ಸಿದ್ದು-ಡಿಕೆಶಿ ಪದಗ್ರಹಣ ಸಮಾರಂಭದ ನಡುವೆಯೂ ಮೊದಲ ದಿನ ಸಿಇಟಿ ಸುಸೂತ್ರ

ರಾಜಧಾನಿ ಬೆಂಗಳೂರಿನ ಎಲ್ಲಾ 121 ಪರೀಕ್ಷಾ ಕೇಂದ್ರಗಳಲ್ಲೂ ಶನಿವಾರ ಸಿಇಟಿ ಪರೀಕ್ಷೆ ಸುಸೂತ್ರವಾಗಿ  ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಎಲ್ಲಾ 121 ಪರೀಕ್ಷಾ ಕೇಂದ್ರಗಳಲ್ಲೂ ಶನಿವಾರ ಸಿಇಟಿ ಪರೀಕ್ಷೆ ಸುಸೂತ್ರವಾಗಿ ನಡೆದಿದೆ.

ನೂತನ ಮುಖ್ಯಮಂತ್ರಿ ಪ್ರಮಾಣವಚನ ಸಮಾರಂಭ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ನಿಗದಿತ ಅವಧಿಗಿಂತ ಎರಡು ಗಂಟೆ ಮೊದಲೇ ಪರೀಕ್ಷಾ ಕೇಂದ್ರಗಳನ್ನು ತಲುಪಿದ್ದರಿಂದ ಯಾವುದೇ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿಲ್ಲ. ಕೆಲವೆಡೆ ನಿಗದಿತ ಅವಧಿಯೊಳಗೆ ಕೇಂದ್ರಕ್ಕೆ ತಲುಪಲು ವಿದ್ಯಾರ್ಥಿಗಳಿಗೆ ಪೊಲೀಸರು ಸಹಕಾರ ನೀಡಿದ್ದರಿಂದ ಯಾವುದೇ ಸಮಸ್ಯೆಯಾಗಲಿಲ್ಲ.

ಮೆಜೆಸ್ಟಿಕ್ ಸೇರಿದಂತೆ ಕೆಲವೆಡೆ ಸಂಚಾರ ದಟ್ಟಣೆಯಲ್ಲಿ ಸಿಲುಕಿದ ಒಂದಿಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಹೊಯ್ಸಳ ಕಾರಿನಲ್ಲಿ ಕೋರಮಂಗಲ, ಜಯನಗರದ ಪರೀಕ್ಷಾ ಕೇಂದ್ರ ತಲುಪಿಸಿದ್ದರಿಂದ ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದಾರೆ.

ಕಂಠೀರವ ಕ್ರೀಡಾಂಗಣ ಸಮೀಪದಲ್ಲಿದ್ದ ಕೆಲವು ಕೇಂದ್ರಗಳಲ್ಲಿ ಪ್ರಾಧಿಕಾರವೇ ವಿದ್ಯಾರ್ಥಿಗಳಿಗೆ ಉಪಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆಯನ್ನೂ ಮಾಡಿತ್ತು.

ಈ ಮಧ್ಯೆ ಕಂಠೀರವ ಕ್ರೀಡಾಂಗಣದ ಸಮೀಪವಿದ್ದ ಸೆಂಟ್ ಜೋಸೆಫ್ ಕಾಲೇಜಿನ ಕೇಂದ್ರದಲ್ಲಿ ಬೆಳಿಗ್ಗೆ ಜೀವಶಾಸ್ತ್ರ ಪರೀಕ್ಷೆ ಆರಂಭವಾದ ವೇಳೆ ಪ್ರಮಾಣವಚನ ಕಾರ್ಯಕ್ರಮದ ಜೈಕಾರಗಳ ಭಾರೀ ಶಬ್ಧ ಕೇಳಿರುತ್ತಿದ್ದರಿಂದ ಏಕಾಗ್ರತೆಯಿಂದ ಪರೀಕ್ಷೆ ಬರೆಯಲು ಕೊಂಚ ಸಮಸ್ಯೆಯಾಗಿತ್ತು ಎನ್ನಲಾಗುತ್ತಿದೆ.

ಪರೀಕ್ಷಾ ಕೇಂದ್ರಕ್ಕೆ ಬರಲು ಯಾವುದೇ ಸಮಸ್ಯೆಗಳಾಗಲಿಲ್ಲ. ಕೆಇಎ ಸೂಚನೆಯಂತೆ ನಾವು 8 ಗಂಟೆಗೆ ಸುಮಾರಿಗೆ ಪರೀಕ್ಷಾ ಕೇಂದ್ರಗಳ ತಲುಪಿದ್ದೆವು. ಉಪಾಹಾರ ಮತ್ತು ಮಧ್ಯಾಹ್ನದ ಊಟವನ್ನು ನೀಡುವುದಾಗಿ ಕೆಇಎ ತಿಳಿಸಿದ್ದರಿಂದ ಪರೀಕ್ಷಾ ಕೇಂದ್ರಕ್ಕೆ ಶೀಘ್ರಗತಿಯಲ್ಲಿ ಬರಲು ಸಾಧ್ಯವಾಯಿತು. ಎಂದು ಸೇಂಟ್ ಜೋಸೆಫ್ಸ್ ಭಾರತೀಯ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳಲ್ಲಿ ಒಬ್ಬರಾದ ರಾಜೇಶ್ವರಿ ಹೇಳಿದ್ದಾರೆ.

ನಾನು ಬೆಳಿಗ್ಗೆ 8.30 ರ ಸುಮಾರಿಗೆ ಪರೀಕ್ಷಾ ಕೇಂದ್ರ ತಲುಪಿದ್ದೆ. ಸಂಚಾರದ ವೇಳೆ ರಸ್ತೆಗಳಲ್ಲಿ ಸಾಕಷ್ಟು ಸಂಚಾರ ದಟ್ಟಣೆ ಇತ್ತು. ಟ್ರಾಫಿಕ್ ನಡುವೆ ವಾಹನ ಚಾಲನೆ ಬಹಳ ಕಷ್ಟಕರವಾಗಿತ್ತು. ಸಂಚಾರ ದಟ್ಟಣೆ ನಡುವಲ್ಲೂ 10 ನಿಮಿಷಗಳಷ್ಟೇ ತಡವಾಗಿತ್ತು. ಎಂದು ಮತ್ತೊಬ್ಬ ವಿದ್ಯಾರ್ಥಿ ವಿಷ್ಣು ಎಂಬುವವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com