ಕಲಬುರಗಿ: ಪಿಎಂ-ಮಿತ್ರ ಮೆಗಾ ಜವಳಿ ಪಾರ್ಕ್ ಗೆ ಚಾಲನೆ, ಮೋದಿ ಅಭಿನಂದನೆ

ಕಲಬುರಗಿಯಲ್ಲಿ ಮಂಗಳವಾರ ಪಿಎಂ-ಮಿತ್ರ ಮೆಗಾ ಜವಳಿ ಪಾರ್ಕ್ ಗೆ ಕೇಂದ್ರ ಜವಳಿ ಖಾತೆ ರಾಜ್ಯ ಸಚಿವೆ ದರ್ಶನ್ ಜರ್ದೋಶ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಚಾಲನೆ ನೀಡಿದರು.
ಜವಳಿ ಪಾರ್ಕ್ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
ಜವಳಿ ಪಾರ್ಕ್ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ಕಲಬುರಗಿ: ಕಲಬುರಗಿಯಲ್ಲಿ ಮಂಗಳವಾರ ಪಿಎಂ-ಮಿತ್ರ ಮೆಗಾ ಜವಳಿ ಪಾರ್ಕ್ ಗೆ ಕೇಂದ್ರ ಜವಳಿ ಖಾತೆ ರಾಜ್ಯ ಸಚಿವೆ ದರ್ಶನ್ ಜರ್ದೋಶ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಮುಖ್ಯಮಂತ್ರಿ,  ಈ ಮೆಗಾ ಪಾರ್ಕ್ ಒಟ್ಟು 1, 000 ಎಕರೆ ಪ್ರದೇಶದಲ್ಲಿ ರೂ.1, 800 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಒಟ್ಟು ರೂ.10,000 ಕೋಟಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವುದರ ಜೊತೆಗೆ 1 ಲಕ್ಷ ಹೊಸ ಉದ್ಯೋಗವಕಾಶಗಳನ್ನು ಸೃಷ್ಟಿಸಲಿದೆ ಎಂದರು.

ಈ ಪಾರ್ಕ್ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಲವಾರು ಉದ್ಯೋಗವಕಾಶಗಳನ್ನು ಸೃಷ್ಟಿಸುವ ಜೊತೆ ಜೊತೆಗೆ ಆತ್ಮನಿರ್ಭರತೆಯ ಭಾರತಕ್ಕೆ ಪೂರಕವಾಗಲಿದೆ. ಈ ಮಹತ್ವದ ಯೋಜನೆ ಕಲಬುರಗಿಯ ಚಿತ್ರಣವನ್ನೇ ಬದಲಿಸಲಿದ್ದು, ಭವಿಷ್ಯದಲ್ಲಿ ಕಲಬುರಗಿ ದೊಡ್ಡ ಜವಳಿ ಹಬ್ ಆಗಿ ಪರಿವರ್ತನೆಯಾಗಲಿದ್ದು, ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕತೆಯ ಅಭಿವೃದ್ಧಿಗೆ ಇಂಬು ನೀಡಲಿದೆ ಎಂದು ಅವರು ತಿಳಿಸಿದರು.

ದೇಶದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಉದ್ಯೋಗ ನೀತಿಯನ್ನು ಜಾರಿಗೆ ತಂದಿದ್ದು,ಕೈಗಾರಿಕಾ ಸ್ನೇಹಿಯಾದ ಕರ್ನಾಟಕದಲ್ಲಿ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದ್ದು,ಉದ್ಯೋಗ ಸೃಷ್ಟಿಯ ಆಧಾರದ ಮೇಲೆ, ಕೈಗಾರಿಕೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದು,ಜವಳಿ ಉದ್ಯಮ ಹೆಚ್ಚಿನ ಪ್ರೋತ್ಸಾಹ ನಿಧಿಯನ್ನು ಪಡೆಯಲು ಅರ್ಹವಾಗಿದೆ ಎಂದರು. 

ಜವಳಿ ಪಾರ್ಕ್ ಸ್ಥಾಪನೆಗಾಗಿ ರಾಜ್ಯದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.  ಈ ಪಾರ್ಕ್ ಕರ್ನಾಟಕದ ಶ್ರೀಮಂತ ಜವಳಿ ಪರಂಪರೆಯನ್ನು ಸಂಭ್ರಮಾಚರಿಸುತ್ತದೆ ಮತ್ತು ರಾಜ್ಯದ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.  ಕರ್ನಾಟಕಕ್ಕೆ ಮತ್ತು ವಿಶೇಷವಾಗಿ ಕಲಬುರಗಿಗೆ ನಿಜಕ್ಕೂ ವಿಶೇಷ ದಿನ. ಈ ಜವಳಿ ಪಾರ್ಕ್ ಮೂಲಕ ಜಗತ್ತು ಭಾರತದ ಜವಳಿ ವೈವಿಧ್ಯತೆ ಮತ್ತು ನಮ್ಮ ಜನರ ಸೃಜನಶೀಲತೆಯ ದರ್ಶನ ಪಡೆಯುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

 ಕರ್ನಾಟಕದ ಜನರನ್ನು ಸಬಲೀಕರಣಗೊಳಿಸಲು ಸ್ಪಷ್ಟ ಕಾರ್ಯತಂತ್ರದೊಂದಿಗೆ ಜವಳಿ ಸಚಿವಾಲಯ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಜವಳಿ ಸಚಿವ ಪಿಯೂಶ್ ಗೋಯೆಲ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com