ಮತದಾರರ ವೈಯಕ್ತಿಕ ಡೇಟಾ ಪಡೆದು ವಾಟ್ಸಾಪ್ ನಲ್ಲಿ ಮೆಸೇಜ್, ಡಾ. ಸಿ.ಎನ್.ಅಶ್ವತ್ಥ ನಾರಾಯಣ್ ವಿರುದ್ಧ ಆಕ್ರೋಶ!
ಹಾಲಿ ಶಾಸಕ ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ ಎನ್ ಅಶ್ವತ್ಥ ನಾರಾಯಣ್ ಮತದಾರರಿಗೆ ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
Published: 01st May 2023 01:08 AM | Last Updated: 02nd May 2023 06:52 PM | A+A A-

ಡಾ.ಸಿ.ಎನ್. ಅಶ್ವತ್ಥ ನಾರಾಯಣ್
ಬೆಂಗಳೂರು: ಹಾಲಿ ಶಾಸಕ ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ ಎನ್ ಅಶ್ವತ್ಥ ನಾರಾಯಣ್ ಮತದಾರರಿಗೆ ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಹಾಲಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಸಂಪುಟ ಸಚಿವರೂ ಆಗಿರುವ ಅಶ್ವತ್ಥ ನಾರಾಯಣ್, ತಮ್ಮ ಕ್ಷೇತ್ರದ ಮತದಾರರ ಮೊಬೈಲ್ ಸಂಖ್ಯೆಗಳು ಮತ್ತಿತರ ವೈಯಕ್ತಿಕ ಡೇಟಾವನ್ನು ಹೇಗೆ ಪಡೆದರು ಎಂಬುದು ಚರ್ಚೆಯಾಗುತ್ತಿದೆ.
ಈ ಸಂಬಂಧ ಮತದಾರರೊಬ್ಬರು ಅಶ್ವತ್ಥ ನಾರಾಯಣ್ ವಿರುದ್ಧ ಕ್ಷೇತ್ರದ ಚುನಾವಣಾಧಿಕಾರಿಗೆ ಔಪಚಾರಿಕವಾಗಿ ದೂರು ನೀಡಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ಉಲ್ಲೇಖಿಸಿ ಆನ್‌ಲೈನ್ ನ್ಯೂಸ್ ಪೋರ್ಟಲ್ 'ದಿ ವೈರ್' ವರದಿ ಮಾಡಿದೆ.
'ದಿ ವೈರ್' ಪ್ರಕಾರ ಬಿಜೆಪಿ ಶಾಸಕರ ಕಚೇರಿಯಿಂದ ಮತದಾರರಿಗೆ ಕಳುಹಿಸಲಾದ ಸಂದೇಶದಲ್ಲಿ ಅವರ ಹೆಸರುಗಳು, ಮತದಾರರ ಗುರುತಿನ ಚೀಟಿ ಸಂಖ್ಯೆ, ಸಂಬಂಧಿಕರ ಹೆಸರುಗಳು ಮತ್ತು ಬೂತ್ ವಿಳಾಸವನ್ನು ಒಳಗೊಂಡಿದೆ. ಸಹಜವಾಗಿಯೇ ಶಾಸಕರು ಕೂಡಾ ಮತದಾರರ ಮೊಬೈಲ್ ಸಂಖ್ಯೆಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಚುನಾವಣೆ: ಕಾಂಗ್ರೆಸ್ ಈಗಿರುವ 79 ಸ್ಥಾನ ಕೂಡಾ ತಲುಪಲ್ಲ- ಅಶ್ವತ್ಥ ನಾರಾಯಣ
ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಮತದಾರರ ಪಟ್ಟಿಯ ಇಮೇಜ್ ಹೊಂದಿದ್ದರೂ, ಚುನಾವಣಾ ಆಯೋಗವು ಯಾವುದೇ ಅಭ್ಯರ್ಥಿಗಳೊಂದಿಗೆ ಮೊಬೈಲ್ ಸಂಖ್ಯೆ ಅಥವಾ ವೋಟರ್ ಐಡಿಯೊಂದಿಗೆ ಲಿಂಕ್ ಮಾಡಲಾದ ನಂಬರ್ ಗಳನ್ನು ಹಂಚಿಕೊಳ್ಳುವುದಿಲ್ಲ ಎಂದು ಡೆಕ್ಕನ್ ಹೆರಾಲ್ಡ್ ವರದಿಯಲ್ಲಿ ಹೇಳಿದೆ.
ಎನ್ ಜಿ ಒ ಚಿಲುಮೆ ನೆರವಿನಿಂದ ವೋಟರ್ ಐಡಿ ಕಳ್ಳತನ ಹಗರಣ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಇದಾದ ನಂತರ ಇದೀಗ ಈ ಬೆಳವಣಿಗೆ ನಡೆದಿದೆ. ಕಳೆದ ವರ್ಷ ನವೆಂಬರ್ ನಲ್ಲಿ ದಿ ನ್ಯೂಸ್ ಮಿನಿಟ್ ಮತ್ತು ಪ್ರತಿಧ್ವನಿ ನಡೆಸಿದ ಜಂಟಿ ತನಿಖೆಯಲ್ಲಿ ಬಿಬಿಎಂಪಿ ಅಧಿಕಾರಿಗಳ ನೆಪದಲ್ಲಿ ಚಿಲುಮೆ ಬೆಂಗಳೂರಿನ ಲಕ್ಷಾಂತರ ಮತದಾರರಿಂದ ವೈಯಕ್ತಿಕ ಡೇಟಾ ಸಂಗ್ರಹಿಸಿತ್ತು.