ಶ್ರೀನಿವಾಸಪುರದಲ್ಲಿ ಘರ್ಷಣೆ: ಕಾಂಗ್ರೆಸ್ ಕೌನ್ಸಿಲರ್'ಗೆ ಚೂರಿ ಇರಿತ

ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವಿನ ಮಾರಾಮಾರಿಯಿಂದಾಗಿ ಕಾಂಗ್ರೆಸ್ ಕೌನ್ಸಿಲರ್'ವೊಬ್ಬರು ಚೂರಿ ಇರಿತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶ್ರೀನಿವಾಸಪುರ ಪಟ್ಟಣದಲ್ಲಿ ಗುರುವಾರ ರಾತ್ರಿ ವರದಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋಲಾರ: ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವಿನ ಮಾರಾಮಾರಿಯಿಂದಾಗಿ ಕಾಂಗ್ರೆಸ್ ಕೌನ್ಸಿಲರ್'ವೊಬ್ಬರು ಚೂರಿ ಇರಿತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶ್ರೀನಿವಾಸಪುರ ಪಟ್ಟಣದಲ್ಲಿ ಗುರುವಾರ ರಾತ್ರಿ ವರದಿಯಾಗಿದೆ.

ಚಿಂತಾಮಣಿ ರಸ್ತೆಯ ಬೂತ್ ನಂ.147 ಹೈದರ್ ಅಲಿ ಮೊಹಲ್ಲಾ ಉರ್ದು ಶಾಲೆ ಬಳಿ ಮತದಾನದ ದಿನದಂದು ಶ್ರೀನಿವಾಸಪುರ ಪಟ್ಟಣದ ಪುರಸಭೆ ಸದಸ್ಯರೂ ಆದ ಕಾಂಗ್ರೆಸ್ ಪಕ್ಷದ ಎಟಿಎಸ್ ತಾಜಮುಲ್ ಮತ್ತು ಜೆಡಿಎಸ್ ಪಕ್ಷದ ಸಾದಿಕ್ ಅವರ ಬೆಂಬಲಿಗರ ನಡುವೆ ಘರ್ಷಣೆ ಶುರುವಾಗಿದೆ.

ಸಂಜೆ ಮತದಾನ ಪೂರ್ಣಗೊಳ್ಳುತ್ತಿದ್ದಂತೆಯೇ ಎರಡೂ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಬೆಂಬಲಿಗರು ಘೋಷಣೆಗಳನ್ನು ಕೂಗಿದ್ದಾರೆ. ಪಟಾಕಿಗಳನ್ನು ಸಿಡಿಸಿದ್ದಾರೆ. ಈ ವೇಳೆ ಎರಡೂ ಪಕ್ಷಗಳ ಬೆಂಬಲಿಗರ ನಡುವೆ ಘರ್ಷಣೆ ಏರ್ಪಟ್ಟಿದೆ. ಘರ್ಷಣೆ ವೇಳೆ ಕಾಂಗ್ರೆಸ್ ಪಕ್ಷದ ಎಟಿಎಸ್ ತಾಜಮುಲ್ ಅವರಿಗೆ ಚೂರಿಯಿಂದ ಇರಿಯಲಾಗಿದೆ. ಕೂಡಲೇ ಅವರನ್ನು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಕೋಲಾರದ ಆಸ್ಪತ್ರೆಗೆ ರವಾನಿಸಲಾಗಿದೆ. ಇದೀಗ ತಾಜಮುಲ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆಂದು ತಿಳಿದುಬಂದಿದೆ.

ಇನ್ನು ಘರ್ಷಣೆ ವೇಳೆ ಪೊಲೀಸರು ಗುಂಪನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ್ದರು ಎಂದು ವರದಿಗಳಿಂದ ತಿಳಿದುಬಂದಿದೆ.

ಘಟನೆ ಸಂಬಂಧ ಸೆಂಟ್ರಲ್ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಬಿ.ಆರ್.ರವಿಕಾಂತೇಗೌಡ ಅವರು ಮಾತನಾಡಿ, ಕೋಲಾರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಯಾವುದೇ ವ್ಯಕ್ತಿ ಘರ್ಷಣೆಗೆ ಯತ್ನಿಸಿದರೆ, ಶಾಂತಿ ಕದಡಲು ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ, ಘಟನೆ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com