ಯಡಿಯೂರಪ್ಪ ಭೀಷ್ಮ, ಬೊಮ್ಮಾಯಿ ಅರ್ಜುನ ಎಂದು ಕೊಂಡಾಡಿದ ಸಚಿವ ಶ್ರೀರಾಮುಲು
ದಾವಣಗೆರೆಯಲ್ಲಿ ಶನಿವಾರ ನಡೆದ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮದಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಅವರು ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೀಷ್ಮ, ಅರ್ಜುನ ಎಂದು ಕರೆದು ಕೊಂಡಾಡಿದರು.
Published: 26th March 2023 02:54 PM | Last Updated: 26th March 2023 02:54 PM | A+A A-

ಸಚಿವ ಶ್ರೀರಾಮುಲು
ದಾವಣಗೆರೆ: ದಾವಣಗೆರೆಯಲ್ಲಿ ಶನಿವಾರ ನಡೆದ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮದಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಅವರು ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೀಷ್ಮ, ಅರ್ಜುನ ಎಂದು ಕರೆದು ಕೊಂಡಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮನಕ್ಕೂ ಮುನ್ನ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಶ್ರೀರಾಮುಲು, 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಗೆಲುವಿನತ್ತ ಭೀಷ್ಮರಾದ ಯಡಿಯೂರಪ್ಪ ಮತ್ತು ಅರ್ಜುನರಾದ ಬೊಮ್ಮಾಯಿ ಅವರು ಕೊಂಡೊಯ್ಯಲಿದ್ದಾರೆಂದು ಹೇಳಿದರು.
ಬಿಜೆಪಿಯ ಈ ಮಹಾಸಂಗಮ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ನಡುಕ ಹುಟ್ಟಿದೆ. ಈಗಾಗಲೇ ಆ ಪಕ್ಷ ಅಭ್ಯರ್ಥಿಗಳು ಸುಳಿವಿಲ್ಲದಂತಾಗಿದ್ದಾರೆಂದು ತಿಳಿಸಿದ್ದಾರೆ.
ಇದೇ ವೇಳೆ ಕಾಂಗ್ರೆನ್'ನ್ನು ಭ್ರಷ್ಟ ಪಕ್ಷ ಎಂದು ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ದೇಶವನ್ನು ವಿಭಜಿಸಿತು. ಇದರಿಂದ ದೇಶ ನಾಶಗೊಂಡಿತ್ತು. ಕಾಂಗ್ರೆಸ್ ಆಡಳಿತದಲ್ಲಿ ಇದ್ದ ನಿರುದ್ಯೋಗ ಸಮಸ್ಯೆ ತೀವ್ರವಾಗಿ ಕಡಿಮೆಯಾಗಿದೆ. ಭವಿಷ್ಯದಲ್ಲಿ ಕಣ್ಮರೆಯಾಗಲಿದೆ ಎಂದು ಹೇಳಿದರು.
ಸರ್ಜಿಕಲ್ ಸ್ಟ್ರೈಕ್, ಕೋವಿಡ್ -19 ಲಸಿಕೆ ಕುರಿತು ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿತ್ತು. ಬಿಜೆಪಿ ಸರ್ಕಾರ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಿತ್ತು. ನುಸುಳುಕೋರರಿಗೆ ನಮ್ಮ ಶಕ್ತಿ ಏನೆಂಬುದನ್ನು ತಿಳಿಸಿತ್ತು. ನಿಮಗೆ ಇನ್ನೇನು ಬೇಕು. ದೇಶದ ಜನರು ನಮ್ಮನ್ನು ನಂಬುತ್ತಾರೆ. ಇದರಿಂದ ನಮಗಾಗುವ ಸಮಸ್ಯೆಯೇನು ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.
ಬಳಿಕ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಹುಲ್ ಗಾಂಧಿ ಲಂಡನ್'ಗೆ ಹೋಗಿ ದೇಶದ ಕುರಿತು ಸುಳ್ಳುಗಳನ್ನು ಹೇಳಿದ್ದಾರೆ. ಕೂಡಲೇ ರಾಷ್ಟ್ರದ ಮುಂದೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ, ನಮ್ಮ ಸರ್ಕಾರವು ಎಸ್‌ಸಿಗೆ ಶೇ 17 ಮತ್ತು ಎಸ್‌ಟಿಗೆ ಶೇ 7 ಕ್ಕೆ ಮೀಸಲಾತಿಯನ್ನು ಹೆಚ್ಚಿಸಿದೆ. ಇದರೊಂದಿಗೆ ಒಳ ಮೀಸಲಾತಿಯನ್ನೂ ಘೋಷಿಸಲಾಗಿದೆ. ಇದು ಸಾಮಾಜಿಕ ನ್ಯಾಯದ ಅಡಿಯಲ್ಲಿ ಕರ್ನಾಟಕದ ಜನರಿಗೆ ನಮ್ಮ ಬದ್ಧತೆಯಾಗಿದೆ ಎಂದು ಹೇಳಿದರು.
ಬಳಿಕ ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದ ಶ್ರೀರಾಮುಲು, "ಮೋದಿ ಅವರ ಸ್ಪಷ್ಟವಾದ ರಾಜನೀತಿಯಿಂದಾಗಿ ಇಂದು ಇಡೀ ವಿಶ್ವವು ಮೋದಿಯನ್ನು ಶ್ಲಾಘಿಸುತ್ತದೆ. ವಿಜಯ ಸಂಕಲ್ಪ ಯಾತ್ರೆಯು ವಿಜಯ ಸಂಗಮವಾಗಿ ಮಾರ್ಪಟ್ಟಿದೆ ಮತ್ತು 2023 ರ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನುಡಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಹಾಗೂ ರಾಜ್ಯ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.