ಸಾತನೂರಿನಲ್ಲಿ ಜಾನುವಾರು ವ್ಯಾಪಾರಿ ಹತ್ಯೆ ಪ್ರಕರಣ; ಪುನೀತ್ ಕೆರೆಹಳ್ಳಿ ಸೇರಿ ಐವರಿಗೆ ಜಾಮೀನು ನೀಡಿದ ಹೈಕೋರ್ಟ್

ರಾಮನಗರ ಜಿಲ್ಲೆಯ ಕನಕಪುರ ಸಮೀಪದ ಸಾತನೂರಿನಲ್ಲಿ ಜಾನುವಾರು ವ್ಯಾಪಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಪಂಥೀಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಹಾಗೂ ಇತರ ನಾಲ್ವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ರಾಮನಗರ ಜಿಲ್ಲೆಯ ಕನಕಪುರ ಸಮೀಪದ ಸಾತನೂರಿನಲ್ಲಿ ಜಾನುವಾರು ವ್ಯಾಪಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಪಂಥೀಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಹಾಗೂ ಇತರ ನಾಲ್ವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಎಲ್ಲಾ ಆರೋಪಿಗಳನ್ನು ಏಪ್ರಿಲ್ 5ರಂದು ರಾಜಸ್ಥಾನದಲ್ಲಿ ಬಂಧಿಸಲಾಗಿತ್ತು.

ರಾಮನಗರ ಜಿಲ್ಲೆಯಲ್ಲಿ ಗೋರಕ್ಷಕರ ತಂಡವೊಂದು ದನಗಳನ್ನು ಸಾಗಿಸುತ್ತಿದ್ದ ವಾಹನದ ಚಾಲಕನನ್ನು ಥಳಿಸಿ ಹತ್ಯೆಗೈದಿತ್ತು. ಮಂಡ್ಯ ನಿವಾಸಿ ಇದ್ರೀಸ್ ಪಾಷಾ (39) ಮೃತದೇಹ ಸಾತನೂರು ಪೊಲೀಸ್ ಠಾಣೆಯಿಂದ ಸ್ವಲ್ಪ ದೂರದಲ್ಲೇ ಪತ್ತೆಯಾಗಿತ್ತು. ಈ ಸಂಬಂಧ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.

ವಿಚಾರಣಾ ನ್ಯಾಯಾಲಯವು ಜಾಮೀನು ನಿರಾಕರಿಸಿದ ನಂತರ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು.
ಜಾಮೀನು ಮಂಜೂರು ಮಾಡುವ ಮುನ್ನ ಆರೋಪಿಗಳು ಸಲ್ಲಿಸಿದ್ದ ಮೂರು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಂಜಿ ಉಮಾ ಅವರ ರಜಾಕಾಲದ ಪೀಠ ವಿಚಾರಣೆ ನಡೆಸಿತು.

ತನಿಖೆ ಪೂರ್ಣಗೊಂಡಿದ್ದು, ಪೊಲೀಸರು ಈಗಾಗಲೇ ವಿಚಾರಣಾ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಆದ್ದರಿಂದ ಕಸ್ಟಡಿ ವಿಚಾರಣೆಯ ಅಗತ್ಯವಿಲ್ಲ ಎಂದು ಆರೋಪಿಗಳು ಅರ್ಜಿಯಲ್ಲಿ ತಿಳಿಸಿದ್ದರು.

ಅವರ ವಿರುದ್ಧ ಐಪಿಸಿಯ ಸೆಕ್ಷನ್ 34, ಸೆಕ್ಷನ್ 302, 324, 341, 504, 506 ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಪುನೀತ್ ಕೆರೆಹಳ್ಳಿ ಯಾರು?

ಪುನೀತ್ ಕೆರೆಹಳ್ಳಿ ಬಲಪಂಥೀಯ ಕಾರ್ಯಕರ್ತನಾಗಿದ್ದು, ರಾಷ್ಟ್ರ ರಕ್ಷಣಾ ಪಡೆ ಎಂಬ ಸಂಘಟನೆಯನ್ನು ಆರಂಭಿಸಿದ್ದಾರೆ. ಅವರು ಈ ಹಿಂದೆ ಹಲಾಲ್ ಮಾಂಸದ ಬಹಿಷ್ಕಾರ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಹಿಂದೂಗಳು ಮುಸ್ಲಿಮರೊಂದಿಗೆ ವ್ಯಾಪಾರ ಮಾಡಬೇಡಿ ಎಂದು ಪ್ರಚಾರವನ್ನೂ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com