ್ ಕುಮಾರ್, ಗಂಗರಾಜು, ಕುಮಾರೇಶ್, ಮೂರ್ತಿ ನಾಯಕ್, ಸಿದ್ದರಾಜು ನಾಯಕ್ ಎಂದು ಗುರ್ತಿಸಲಾಗಿದ್ದು,ಇವರಿಂದ 11.50 ಲಕ್ಷ ನಗದು, ಬ್ಯಾಂಕಿನಲ್ಲಿದ್ದ 16 ಲಕ್ಷಕ್ಕಿಂತ ಹೆಚ್ಚು ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ.
ಭಾರತದಲ್ಲಿ ಬ್ಯಾಂಕುಗಳ ಬ್ಯಾಂಕು ಎಂದೇ ಕರೆಯುವ ಆರ್‌ಬಿಐ ಬ್ಯಾಂಕ್ನ ಲಾಂಛನದ ಕಾಗದಪತ್ರ, ಸೀಲ್ ಹಾಗೂ ಸಿಗ್ನೇಚರ್ಗಳನ್ನು ನಕಲಿಯಾಗಿ ಸೃಷ್ಟಿಸಿಕೊಂಡು ವ್ಯವಹಾರ ಸಂಬಂಧವಾಗಿ ವಿದೇಶದಿಂದ 75 ಸಾವಿರ ಕೋಟಿ ರೂಪಾಯಿ ವರ್ಗಾವಣೆಯಾಗಿದೆ ಎಂದು ಅರೋಪಿಗಳು ಬಿಂಬಿಸಿಕೊಂಡಿದ್ದರು.
ಇನ್ನು ಮುಂದುವರೆದಂತೆ ದೂರುದಾರರನ್ನು ನಂಬಿಸಲು ದೆಹಲಿ ಹಾಗೂ ಮುಂಬೈನಲ್ಲಿರುವ ಆರ್‌ಬಿಐ ಬ್ಯಾಂಕ್ ಬಳಿ ಕರೆದುಕೊಂಡು ಹೋಗಿ ಪೋಟೋ ತೆಗೆಸಿಕೊಂಡಿದ್ದರು. ಅಲ್ಲದೆ, ನಕಲಿ ಆರ್‌ಬಿಐ ಅಧಿಕಾರಿಯನ್ನು ಕೂಡ ಸೃಷ್ಟಿಸಿ ಯಾಮಾರಿಸಿದ್ದರು.
ಹಣದ ಆಸೆ ಜೋತು ಬಿದ್ದ ವ್ಯಕ್ತಿಯೊಬ್ಬರು ಬರೋಬ್ಬರಿ ಸುಮಾರು 40 ಲಕ್ಷ ರೂಪಾಯಿ ಪಾವತಿಸಿದ್ದರು. ಇತ್ತ ಹಣ ಜಮೆಯಾಗುತ್ತಿದ್ದಂತೆ ಆರೋಪಿಗಳು ನಾಪತ್ತೆ ಆಗಿದ್ದರು.
ಈ ಸಂಬಂಧ ವಂಚನೆಗೆ ಒಳಗಾದ ವ್ಯಕ್ತಿ ನೀಡಿದ ದೂರಿನ ಮೇರೆಗೆ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು.
ಬಳಿಕ ಸಿಸಿಬಿ ವಿಶೇಷ ದಳಕ್ಕೆ ಪ್ರಕರಣ ಹಸ್ತಾಂತರವಾಗಿ ತನಿಖೆ ನಡೆಸಿದ ಸಿಸಿಬಿ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ವಂಚನೆ ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿ ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಬಲೆ ಬೀಸಿದ್ದಾರೆಂದು ತಿಳಿದುಬಂದಿದೆ.