ಜೀವಾವಧಿ ಶಿಕ್ಷೆಗೆ ಒಳಗಾದವರ ಬಿಡುಗಡೆ ಸಮಿತಿಯು ಕನಿಷ್ಠ 2 ತಿಂಗಳಿಗೆ ಒಮ್ಮೆಯಾದರೂ ಸಭೆ ನಡೆಸಬೇಕು: ಹೈಕೋರ್ಟ್‌

ಜೀವಾವಧಿ ಶಿಕ್ಷೆಗೆ ಒಳಗಾದವರ ಬಿಡುಗಡೆ ಸಮಿತಿಯು ಕನಿಷ್ಠ 2 ತಿಂಗಳಿಗೆ ಒಮ್ಮೆಯಾದರೂ ಸಭೆ ನಡೆಸಬೇಕು ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.
ಕರ್ನಾಟಕ ಹೈಕೋರ್ಟ್ ಮತ್ತು ನ್ಯಾಯಮೂರ್ತಿ ನಾಗಪ್ರಸನ್ನ
ಕರ್ನಾಟಕ ಹೈಕೋರ್ಟ್ ಮತ್ತು ನ್ಯಾಯಮೂರ್ತಿ ನಾಗಪ್ರಸನ್ನ

ಬೆಂಗಳೂರು: ಜೀವಾವಧಿ ಶಿಕ್ಷೆಗೆ ಒಳಗಾದವರ ಬಿಡುಗಡೆ ಸಮಿತಿಯು ಕನಿಷ್ಠ 2 ತಿಂಗಳಿಗೆ ಒಮ್ಮೆಯಾದರೂ ಸಭೆ ನಡೆಸಬೇಕು ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.

ಜೀವಾವಧಿ ಶಿಕ್ಷೆಗೆ ಒಳಗಾದವರ ಅವಧಿ ಪೂರ್ಣ ಬಿಡುಗಡೆ ಅಥವಾ ಕ್ಷಮಾದಾನ ನೀಡುವ ಸಂಬಂಧ ಸಲ್ಲಿಕೆಯಾದ ಅರ್ಜಿಗಳ ಪರಿಶೀಲನೆ ಮತ್ತು ಆದೇಶ ಮಾಡಲು ಎರಡು ತಿಂಗಳಿಗೊಮ್ಮೆ ಸಭೆ ಸೇರಲು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದ ಜೀವಾವಧಿ ಶಿಕ್ಷೆಗೆ ಒಳಗಾದವರ ಬಿಡುಗಡೆ ಸಮಿತಿಗೆ ಸೂಚಿಸುವಂತೆ ಈಚೆಗೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ದೋಷಿ ಎಂದು ಘೋಷಿತವಾಗಿ 16 ವರ್ಷಗಳಿಂದ ಜೈಲಿನಲ್ಲಿರುವ ಓಂಕಾರಮೂರ್ತಿ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ. “ಸಮಿತಿಯು ವರ್ಷದಲ್ಲಿ ಎಂಟು ಬಾರಿ ಸಭೆ ನಡೆಸಲು ಸಾಧ್ಯವಾಗದೇ ಇದ್ದರೂ ಕನಿಷ್ಠ ಆರು ಸಭೆಗಳನ್ನಾದರೂ ವರ್ಷಕ್ಕೆ ಮಾಡಬೇಕು. ಇದರ ಅರ್ಥ ಜೀವಾವಧಿ ಶಿಕ್ಷೆಗೆ ಒಳಗಾದವರು ಶಾಸನಬದ್ಧವಾಗಿ ಅವಧಿಪೂರ್ವವಾಗಿ ಸರ್ಕಾರದ ಮಾರ್ಗಸೂಚಿಯ ಅನ್ವಯ ಬಿಡುಗಡೆಗೆ ಅರ್ಹರು ಎಂದು ಪರಿಗಣಿಸಲ್ಪಡುತ್ತದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಸಮಿತಿಯು ಎಂಟು ತಿಂಗಳಿಂದ ಸಭೆ ನಡೆಸದೇ ಇರುವುದರಿಂದ ಅರ್ಜಿಯನ್ನು ಸಮಿತಿಯ ಮುಂದೆ ಮಂಡಿಸಲು ಆದೇಶಿಸುವಂತೆ ನ್ಯಾಯಾಲಯದಲ್ಲಿ ಹಲವು ದಾವೆ ಹೂಡಲಾಗಿದೆ. ಯಾವಾಗ ಸಭೆ ನಡೆಸಲಾಗುತ್ತದೆ ಎಂಬುದೇ ಸರ್ಕಾರಕ್ಕೆ ತಿಳಿದಿಲ್ಲ” ಎಂದು ಆದೇಶದಲ್ಲಿ ಹೇಳಲಾಗಿದೆ. ಅರ್ಜಿದಾರರ ಅರ್ಜಿಯನ್ನು ಸಮಿತಿಯು ಅರ್ಹತೆಯ ಮೇಲೆ ಪರಿಗಣಿಸುವುದಕ್ಕೂ ಮುನ್ನ ಅವರು ಪೆರೋಲ್‌ ಮೇಲೆ ಬಿಡುಗಡೆಗೆ ಅರ್ಹವಾಗಿದ್ದಾರೆ ಎಂದು ನ್ಯಾಯಾಲಯವು ಆದೇಶದಲ್ಲಿ ಸ್ಪಷ್ಟಪಡಿಸಿದೆ.

“ಎರಡನೇ ಪ್ರತಿವಾದಿ/ಸಮಿತಿಯನ್ನು ವರ್ಷದಲ್ಲಿ ಆರು ಬಾರಿ ಅಂದರೆ ಎರಡು ತಿಂಗಳಿಗೆ ಒಮ್ಮೆ ಭೇಟಿ ಮಾಡಬೇಕು. ಹೀಗೆ ಮಾಡುವುದರಿಂದ ಅರ್ಜಿಗಳನ್ನು ಸೂಕ್ತ ಸಂದರ್ಭದಲ್ಲಿ ಅರ್ಹತೆಯನ್ನು ಆಧರಿಸಿ ಪರಿಗಣಿಸಬಹುದಾಗಿದೆ” ಎಂದು ನ್ಯಾಯಾಲಯವು ಹೇಳಿದೆ.

“ದೋಷಿ ಓಂಕಾರಮೂರ್ತಿ ಅವರ ನಡತೆಯು ಅನುಕರಣೀಯವಾಗಿದೆ ಎಂದು ಜೈಲು ಅಧಿಕಾರಿಗಳು ಸರ್ಟಿಫಿಕೇಟ್‌ ಸಲ್ಲಿಸಿದ್ದಾರೆ. ಇದನ್ನು ಆಧರಿಸಿ ಅವಧಿಪೂರ್ಣ/ಕ್ಷಮಾದಾನ ನೀಡುವಂತೆ ಅರ್ಜಿದಾರರು ಮನವಿ ಸಲ್ಲಿಸಿದ್ದರು. ಆದರೆ, ಪ್ರಧಾನ ಪೊಲೀಸ್‌ ಸೂಪರಿಟೆಂಡೆಂಟ್‌ ಅವರು ಅರ್ಜಿಯನ್ನು ಸಮಿತಿಯ ಮುಂದೆ ಮಂಡಿಸಿರಲಿಲ್ಲ” ಎಂದು ವಿವರಿಸಲಾಗಿದೆ. ಅರ್ಜಿದಾರರ ಪರ ವಕೀಲರು, ಸಮಿತಿಯು ಆರು ತಿಂಗಳಿಂದ ಸಭೆ ನಡೆಸಿಲ್ಲ. ಹೀಗಾಗಿ, ಅವಧಿಪೂರ್ಣ ಬಿಡುಗಡೆಗೆ ಸಂಬಂಧಿಸಿದಂತೆ ಅರ್ಜಿದಾರರ ಮನವಿಯನ್ನು ಸಮಿತಿಯ ಮುಂದೆ ಇಡಲಾಗಿಲ್ಲ ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: 
ಕೊಲೆ, ಅತ್ಯಾಚಾರ ಮತ್ತು ಸಾಕ್ಷ್ಯ ನಾಶ ಪ್ರಕರಣದಲ್ಲಿ ಓಕಾರ್ ಮೂರ್ತಿ 2007ರ ನವೆಂಬರ್‌ 23ರಿಂದ ಬಂಧನದಲ್ಲಿದ್ದರು. ಅತ್ಯಾಚಾರ ಪ್ರಕರಣದಿಂದ ಖುಲಾಸೆಯಾದರೂ ಕೊಲೆ ಮತ್ತು ಸಾಕ್ಷ್ಯ ನಾಶ ಪ್ರಕರಣದಲ್ಲಿ 2010ರ ಅಕ್ಟೋಬರ್‌ 12ರಂದು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. 16 ವರ್ಷ, 10 ತಿಂಗಳದಿಂದ ಜೈಲಿನಲ್ಲಿದ್ದಾರೆ. ಈ ನಡುವೆ ಓಂಕಾರ್‌ಗೆ ಜೈಲು ಪ್ರಾಧಿಕಾರವು ಸನ್ನಡತೆ ಸರ್ಟಿಫಿಕೇಟ್‌ ವಿತರಿಸಿತ್ತು. ಇದರಿಂದ ಸನ್ನಡತೆ ಪರಿಗಣಿಸಿ ಶಿಕ್ಷೆ ಅವಧಿ ಪೂರ್ಣಗೊಳ್ಳುವ ಮುನ್ನವೇ/ ಕ್ಷಮದಾನದ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರಿ ಆತ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿಯನ್ನು ಪರಿಶೀಲಿಸಿ ನಿರ್ಣಯ ಕೈಗೊಳ್ಳಬೇಕಾದ ಜೀವಾವಧಿ ಶಿಕ್ಷೆಗೆ ಒಳಗಾದವರ ಬಿಡುಗಡೆ ಸಮಿತಿಯು ಎಂಟು ತಿಂಗಳಿಂದ ಸಭೆ ನಡೆಸಿರಲಿಲ್ಲ. ಇದರಿಂದ ತಮ್ಮ ಮನವಿಯನ್ನು ಸಮಿತಿ ಮುಂದೆ ಇರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com