ಜೆಡಿಎಸ್ ಪ್ರಚಾರ ವಾಹನದ ಮೇಲೆ ಕಲ್ಲು ತೂರಾಟ: ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣ
ರಾಯಚೂರಿನ ದೇವದುರ್ಗ ಪಟ್ಟಣದ ಪೊಲೀಸ್ ಠಾಣೆ ಎದುರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
Published: 05th May 2023 09:48 AM | Last Updated: 05th May 2023 03:31 PM | A+A A-

ದೇವದುರ್ಗ ಪಟ್ಟಣದಲ್ಲಿ ಪೊಲೀಸರು ಜೆಡಿಎಸ್ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ನಡೆಸುತ್ತಿರುವುದು.
ರಾಯಚೂರು: ರಾಯಚೂರಿನ ದೇವದುರ್ಗ ಪಟ್ಟಣದ ಪೊಲೀಸ್ ಠಾಣೆ ಎದುರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ಚಿತ್ರನಟ ಕಿಚ್ಚ ಸುದೀಪ್ ಅವರು ಗುರುವಾರ ದೇವದುರ್ಗ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯ್ಕ ಪರ ರೋಡ್ ಶೋ ನಡೆಸುತ್ತಿದ್ದರು. ಇದೇ ಸಮದರ್ಭದಲ್ಲಿ ಸ್ಥಳದಲ್ಲಿದ್ದ ಜೆಡಿಎಸ್ ಅಭ್ಯರ್ಥಿ ಕರಿಯಮ್ಮ ಜಿ ನಾಯ್ಕ್ ಅವರ ಚುನಾವಣಾ ಪ್ರಚಾರ ವಾಹನಕ್ಕೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಪಕ್ಷದ ಬ್ಯಾನರ್ ಹರಿದು ಹಾಕಿದ್ದಾರೆ.
ಜಾಹಿರೋದ್ದೀನ್ ಪಾಷಾ ವೃತ್ತದ ಬಳಿ ಪ್ರಚಾರ ವಾಹನ ಚಾಲಕ ಕರಿಯಮ್ಮ ಭೀಮಣ್ಣ ಅವರು ಕರಿಯಮ್ಮ ಜಿ ನಾಯ್ಕ್ ಪರ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಗಳು ವಾಹನದ ಬಳಿ ಬಂದು ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬಿಜೆಪಿ ನಾಯಕರು ಚುನಾವಣೆಗಾಗಿ ರಾಜ್ಯಕ್ಕೆ ಬರುತ್ತಾರೆ ಹೊರತು ಆಪತ್ಕಾಲಕ್ಕಲ್ಲ: ಕುಮಾರಸ್ವಾಮಿ
ವಿಷಯ ತಿಳಿದ ಕೂಡಲೇ ದೇವದುರ್ಗ ಪೊಲೀಸ್ ಠಾಣೆ ಎದುರು ಜಮಾಯಿಸಿದ ಜೆಡಿಎಸ್ ಕಾರ್ಯಕರ್ತರು ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.ಈ ವೇಳೆ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು ಎನ್ನಲಾಗಿದೆ.
ಜೆಡಿಎಸ್ ಮುಖಂಡ ಶಾಲಂ ಉದ್ದರ್ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ. ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದಾಗಿ ಪ್ರತಿಭಟನಾನಿರತ ಜೆಡಿಎಸ್ ಮುಖಂಡರಿಗೆ ಪೊಲೀಸರು ಭರವಸೆ ನೀಡಿದ್ದಾರೆ.