ರಾಜ್ಯ ವಕ್ಫ್ ಮಂಡಳಿ ಸದಸ್ಯರ ನಾಮನಿರ್ದೇಶನ ರದ್ದು ಆದೇಶ ಹಿಂಪಡೆದ ಸರ್ಕಾರ!
ಕರ್ನಾಟಕದಲ್ಲಿ ಹೊಸದಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಮೌಲಾನಾ ಎನ್‌ಕೆ ಮುಹಮ್ಮದ್ ಶಾಫಿ ಸಅದಿ ಸೇರಿದಂತೆ ನಾಲ್ವರು ಸದಸ್ಯರ ನಾಮನಿರ್ದೇಶನ ರದ್ದು ಆದೇಶವನ್ನು ಹಿಂಪಡೆದಿದೆ.
Published: 26th May 2023 03:09 PM | Last Updated: 26th May 2023 03:09 PM | A+A A-

ಶಾಫಿ ಸಅದಿ
ಬೆಂಗಳೂರು: ಕರ್ನಾಟಕದಲ್ಲಿ ಹೊಸದಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಮೌಲಾನಾ ಎನ್‌ಕೆ ಮುಹಮ್ಮದ್ ಶಾಫಿ ಸಅದಿ ಸೇರಿದಂತೆ ನಾಲ್ವರು ಸದಸ್ಯರ ನಾಮನಿರ್ದೇಶನ ರದ್ದು ಆದೇಶವನ್ನು ಹಿಂಪಡೆದಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಸಅದಿ ಮತ್ತು ಸದಸ್ಯರಾದ ಮೀರ್ ಅಜರ್ ಹುಸೇನ್, ಜಿ. ಯಾಕೂಬ್ ಮತ್ತು ಐಎಎಸ್ ಅಧಿಕಾರಿ ಜೆಹೆರಾ ನಸೀಮ್ ಅವರ ನಾಮನಿರ್ದೇಶನಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ರಾಜ್ಯ ಸರ್ಕಾರವು ಮೇ 22 ರಂದು ಸರ್ಕಾರ ಆದೇಶ ಹೊರಡಿಸಿತ್ತು.
ಕರ್ನಾಟಕದ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮೌಲಾನಾ ಸಅದಿ ಅವರು ಉಪಮುಖ್ಯಮಂತ್ರಿ ಸ್ಥಾನವನ್ನು ಮುಸ್ಲಿಂ ಸಮುದಾಯದ ವ್ಯಕ್ತಿಗೆ ನೀಡಬೇಕು ಎಂದು ಒತ್ತಾಯಿಸಿದ್ದರು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಶೇಕಡ 88ರಷ್ಟು ಮುಸ್ಲಿಂರು ಕಾಂಗ್ರೆಸ್ ಗೆ ಮತ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಗೆ ಬಹುಮತ ಬಂದಿದ್ದು ನಮ್ಮ ಸಮುದಾಯಕ್ಕೆ ಒಂದು ಡಿಸಿಎಂ ಹುದ್ದೆ ಐವರನ್ನು ಮಂತ್ರಿ ಮಾಡಬೇಕು ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಆಗ್ರಹಿಸಿದ್ದರು.
ಇದನ್ನೂ ಓದಿ: ಒಂದು ಡಿಸಿಎಂ ಹುದ್ದೆ, ಐವರು ಮುಸ್ಲಿಂ ಶಾಸಕರನ್ನು ಮಂತ್ರಿ ಮಾಡಬೇಕು: ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ
ರಾಜ್ಯದಲ್ಲಿ ಶೇ 90 ರಷ್ಟು ಮುಸ್ಲಿಮರಿದ್ದಾರೆ. ಅದರಲ್ಲಿ ಶೇ 88ರಷ್ಟು ಮುಸ್ಲಿಂರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. ನಾವು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಎಲ್ಲಾ ಮಸೀದಿಗಳಲ್ಲಿ ಅಭಿಯಾನ, ಜಾಗೃತಿ ಮಾಡಿದ್ದೆವು. ಹೀಗಾಗಿ ರಾಜ್ಯದಲ್ಲಿ 73 ಶಾಸಕರು ಗೆಲ್ಲಲು ಮುಸ್ಲಿಂರು ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಹೇಳಿದ್ದರು.