ತಂದೆ ಮಾಡಿದ ಎಡವಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿದ ಮಗು: ನೆರವಿಗೆ ಧಾವಿಸಿದ ಹೈಕೋರ್ಟ್, ಬಾಲಕನಿಗೆ ಪಾಸ್‌ಪೋರ್ಟ್ ನೀಡುವಂತೆ ಆದೇಶ
ತಂದೆ ಮಾಡಿದ ಎಡವಟ್ಟಿನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಮಗುವಿನ ನೆರವಿಗೆ ಹೈಕೋರ್ಟ್ ಧಾವಿಸಿದ್ದು, ಬಾಲಕನಿಗೆ ಪಾಸ್ ಪೋರ್ಟ್ ನೀಡುವಂತೆ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಗೆ ಆದೇಶ ನೀಡಿದೆ.
Published: 25th March 2023 01:26 PM | Last Updated: 25th March 2023 07:17 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ತಂದೆ ಮಾಡಿದ ಎಡವಟ್ಟಿನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಮಗುವಿನ ನೆರವಿಗೆ ಹೈಕೋರ್ಟ್ ಧಾವಿಸಿದ್ದು, ಬಾಲಕನಿಗೆ ಪಾಸ್ ಪೋರ್ಟ್ ನೀಡುವಂತೆ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಗೆ ಆದೇಶ ನೀಡಿದೆ.
ಮಗುವಿನ ತಾಯಿ 2005 ರಲ್ಲಿ ಸೆಲ್ವಕುಮಾರ್ ಬಾಲಸುಬ್ರಮಣ್ಯನ್ ಅವರನ್ನು ಮದುವೆಯಾಗಿದ್ದರು. 2008ರಲ್ಲಿ ಅವರಿಗೆ ಗಂಡು ಮಗು ಜನಿಸಿತ್ತು. 2011ರಲ್ಲಿ ಪತಿ ಕೆನಡಾದಲ್ಲಿ ನೆಲೆಸಲು ತೀರ್ಮಾನಿಸಿದ್ದರು. ಆಗ ಆತ ಪತ್ನಿ ಹಾಗೂ ಮಗುವನ್ನೂ ಕರೆದುಕೊಂಡು ಹೋಗಿದ್ದರು. 2012ರಲ್ಲಿ ಕೆನಾಡದಿಂದ ಬೆಂಗಳೂರಿಗೆ ವಾಪಸ್ ಬಂದ ಸೆಲ್ವಕುಮಾರ್ ಬಾಲಸುಬ್ರಮಣ್ಯನ್ ಮಗುವನ್ನು ತಂದೆ ತಾಯಿ ಬಳಿ ಬಿಟ್ಟು ನಾಪತ್ತೆಯಾಗಿದ್ದಾನೆ. ಅಲ್ಲಿಂದ ಇಲ್ಲಿಯವರೆಗೆ ಪತ್ತೆಯಾಗಿಲ್ಲ.
ತಾಯಿ ಕೆನಡಾದಲ್ಲಿ ತನ್ನ ಅಧ್ಯಯನ ಮುಂದುವರಿಸಿದರೆ, ಮಗು ಇತ್ತ ಅಜ್ಜಿ ತಾತನ ಬಳಿಯೇ ಇತ್ತು. 2015ರಲ್ಲಿ ತಾಯಿಗೆ ಕೆನಡಾದ ಪೌರತ್ವ ಹಾಗೂ ಪಾಸ್‌ಪೋರ್ಟ್ ದೊರಕಿತು. ಆನಂತರ ತಾಯಿ ತನ್ನ ಭಾರತೀಯ ಪೌರತ್ವ ಮತ್ತು ಸಾಗರೋತ್ತರ ಭಾರತೀಯ ಕಾರ್ಡ್ ವಾಪಾಸ್ ನೀಡಿದರು. ಇತ್ತ ಅಜ್ಜಿ-ತಾತ ಮೊಮ್ಮಗುವಿಗೆ ಅಪ್ರಾಪ್ತರ ಪಾಸ್‌ಪೋರ್ಟ್ ಕೋರಿ ಸಂಬಂಧಿಸಿದ ಸಂಸ್ಥೆಗೆ ಅರ್ಜಿ ಸಲ್ಲಿಸಿದ್ದರು. ಅದು ಉಪಯೋಗ ಆಗಿರಲಿಲ್ಲ. ಇದರಿಂದ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು.
ಐದು ವರ್ಷಗಳ ಅವಧಿಗೆ ಪಾಸ್‌ಪೋರ್ಟ್ ನೀಡಿತ್ತು. ಆದರೆ ಇತ್ತ ಪತಿ ಮನವಿ ಮೇರೆಗೆ ಕೋರ್ಟ್ ಏಕಪಕ್ಷೀಯ ವಿಚ್ಛೇಧಿದನ ಮಂಜೂರು ಮಾಡಿತ್ತು. ಇನ್ನು ಮಗುವಿಗೆ ನೀಡಿದ್ದ ಪಾಸ್‌ಪೋರ್ಟ್ ಅವಧಿ 2020 ರಲ್ಲಿ ಮುಗಿದಿತ್ತು. ಆನಂತರ ನವೀಕರಣ ಮಾಡಿರಲಿಲ್ಲ. ಅದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಮಗುವಿನ ನೆರವಿಗೆ ಧಾವಿಸಿದೆ.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಆ ಮಗುವಿಗೆ ಪಾಸ್‌ಪೋರ್ಟ್ ನೀಡುವಂತೆ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಗೆ ಸೂಚನೆ ನೀಡಿದೆ. ಅಲ್ಲದೆ, ಆ ಪಾಸ್ ಪೋರ್ಟ್ ಆ ಮಗು ಹದಿನೆಂಟು ವರ್ಷ ತುಂಬುವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ ಎಂದು ಕೂಡ ಆದೇಶಿಸಿದೆ.
ಭಾರತೀಯ ಸಂವಿಧಾನದ ಕಲಂ 226ರಡಿ ಕೋರ್ಟ್ ಮಧ್ಯಪ್ರವೇಶಕ್ಕೆ ಇದು ಸರಿಯಾದ ಪ್ರಕರಣವಾಗಿದೆ. ಆದರಿಂದ ಈ ಪ್ರಕರಣದಲ್ಲಿ ಮಗುವಿನದ್ದು ಏನೂ ತಪ್ಪಿಲ್ಲ. ಹಾಗಾಗಿ ನ್ಯಾಯಾಲಯ ಅದರ ನೆರವಿಗೆ ಧಾವಿಸುವುದು ಅತ್ಯಗತ್ಯವಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.