ಕಲಬುರಗಿ, ಬೀದರ್ ನಿಂದ ಬೆಂಗಳೂರಿಗೆ ಮೂರು ಹೊಸ ರೈಲು ಆರಂಭಿಸುವಂತೆ ರೈಲ್ವೆ ಸಚಿವರಿಗೆ ಖರ್ಗೆ ಪತ್ರ
ಕಲಬುರಗಿಯಿಂದ ಬೆಂಗಳೂರಿಗೆ ಎರಡು ಹಾಗೂ ಬೀದರ್ ನಿಂದ ಬೆಂಗಳೂರಿಗೆ ಒಂದು ಹೊಸ ರೈಲು ಓಡಿಸುವಂತೆ ಆಗ್ರಹಿಸಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವ ಅಶ್ವಿನಿ...
Published: 26th May 2023 01:58 AM | Last Updated: 26th May 2023 01:58 AM | A+A A-

ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ: ಕಲಬುರಗಿಯಿಂದ ಬೆಂಗಳೂರಿಗೆ ಎರಡು ಹಾಗೂ ಬೀದರ್ ನಿಂದ ಬೆಂಗಳೂರಿಗೆ ಒಂದು ಹೊಸ ರೈಲು ಓಡಿಸುವಂತೆ ಆಗ್ರಹಿಸಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ.
ಕಲಬುರಗಿ ಬೆಂಗಳೂರು ಹಾಗೂ ಬೀದರ್ ಬೆಂಗಳೂರು ನಡುವಿನ ಪ್ರಯಾಣಿಕರ ದಟ್ಟಣೆಯ ಕುರಿತಂತೆ ವಿಸ್ತಾರವಾಗಿ ವಿವರಿಸಿರುವ ಖರ್ಗೆ, ಕಲಬುರಗಿಯಿಂದ ಬೆಂಗಳೂರಿಗೆ ಪ್ರತಿನಿತ್ಯ ಸುಮಾರು 6,000 ಪ್ರಯಾಣಿಕರು ಸಂಚರಿಸುತ್ತಿದ್ದು ಹೆಚ್ಚಿನ ರೈಲುಗಳ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಸಿದ್ದರಾಮಯ್ಯನವರ ಪ್ರಮಾಣ ವಚನ ದೇಶದಲ್ಲಿ ವಿಪಕ್ಷಗಳ ಒಗ್ಗಟ್ಟು ಪ್ರದರ್ಶಿಸಿದೆ: ಮಲ್ಲಿಕಾರ್ಜುನ ಖರ್ಗೆ
ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಲ್ಲಿ ಬಹುತೇಕರು ವಲಸೆ ಕೂಲಿ ಕಾರ್ಮಿಕರಾಗಿದ್ದಾರೆ. ಮೀಸಲು ಬೋಗಿಗಳಲ್ಲಿಆಸನ ಕಾಯ್ದಿರಿಸಲು ಹಣಕಾಸಿನ ದೃಷ್ಟಿಯಿಂದ ಅವರ ಶಕ್ತಿಗೆ ಮೀರಿದ್ದಾಗಿದ್ದು, ಅವರು ಜನರಲ್ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇದು ಜನದಟ್ಟಣೆ ಹೆಚ್ಚಾಗಲು ಕಾರಣವಾಗಿದ್ದು ಪ್ರಯಾಣಿಕರು ಆಸನದ ಕೊರತೆಯಿಂದಾಗಿ ಕೆಳಗೆ ಮಲಗಿಕೊಂಡು ಪ್ರಯಾಣಿಸುತ್ತಿದ್ದಾರೆ. ಇದು ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ ಎಂದು ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಬೀದರ್ ಹಾಗೂ ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಈ ಎರಡು ನಗರಗಳಿಗೆ ನಿಗದಿಪಡಿಸಿದ ಮೀಸಲಿಸಿರುವ ಆಸನಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಕಲಬುರಗಿ- ಬೆಂಗಳೂರು ನಡುವೆ ಎರಡು ನೂತನ ರೈಲುಗಳು ಹಾಗೂ ಬೀದರ್-ಬೆಂಗಳೂರು ನಡುವೆ ಒಂದು ನೂತನ ರೈಲು ಓಡಿಸುವ ಅವಶ್ಯಕತೆ ಇದ್ದು, ಇದರಿಂದ ಜನಸಂದಣಿ ಕಡಿಮೆಯಾಗುವುದರ ಜೊತೆಗೆ ಪ್ರಯಾಣಿಕರು ಎದುರಿಸುತ್ತಿರುವ ಅನಾನುಕೂಲತೆ ಕಡಿಮೆಯಾಗಲಿದೆ ಎಂದು ಖರ್ಗೆ ವಿವರಿಸಿದ್ದಾರೆ.