ಸಚಿವ ಸಂಪುಟ ವಿಸ್ತರಣೆ: ಖಾತೆ ಹಂಚಿಕೆ ಕಸರತ್ತು: ದೆಹಲಿಯಲ್ಲಿ ಸಿದ್ದರಾಮಯ್ಯ- ಡಿಕೆ.ಶಿವಕುಮಾರ್; ಹೈಕಮಾಂಡ್ ಜೊತೆ ಫೈನಲ್ ಸಭೆ!
ಮುಖ್ಯಮಂತ್ರಿ ಸ್ಥಾನದ ಕುರಿತು ಸಿದ್ದರಾಮಯ್ಯ-ಡಿಕೆ.ಶಿವಕುಮಾರ್ ನಡುವಿನ ಹೋರಾಟದ ಬಳಿಕ ಇದೀಗ ಉಭಯ ನಾಯಕರು ತಮ್ಮ ನಿಷ್ಠಾವಂತರಿಗೆ ಸಚಿವ ಸ್ಥಾನ ದೊರಕುವಂತೆ ಮಾಡಲು ಹಗ್ಗಜಗ್ಗಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ ದಂಡು ದಾಳಿ ಕಟ್ಟಿಕೊಂಟು ಸಚಿವ ಆಕಾಂಕ್ಷಿಗಳು ಹೈಕಮಾಂಡ್ ಮಟ್ಟದಲ್ಲಿಯೇ ಲಾಬಿ ನಡೆಸುತ್ತಿದ್ದಾರೆ.
Published: 25th May 2023 08:51 AM | Last Updated: 25th May 2023 06:44 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಮುಖ್ಯಮಂತ್ರಿ ಸ್ಥಾನದ ಕುರಿತು ಸಿದ್ದರಾಮಯ್ಯ-ಡಿಕೆ.ಶಿವಕುಮಾರ್ ನಡುವಿನ ಹೋರಾಟದ ಬಳಿಕ ಇದೀಗ ಉಭಯ ನಾಯಕರು ತಮ್ಮ ನಿಷ್ಠಾವಂತರಿಗೆ ಸಚಿವ ಸ್ಥಾನ ದೊರಕುವಂತೆ ಮಾಡಲು ಹಗ್ಗಜಗ್ಗಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ ದಂಡು ದಾಳಿ ಕಟ್ಟಿಕೊಂಟು ಸಚಿವ ಆಕಾಂಕ್ಷಿಗಳು ಹೈಕಮಾಂಡ್ ಮಟ್ಟದಲ್ಲಿಯೇ ಲಾಬಿ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ಒಟ್ಟು 10 ಮಂದಿ ಈಗ ಸ್ಥಾನ ಪಡೆದಿದ್ದಾರೆ. ಇನ್ನು ಉಳಿದಿರುವ 23 ಸ್ಥಾನಗಳನ್ನು ಹಂಚಿಕೆ ಮಾಡಬೇಕಿದೆ. ಹೈಕಮಾಂಡ್ ಒಪ್ಪಿಗೆ ನೀಡಿದ್ದೇ ಆದರೆ, ಒಂದೆರಡು ದಿನಗಳಲ್ಲಿ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
ಬುಧವಾರ ನಡೆದ ವಿಧಾನಸಭೆ ಕಲಾಪದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಚಿವ ವಿಸ್ತರಣೆಯಾಗದ ಕುರಿತು ಸರ್ಕಾರದ ವಿರುದ್ಧ ಕಿಡಿಕಾರಿದ್ದರು.
ಇದರ ಬೆನ್ನಲ್ಲೇ ಉಭಯ ನಾಯಕರು ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಕುರಿತು ಕಸರತ್ತು ಆರಂಭಿಸಿದ್ದಾರೆ. ಬುಧವಾರ ಸಿದ್ದರಾಮಯ್ಯ ಅವರಿಗಿಂತ ಮುಂಚಿತವಾಗಿಯೇ ಶಿವಕುಮಾರ್ ದೆಹಲಿಗೆ ತಲುಪಿದ್ದರು. ನವದೆಹಲಿಗೆ ತೆರಳಿದ ಅವರು, ಸಹೋದರ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಜಲಸಂಪನ್ಮೂಲ ಹಾಗೂ ಮತ್ತೊಂದು ಪ್ರಮುಖ ಖಾತೆಗಳು ನನಗೆ ಬೇಕು ಎಂದು ಡಿಕೆ.ಶಿವಕುಮಾರ್ ಅವರು ಹೈಕಮಾಂಡ್ ಮುಂದೆ ಆಗ್ರಹಿಸಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಕಸರತ್ತು: ದೆಹಲಿಯಲ್ಲಿ ಕಾಂಗ್ರೆಸ್ ವಾರ್ ರೂಂನಲ್ಲಿ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ
ಈ ಬೆಳವಣಿಗೆಯ ನಡುವಲ್ಲೇ ಸಿದ್ದರಾಮಯ್ಯ ಅವರೂ ಕೂಡ ನವದೆಹಲಿಗೆ ಭೇಟಿ ನೀಡಿದ್ದು, ಉಭಯ ನಾಯಕರು ಇಂದು ಎಐಸಿಸಿ ನಾಯಕರ ಜತೆ ಮಾತುಕತೆ ನಡೆಸಲಿದ್ದಾರೆ.
ಡಿಕೆ.ಶಿವಕುಮಾರ್ ಅಥವಾ ಇನ್ನಾವುದೇ ನಾಯಕರಿದ್ದರೂ, ಪ್ರಮುಖ ಖಾತೆಯೊಂದನ್ನು ನೀಡಲಾಗುತ್ತದೆ ಎಂದು ನಾಯಕರೊಬ್ಬರು ಹೇಳಿದ್ದಾರೆ.
ಡಿಕೆ.ಶಿವಕುಮಾರ್ ಅವರು ಜಲಸಂಪನ್ಮೂಲ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಇದೇ ಖಾತೆ ಮೇಲೆ ಎಂಬಿ.ಪಾಟೀಲ್ ಅವರು ಕಣ್ಣಿಟ್ಟಿದ್ದಾರೆ.
ಕಂದಾಯ ಖಾತೆಗಾಗಿ ಕೇಂದ್ರದ ಮಾಜಿ ಸಚಿವ ಹಾಗೂ ದೇವನಹಳ್ಳಿ ಶಾಸಕ ಕೆ.ಎಚ್.ಮುನಿಯಪ್ಪ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಆದರೆ ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳ ಖಾತೆಯನ್ನು ಪರಮೇಶ್ವರ್ ಅವರಿಗೆ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಚಾಮರಾಜಪೇಟೆ ಶಾಸಕ ಮತ್ತು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರು ವಸತಿ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆಂದು ಹೇಳಲಾಗುತ್ತಿದೆ.
ಈ ಖಾತೆಯ ಮೂಲಕ ಅಗತ್ಯವಿರುವ ಜನರಿಗೆ ಸಹಾಯ ಮಾಡುವ ಉದ್ದೇಶವನ್ನು ಅವರು ಹೊಂದಿದ್ದಾರೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕಾಂಗ್ರೆಸ್ ಹಿರಿತಲೆಗಳಿಗೆ ಸಂಪುಟದಿಂದ ಗೇಟ್ ಪಾಸ್? ಸಚಿವ ಸ್ಥಾನ ಪಡೆಯಲು ಶಾಸಕರ ಸರ್ಕಸ್!
ಈ ಹಿಂದೆ ಸಿದ್ದರಾಮಯ್ಯ ಅವರು ಜಮೀರ್ ಅವರಿಗೆ ವಸತಿ ಖಾತೆ ನೀಡುವ ಭರವಸೆ ನೀಡಿದ್ದರು ಎಂದು ಹೇಳಲಾಗುತ್ತಿದೆ.
ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ, ಮುಂದಿನ ಐದು ವರ್ಷಗಳಲ್ಲಿ ಬಡವರಿಗೆ ಸುಮಾರು 15,000 ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
ಈ ನುವೆ ವಿಧಾನಸಭೆಯಲ್ಲಿ ಏಕೈಕ ಕುಂಚಿಟಿಗ-ಒಕ್ಕಲಿಗ ನಾಯಕರಾಗಿರುವ ಮಾಜಿ ಸಚಿವ ಟಿ.ಬಿ.ಜಯಚಂದ್ರ ಕೂಡ ನವದೆಹಲಿಗೆ ತೆರಳಿದ್ದು, ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ವೀರಶೈವ-ಲಿಂಗಾಯತ ಮುಖಂಡರಾದ ಡಾ.ಶರಣಪ್ರಕಾಶ ಪಾಟೀಲ್, ಲಕ್ಷ್ಮಣ ಸವದಿ, ಲಕ್ಷ್ಮೀ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ, ಶಿವಾನಂದ ಪಾಟೀಲ್, ಎಸ್.ಎಸ್.ಮಲ್ಲಿಕಾರ್ಜುನ, ವಿನಯ್ ಕುಲಕರ್ಣಿ, ಜಿ.ಎಸ್.ಪಾಟೀಲ್, ಬಸವರಾಜ ರಾಯರೆಡ್ಡಿ ಮುಂತಾದವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಹಿರಿಯ ಮುಖಂಡರಾದ ಎಚ್.ಕೆ.ಪಾಟೀಲ್, ಆರ್.ವಿ.ದೇಶಪಾಂಡೆ, ದಿನೇಶ್ ಗುಂಡೂರಾವ್ ಹಾಗೂ ಎಸ್ಟಿ ಮುಖಂಡರಾದ ಕೆ.ಎನ್.ರಾಜಣ್ಣ, ನಾಗೇಂದ್ರ, ತುಕಾರಾಂ, ಮಾಜಿ ಸಚಿವ ಸಂತೋಷ್ ಲಾಡ್, ಕುರುಬ ಸಮಾಜದ ಮುಖಂಡರಾದ ಬೈರತಿ ಸುರೇಶ್, ರಾಘವೇಂದ್ರ ಹಿಟ್ನಾಳ್ ಕೂಡ ರೇಸ್ ನಲ್ಲಿದ್ದಾರೆ.
ಹಿರಿಯೂರು ಶಾಸಕ ಡಿ.ಸುಧಾಕರ್, ಜೈನ ಸಮುದಾಯದ ಏಕೈಕ ಶಾಸಕ, ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಪುತ್ರ ಡಾ.ಅಜಯ್ ಸಿಂಗ್ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.