ಪರಮೇಶ್ವರ್'ಗೆ ಮತ ಹಾಕಿದರೂ ಇವಿಎಂ ವಿವಿಪ್ಯಾಟ್ ತೋರಿಸಿದ್ದು ಬಿಎಸ್'ಪಿ ಗುರುತು?
ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುಂದಿದ ಎಂದು ಭವಿಷ್ಯ ನುಡಿಯಲಾಗಿದ್ದು, ಕಾಂಗ್ರೆಸ್ ಪರ ಅಲೆ ಇರುವುದು ಇದರಿಂದ ಸಾಬೀತಾಗಿದೆ ಎಂದು ಹೇಳಿರುವ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು, ಇವಿಎಂ ಕಾರ್ಯವೈಖರಿ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ.
Published: 12th May 2023 11:05 AM | Last Updated: 12th May 2023 02:20 PM | A+A A-

ಪರಮೇಶ್ವರ್
ತುಮಕೂರು: ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುಂದಿದ ಎಂದು ಭವಿಷ್ಯ ನುಡಿಯಲಾಗಿದ್ದು, ಕಾಂಗ್ರೆಸ್ ಪರ ಅಲೆ ಇರುವುದು ಇದರಿಂದ ಸಾಬೀತಾಗಿದೆ ಎಂದು ಹೇಳಿರುವ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು, ಇವಿಎಂ ಕಾರ್ಯವೈಖರಿ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವಿಎಂ ಮೇಲೆ ಮೊದಲಿನಿಂದಲೂ ಆಕ್ಷೇಪವಿದೆ. ಬ್ಯಾನ್ ಮಾಡಿ ಎಂದು ಹೇಳುತ್ತಲೇ ಇದ್ದೇವೆ. ಬಡಕನಹಳ್ಳಿಯ ಕೊರಟಗೆರೆಯ ಮತಗಟ್ಟೆಯೊಂದರಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಬಟನ್ ಒತ್ತಿದರೂ ಇವಿಎಂನ ವಿವಿಪ್ಯಾಟ್ ಬಿಎಸ್‌ಪಿ ಅಭ್ಯರ್ಥಿಗೆ ಮತವನ್ನು ತೋರಿಸಿದೆ. ಬಳಿಕ ಇವಿಎಂನ್ನು ಬದಲಿಸಲಾಯಿತು. ಆದರೆ, ಅಷ್ಟೊತ್ತಿಗಾಗಲೇ 300 ಜನರು ತಮ್ಮ ಮತ ಹಕ್ಕು ಚಲಾಯಿಸಿದ್ದರು. ಈ ನಿಟ್ಟಿನಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆಂಬುದನ್ನು ಕಾದು ನೋಡೋಣ ಎಂದು ಹೇಳಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ತುಮಕೂರು ನಗರ ಮತ್ತು ಶಿರಾ ಹೊರತು ಪಡಿಸಿ, ಉಳಿದ ಕ್ಷೇತ್ರಗಳಲ್ಲಿ ಶೇ.80ಕ್ಕಿಂತಲೂ ಹೆಚ್ಚು ಮತದಾನವಾಗಿದೆ.ನಮಗೆ ಇರುವ ಮಾಹಿತಿ ಪ್ರಕಾರ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬರಲಿದೆ. ಇದನ್ನೇ ಸಮೀಕ್ಷೆಗಳು ಹೇಳಿವೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಮೊದಲು ಸಂಪುಟ ಸಭೆಯಲ್ಲಿಯೇ ಪಕ್ಷ ಘೋಷಿಸಿರುವ ಐದು ಗ್ಯಾರಂಟಿಗಳನ್ನು ಜಾರಿಗೆ ತರಲಿದೆ ಎಂದು ಹೇಳಿದರು.
ಮಹಿಳೆಯರು, ಸಾಮಾಜಿಕವಾಗಿ ಹಿಂದುಳಿದ ಜನರು ನಮ್ಮ ಪ್ರಣಾಳಿಕೆಯನ್ನು ನಂಬಿ ಮತ ನೀಡಿದ್ದಾರೆ. ಹಾಗಾಗಿ ನಾವುಗಳು ಸಹ ಜನರ ಅಭಿಪ್ರಾಯಕ್ಕೆ ಬದ್ದತೆಯನ್ನು ತೋರಿಸಬೇಕಾಗಿದೆ ಎಂದು ತಿಳಿಸಿದರು.