ವೈಟ್‌ ಫೀಲ್ಡ್‌- ಕೆ.ಆರ್‌.ಪುರ ಮೆಟ್ರೋ ಸಂಚಾರಕ್ಕೆ ಇಂದು ಪ್ರಧಾನಿ ಮೋದಿ ಹಸಿರು ನಿಶಾನೆ: ಎಲ್ಲೆಲ್ಲಿ ವಾಹನ ಸಂಚಾರ ನಿರ್ಬಂಧ? ಇಲ್ಲಿದೆ ಮಾಹಿತಿ

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡುವುದು ಹೆಚ್ಚಾಗುತ್ತಿದ್ದು ಇಂದು ಮತ್ತೆ ಆಗಮಿಸುತ್ತಿದ್ದಾರೆ. 
ಇಂದು ಉದ್ಘಾಟನೆ ಕಾಣಲಿರುವ ಮೆಟ್ರೊ ನಿಲ್ದಾಣ
ಇಂದು ಉದ್ಘಾಟನೆ ಕಾಣಲಿರುವ ಮೆಟ್ರೊ ನಿಲ್ದಾಣ

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡುವುದು ಹೆಚ್ಚಾಗುತ್ತಿದ್ದು ಇಂದು ಮತ್ತೆ ಆಗಮಿಸುತ್ತಿದ್ದಾರೆ. 

ಇಂದು ಬೆಂಗಳೂರಿನ ವೈಟ್​​ಫೀಲ್ಡ್ ಮತ್ತು ಕೆ. ಆರ್​ ಪುರ ನಡುವಿನ ಮೆಟ್ರೋಗೆ ಚಾಲನೆ, ಮುದ್ದೇನಹಳ್ಳಿಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜು ಉದ್ಘಾಟನೆ ಹಾಗೂ ದಾವಣಗೆರೆಯಲ್ಲಿನ ಕಾರ್ಯಕ್ರಮಗಳಲ್ಲಿ ಮೋದಿ ಭಾಗವಹಿಸಲಿದ್ದಾರೆ. ಮೊದಲು ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಗೆ ತೆರಳಲಿರುವ ಪ್ರಧಾನಿ ನಂತರ ಬೆಂಗಳೂರಿನ ವೈಟ್​​ಫೀಲ್ಡ್ ಮತ್ತು ಕೆ. ಆರ್​ ಪುರ ನಡುವಿನ ಮೆಟ್ರೋ ರೈಲಿಗೆ ಚಾಲನೆ ನೀಡಿ ಅದರಲ್ಲಿ ಸಂಚರಿಸಲಿದ್ದಾರೆ. ನಂತರ ದಾವಣಗೆರೆಗೆ ತೆರಳಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಮುದ್ದೇನಹಳ್ಳಿಯಲ್ಲಿ ಖಾಸಗಿ ಮೆಡಿಕಲ್ ಕಾಲೇಜು ಉದ್ಘಾಟನೆ: ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಗ್ರಾಮದ ಬಳಿ ಇರುವ ಸತ್ಯಸಾಯಿ ಸಾಯಿ ಲೋಕಸೇವಾ ಗ್ರಾಮಕ್ಕೆ ಬರಲಿರುವ ಮೋದಿ, ಸತ್ಯ ಸಾಯಿ ಗ್ರಾಮದ ಸತ್ಯ ಸಾಯಿ ಸರಳಾ ಆಸ್ಪತ್ರೆ ಬಳಿ ನಿರ್ಮಾಣವಾಗಿರುವ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ. ನಂತರ ಬೆಂಗಳೂರಿಗೆ ತೆರಳಲಿದ್ದಾರೆ.

ಬೆಂಗಳೂರಿನಲ್ಲಿ ಈಗಾಗಲೇ ಮೋದಿ ಭೇಟಿಗೆ ಸಕಲ ಸಿದ್ಧತೆಗಳು ನಡೆದಿದ್ದು, ಬಿಗಿ ಬಂದೋಬಸ್ತ್ ಕೂಡ ಮಾಡಲಾಗಿದೆ. ವೈಟ್ ಫೀಲ್ಡ್ ಮೆಟ್ರೋ ಹೊಸ ಮಾರ್ಗ ಉದ್ಘಾಟನೆಯ ನಂತರ ಪ್ರಧಾನಿ ಮೋದಿ ಅವರು ವೈಟ್ ಫೀಲ್ಡ್​​​ನಲ್ಲಿ ಸಮೀಪ ಮಹದೇವಪುರ ಕ್ಷೇತ್ರದ ಸತ್ಯ ಸಾಯಿ ಆಶ್ರಮದಿಂದ ವೈಟ್ ಫೀಲ್ಡ್ ಮೆಟ್ರೋ ಸ್ಟೇಷನ್ ವರೆಗೂ ಸುಮಾರು 1 ಕಿ.ಮೀ. ರೋಡ್ ಶೋ ನಡೆಸಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಮೆಟ್ರೋ ಸುತ್ತಮುತ್ತ 5 ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ಸಂಚಾರಕ್ಕೆ ನಿರ್ಬಂಧ, ಬದಲಾವಣೆ: ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.30 ರವರೆಗೆ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ವೈಟ್​ಫೀಲ್ಡ್ ಸುತ್ತಮುತ್ತ ಕೆಲವು ರಸ್ತೆ ಮಾರ್ಗಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 2.30ರವರೆಗೆ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ವರ್ತೂರು ಕೋಡಿಯಿಂದ ಓ ಫಾರಂ ಜಂಕ್ಷನ್​ ಮೂಲಕ ಕನ್ನಮಂಗಲ ಗೇಟ್​ವರೆಗೆ ಸಾರ್ವಜನಿಕರ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಚನ್ನಸಂದ್ರದಿಂದ ಓ ಫಾರಂ ಮೂಲಕ ಹೂಡಿ ಸರ್ಕಲ್​ವರೆಗೆ, ಕುಂದಲಹಳ್ಳಿ ರಸ್ತೆಯಿಂದ ವೈದೇಹಿ ಆಸ್ಪತ್ರೆಯ ಮೂಲಕ ಓ ಫಾರಂ ಜಂಕ್ಷನ್​ವರೆಗೆ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ.

ಇನ್ನು ವಾಹನ ಸವಾರರು ವರ್ತೂರು ಕೋಡಿಯಿಂದ ಕುಂದಲಹಳ್ಳಿ ಬ್ರಿಡ್ಜ್ ಮೂಲಕ ಹಳೇ ಏರ್​ಪೋರ್ಟ್ ರಸ್ತೆ ತಲುಪಬಹುದು. ಚನ್ನಸಂದ್ರ ಸರ್ಕಲ್​ನಿಂದ ನಾಗೊಂಡನಹಳ್ಳಿ, ಇಮ್ಮಡಿಹಳ್ಳಿ ಹಗದೂರು ಮೂಲಕ ವರ್ತೂರು ಕೋಡಿ ತಲುಪಬಹುದು. ಕಾಟಂನಲ್ಲೂರು ಕ್ರಾಸ್​ನಿಂದ ಶೀಗೆಹಳ್ಳಿ ಗೇಟ್, ಕಾಡುಗೋಡಿ ನಾಲಾರಸ್ತೆ, ಚನ್ನಸಂದ್ರಹೂಡಿ ಸರ್ಕಲ್​, ಗ್ರಾಫೈಟ್ ರಸ್ತೆ ಮೂಲಕ ಕುಂದಲಹಳ್ಳಿ ತಲುಪಬಹುದು. ಹೂಡಿ ಸರ್ಕಲ್​ನಿಂದ ಅಯ್ಯಪ್ಪನಗರ, ಭಟ್ಟರಹಳ್ಳಿ-ಮೇಡಹಳ್ಳಿ ಮೂಲಕ ಕಾಟಂನಲ್ಲೂರು ಕ್ರಾಸ್​ಗೆ ವಾಹನ ಸವಾರರು ತೆರಳಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com