ವೈದ್ಯಕೀಯ ನೆರವು ಸಿಗದೆ ಪ್ರಯಾಣಿಕ ಸಾವು: 12 ಲಕ್ಷ ರೂ. ಪರಿಹಾರ ನೀಡುವಂತೆ ಇಂಡಿಗೊ ಏರ್‌ಲೈನ್ಸ್, ಕೆಎಐಗೆ ಗ್ರಾಹಕ ಆಯೋಗ ಸೂಚನೆ!
ಬೆಂಗಳೂರಿನಿಂದ ಮಂಗಳೂರಿಗೆ ತೆರಳಬೇಕಿದ್ದ ಪ್ರಯಾಣಿಕರೊಬ್ಬರು ವಿಮಾನ ನಿಲ್ದಾಣದಲ್ಲಿ ಅಸ್ವಸ್ಥಗೊಂಡು, ಸೂಕ್ತ ಸಮಯಕ್ಕೆ ವೈದ್ಯಕೀಯ ನೆರವು ದೊರೆಯದೆ ಮೃತಪಟ್ಟ ಪ್ರಕರಣವೊಂದರಲ್ಲಿ ಮೃತ ವ್ಯಕ್ತಿಯ ಕುಟುಂಬ ಸದಸ್ಯರಿಗೆ ರೂ.12 ಲಕ್ಷ ಪರಿಹಾರ ನೀಡುವಂತೆ ಇಂಡಿಗೊ ಏರ್‌ಲೈನ್ಸ್ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ)... ಬೆಂಗಳೂರು: ಬೆಂಗಳೂರಿನಿಂದ ಮಂಗ
Published: 09th May 2023 01:34 PM | Last Updated: 09th May 2023 05:05 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ತೆರಳಬೇಕಿದ್ದ ಪ್ರಯಾಣಿಕರೊಬ್ಬರು ವಿಮಾನ ನಿಲ್ದಾಣದಲ್ಲಿ ಅಸ್ವಸ್ಥಗೊಂಡು, ಸೂಕ್ತ ಸಮಯಕ್ಕೆ ವೈದ್ಯಕೀಯ ನೆರವು ದೊರೆಯದೆ ಮೃತಪಟ್ಟ ಪ್ರಕರಣವೊಂದರಲ್ಲಿ ಮೃತ ವ್ಯಕ್ತಿಯ ಕುಟುಂಬ ಸದಸ್ಯರಿಗೆ ರೂ.12 ಲಕ್ಷ ಪರಿಹಾರ ನೀಡುವಂತೆ ಇಂಡಿಗೊ ಏರ್‌ಲೈನ್ಸ್ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ವ್ಯವಸ್ಥಾಪಕ ನಿರ್ದೇಶಕರಿಗೆ ಗ್ರಾಹಕರ ಆಯೋಗ ಸೂಚನೆ ನೀಡಿದೆ.
ಸಾವನ್ನಪ್ಪಿದ ವ್ಯಕ್ತಿಯ ಪತ್ನಿ ಹಾಗೂ ಅವರ ಪುತ್ರಿ ಹೂಡಿದ್ದ ದಾವೆಯನ್ನು ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷೆ ಎಂ ಶೋಭಾ ಮತ್ತು ಸದಸ್ಯೆ ಕೆ ಅನಿತಾ ಶಿವಕುಮಾರ್ ಅವರನ್ನು ಒಳಗೊಂಡ ಪೀಠವು ಭಾಗಶಃ ಪುರಸ್ಕರಿಸಿದ್ದು, ಗ್ರಾಹಕರ ಬಗ್ಗೆ ಕೆಐಎ ಹೊಂದಿರುವ ನಿಲುವು ಕುರಿತು ಅಸಮಾಧಾನ ವ್ಯಕ್ತಪಡಿಸಿದೆ.
“ಸಾವಿನೊಂದಿಗೆ ಹೋರಾಟ ನಡೆಸುತ್ತಿದ್ದವರಿಗೆ ಕಾಳಜಿ ತೋರುವ ಬದಲು, ದೂರುದಾರರು ಗ್ರಾಹಕರೇ ಅಲ್ಲ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಹೇಳಿದೆ. ಇದು ಗ್ರಾಹಕರ ಬಗ್ಗೆ ಕೆಐಎ ಹೊಂದಿರುವ ಅಮಾನವೀಯ ನಿಲುವನ್ನು ತೋರಿಸುತ್ತದೆ” ಎಂದು ಆಯೋಗವು ಬೇಸರ ವ್ಯಕ್ತಪಡಿಸಿದೆ.
“ವಿಮಾನ ನಿಲ್ದಾಣದಲ್ಲಿ ಅಸ್ತಸ್ಥಗೊಂಡ ವ್ಯಕ್ತಿಗೆ ಸಿಬ್ಬಂದಿ ಸೂಕ್ತ ಸಮಯಕ್ಕೆ ವೈದ್ಯಕೀಯ ನೆರವು ಕಲ್ಪಿಸಲು ವಿಫಲರಾಗಿದ್ದಾರೆ. ಇದು ಸೇವಾ ನ್ಯೂನತೆ. ಅಲ್ಲದೇ, ಇಂಡಿಗೋ ಏರ್‌ಲೈನ್ಸ್ ಹಾಗೂ ಕೆಐಎ ವ್ಯವಸ್ಥಾಪಕ ನಿರ್ದೇಶಕರು ಒಟ್ಟಾಗಿ ದೂರುದಾರರಿಗೆ ರೂ.12 ಲಕ್ಷ ಪರಿಹಾರ ಪಾವತಿಸಬೇಕು. ವ್ಯಾಜ್ಯದ ವೆಚ್ಚದ ಭಾಗವಾಗಿ ರೂ.10 ಸಾವಿರ ಪಾವತಿಸಬೇಕು. ಈ ಮೊತ್ತವನ್ನು 45 ದಿನಗಳ ಒಳಗೆ ಪಾವತಿಸಬೇಕು. ತಪ್ಪಿದಲ್ಲಿ ದೂರು ದಾಖಲಾದ ದಿನದಿಂದ ಅನ್ವಯವಾಗುವಂತೆ ಪರಿಹಾರ ಪಾವತಿಸುವ ದಿನಾಂಕದವರೆಗೂ ಶೇ.8 ಬಡ್ಡಿ ಪಾವತಿಸಬೇಕು” ಎಂದು ಆದೇಶದಲ್ಲಿ ತಿಳಿಸಿದೆ.
“ಅನಾರೋಗ್ಯಕ್ಕೀಡಾದ ವ್ಯಕ್ತಿಗೆ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆತರೆ ಆತ ಮರುಜನ್ಮ ಪಡೆಯುತ್ತಾನೆ. ಈ ಅವಧಿಯನ್ನು 'ಗೋಲ್ಡನ್ ಅವರ್' ಎಂದು ಕರೆಯಲಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಸೂಕ್ತ ಸಮಯಕ್ಕೆ ವೈದ್ಯಕೀಯ ನೆರವು ದೊರೆಯದೆ ಗ್ರಾಹಕ ಚಂದ್ರಶೆಟ್ಟಿ ಮೃತಪಟ್ಟಿದ್ದಾರೆ. ಸಾವಿನ ಕುರಿತು ಕಾಳಜಿ ತೋರುವ ಬದಲು, ದೂರುದಾರರು ಗ್ರಾಹಕರೇ ಅಲ್ಲ ಎಂದು ಕೆಐಎ ಹೇಳಿದೆ. ಇದು ಗ್ರಾಹಕರ ಬಗ್ಗೆ ಹೊಂದಿರುವ ಅಮಾನವೀಯ ನಿಲುವು”ಎಂದು ಆಯೋಗ ಬೇಸರ ವ್ಯಕ್ತಪಡಿಸಿದೆ.
“ವಿಮಾನ ಸೇವೆ ಒದಗಿಸುವ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣದ ನಡುವೆ ಒಪ್ಪಂದವಿರುತ್ತದೆ. ಆದರೆ, ವಿಮಾನ ಸೇವೆ ಪಡೆಯುವ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಸಬೇಕಾಗುತ್ತದೆ. ಏರ್‌ಪೋರ್ಟ್ ಇಲ್ಲದೆಯೇ ಯಾವೊಬ್ಬ ಪ್ರಯಾಣಿಕನೂ ವಿಮಾನ ಸೇವೆ ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲಿಗೆ ವಿಮಾನ ನಿಲ್ದಾಣ ಪ್ರಾಧಿಕಾರಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ವಿಮಾನಯಾನ ಸಂಸ್ಥೆಗಳ ಗ್ರಾಹಕರಿಗೆ ಸೇವೆ ಒದಗಿಸುತ್ತವೆ. ಆದ್ದರಿಂದ, ವಿಮಾನ ನಿಲ್ದಾಣದ ಆವರಣದಲ್ಲಿ ಅನಾರೋಗ್ಯಕ್ಕೀಡಾದವರಿಗೆ ವೈದ್ಯಕೀಯ ನೆರವು ಕಲ್ಪಿಸುವ ಜವಾಬ್ದಾರಿ ವಿಮಾನ ನಿಲ್ದಾಣದ್ದೂ ಆಗಿರುತ್ತದೆ. ಈ ಜವಾಬ್ದಾರಿಯಿಂದ ಏರ್‌ಪೋರ್ಟ್ ನುಣುಚಿಕೊಳ್ಳಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ವೈನ್ ಖರೀದಿಸಿದಾತನಿಗೆ 90 ರೂ. ಹೆಚ್ಚುವರಿ ಬಿಲ್: 10 ಸಾವಿರ ರೂ. ಪರಿಹಾರ ನೀಡುವಂತೆ ರೆಸ್ಟೊರೆಂಟ್'ಗೆ ಗ್ರಾಹಕ ಆಯೋಗ ಸೂಚನೆ!
ದೂರಿಗೆ ಸಂಬಂಧಿಸಿದಂತೆ ಇಂಡಿಗೋ ಏರ್‌ಲೈನ್ಸ್ ಗ್ರಾಹಕ ನ್ಯಾಯಾಲಯದಲ್ಲಿ ಯಾವುದೇ ಲಿಖಿತ ಹೇಳಿಕೆಗಳನ್ನು ದಾಖಲಿಸಿರಲಿಲ್ಲ. ಆದರೆ, ದೂರುದಾರರ ಆರೋಪಗಳನ್ನು ಅಲ್ಲಗಳೆದಿದ್ದ ಕೆಐಎ, ಪ್ರಯಾಣಿಕರು ಹಾಗೂ ವಿಮಾನ ನಿಲ್ದಾಣದ ನಡುವೆ ಯಾವುದೇ ಒಪ್ಪಂದವಿರದ ಕಾರಣ ದೂರುದಾರರು ‘ಗ್ರಾಹಕ’ ವ್ಯಾಪ್ತಿಗೆ ಒಳಪಡುವುದೇ ಇಲ್ಲ. ಮೇಲಾಗಿ ನಿಜಕ್ಕೂ ಗಂಭೀರ ಆರೋಗ್ಯ ಸಮಸ್ಯೆ ಇದ್ದರೆ ಎಮರ್ಜೆನ್ಸಿ ಕೇರ್‌ಗೆ ಮನವಿ ಮಾಡಬೇಕಿತ್ತು. ಅದರ ಬದಲಿಗೆ ಗಾಲಿಕುರ್ಚಿ ಒದಗಿಸುವಂತೆ ದೂರುದಾರರು ಕೇಳಿಕೊಂಡಿದ್ದಾರೆ. ಚಂದ್ರಶೆಟ್ಟಿ ಅವರನ್ನು ಕ್ಲಿನಿಕ್‌ಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ವೈದ್ಯರ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಆವರಣದಲ್ಲೇ ಇದ್ದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಮೂಲಕ ಚಂದ್ರಶೆಟ್ಟಿ ಅವರಿಗೆ ಸಕಾಲದಲ್ಲಿ ವೈದ್ಯಕೀಯ ನೆರವು ಒದಗಿಸಲು ಸಿಬ್ಬಂದಿ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದ್ದು, ಯಾವುದೇ ನಿರ್ಲಕ್ಷ್ಯ ಅಥವಾ ಸೇವಾ ನ್ಯೂನತೆ ಎಸಗಿಲ್ಲ. ದೂರುದಾರರು ಕಾನೂನುಬಾಹಿರವಾಗಿ ಲಾಭ ಪಡೆಯಲು ಯತ್ನಿಸುತ್ತಿದ್ದು, ದೂರನ್ನು ವಜಾಗೊಳಿಸಬೇಕು" ಎಂದು ಕೋರಿತ್ತು.
ಏನಿದು ಪ್ರಕರಣ?
ಕೆ ಚಂದ್ರಶೆಟ್ಟಿ (60) ಮತ್ತವರ ಪತ್ನಿ ಹಾಗೂ ಮಗಳು 2021ರ ನವೆಂಬರ್ 19ರಂದು ಮಧ್ಯಾಹ್ನ 2.45ಕ್ಕೆ ಇಂಡಿಗೋ ಏರ್‌ಲೈನ್ಸ್ ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸಲು ಕೆಎಐ ತಲುಪಿತ್ತು. ಚೆಕ್-ಇನ್ ಪ್ರಕ್ರಿಯೆನ್ನು ಮುಗಿಸಿತ್ತು.
ಈ ವೇಳೆ ಇದ್ದಕ್ಕಿದ್ದಂತೆ ಚಂದ್ರಶೆಟ್ಟಿ ತೀವ್ರ ಆಯಾಸಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಗಾಲಿಕುರ್ಚಿ ಒದಗಿಸುವಂತೆ ಇಂಡಿಗೋ ಏರ್‌ಲೈನ್ಸ್ ಹಾಗೂ ಏರ್‌ಪೋರ್ಟ್ ಸಿಬ್ಬಂದಿ ಬಳಿ ಪತ್ನಿ ಹಾಗೂ ಮಗಳು ಕೇಳಿಕೊಂಡರೂ ಸಿಬ್ಬಂದಿಯಿಂದ ತಕ್ಷಣಕ್ಕೆ ಯಾವುದೇ ನೆರವು ದೊರೆಯಲಿಲ್ಲ.
ಇದನ್ನೂ ಓದಿ: ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಕಾಲುಗಳ ಕಳೆದುಕೊಂಡ ಮಹಿಳೆ: ರೂ.25 ಲಕ್ಷ ಪರಿಹಾರ ನೀಡುವಂತೆ ಆಸ್ಪತ್ರೆಗೆ ಗ್ರಾಹಕ ಆಯೋಗ ಸೂಚನೆ
ಆ ವೇಳೆಗಾಗಲೇ ಪ್ರಜ್ಞೆ ತಪ್ಪಿದ್ದ ಚಂದ್ರಶೆಟ್ಟಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಆಗ ಸಾರ್ವಜನಿಕರು ಹಾಗೂ ಕೆಲ ಸಿಬ್ಬಂದಿ ನೆರವಿಗೆ ಧಾವಿಸಿದ್ದರು. ನಂತರ ಏರ್‌ಪೋರ್ಟ್‌ನಲ್ಲಿದ್ದ ತುರ್ತು ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ತಪಾಸಣೆ ನಡೆಸಿ, ಬೇರೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು. ಬೇರೆ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗದ ಮಧ್ಯೆಯಲ್ಲಿ ಚಂದ್ರಶೆಟ್ಟಿ ಸಾವನ್ನಪ್ಪಿದ್ದರು.
ಸಾವಿಗೆ ಇಂಡಿಗೋ ಏರ್‌ಲೈನ್ಸ್ ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣವಾಗಿದೆ. ಸರಿಯಾದ ಸಮಯಕ್ಕೆ ವೈದ್ಯಕೀಯ ನೆರವು ಕಲ್ಪಿಸಿದ್ದರೆ ಅವರು ಬದುಕುತ್ತಿದ್ದರು. ಒಂದೂವರೆ ತಾಸಿಗೂ ಅಧಿಕ ಸಮಯ ಕಳೆದರೂ ನೆರವು ದೊರೆಯದೆ ಅವರು ಮೃತಪಟ್ಟಿದ್ದಾರೆ ಎಂದು ಚಂದ್ರಶೆಟ್ಟಿಯವರ ಕುಟುಂಬಸ್ಥರು ಆರೋಪಿಸಿದ್ದರು. ಅಲ್ಲದೆ, ಈ ಸಂಬಂಧ ಗ್ರಾಹಕ ಆಯೋಗದ ಮೊರೆ ಹೋಗಿದ್ದರು.
ಚಂದ್ರಶೆಟ್ಟಿ ಸಾವಿನಿಂದ ಕುಟುಂಬ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸೇವಾ ನ್ಯೂನತೆ ಎಸಗಿರುವ ಇಂಡಿಗೋ ಏರ್‌ಲೈನ್ಸ್ ಹಾಗೂ ಕೆಐಎ ವತಿಯಿಂದ ರೂ.30 ಲಕ್ಷ ರೂಪಾಯಿ ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿಕೊಂಡಿತ್ತು.