ಕುಡಿತದ ಚಟ: ಸರಿಯಾಗಿ ಕೆಲಸಕ್ಕೆ ಬಾರದಕ್ಕೆ ಜಗಳ, ಕತ್ತು ಹಿಸುಕಿ ಸ್ನೇಹಿತನ ಹತ್ಯೆ!
ಕುಡಿತದ ಚಟದಿಂದ ಕೆಲಸಕ್ಕೆ ಸರಿಯಾಗಿ ಬಾರದ ಪೈಂಟರ್ ಒಬ್ಬನನ್ನು ಸ್ನೇಹಿತನೇ ಕುತ್ತಿಗೆ ಹಿಸುಕಿ ಹತ್ಯೆ ಮಾಡಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Published: 29th May 2023 11:16 AM | Last Updated: 29th May 2023 11:16 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕುಡಿತದ ಚಟದಿಂದ ಕೆಲಸಕ್ಕೆ ಸರಿಯಾಗಿ ಬಾರದ ಪೈಂಟರ್ ಒಬ್ಬನನ್ನು ಸ್ನೇಹಿತನೇ ಕುತ್ತಿಗೆ ಹಿಸುಕಿ ಹತ್ಯೆ ಮಾಡಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ನಿವಾಸಿ ವೀರೇಂದ್ರ ಕುಮಾರ್ (40) ಕೊಲೆಯಾದ ವ್ಯಕ್ತಿ. ಈತ ವೃತ್ತಿಯಲ್ಲಿ ಪೈಂಟರ್ ಆಗಿದ್ದ. ಕೊಲೆ ಆರೋಪದ ಮೇಲೆ ಆತನ ಸ್ನೇಹಿತ, ಪೈಂಟರ್ ಮಹೇಂದ್ರ ವರ್ಮ (29) ಎಂಬಾತನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಇಬ್ಬರೂ ಉತ್ತರ ಪ್ರದೇಶದ ನಿವಾಸಿಗಳಾಗಿದ್ದು, ಕಾಡುಗೋಡಿ ಸಮೀಪದ ಸಾದರಮಂಗಲದಲ್ಲಿ ಶೆಡ್‍ನಲ್ಲಿ ವಾಸವಾಗಿದ್ದರು. ಸ್ಥಳೀಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದಾರೆ.
ವೀರೇಂದ್ರ ಕುಮಾರ್‍ಗೆ ಕುಡಿತದ ಚಟವಿದ್ದು, ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಕೆಲಸಕ್ಕೆ ಬಾರದಿದ್ದಕ್ಕೆ ವೀರೇಂದ್ರಕುಮಾರ್‍ನನ್ನು ಮಹೇಂದ್ರ ವರ್ಮ ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಈ ಸಂದರ್ಭದಲ್ಲಿ ಕೋಪಗೊಂಡ ಮಹೇಂದ್ರ ವರ್ಮ ವೀರೇಂದ್ರಕುಮಾರ್‍ನ ಕುತ್ತಿಗೆ ಹಿಸುಕಿ ಕೆಳಗೆ ತಳ್ಳಿದ್ದಾನೆ.
ಕೆಳಗೆ ಬಿದ್ದ ವೀರೇಂದ್ರಕುಮಾರ್‍ನನ್ನು ಕಾಲಿನಿಂದ ತುಳಿದು ಹತ್ಯೆ ಮಾಡಿದ್ದಾನೆ. ನಂತರ ಏನೂ ತಿಳಿಯದಂತೆ ಶೆಡ್‍ನಲ್ಲಿ ಮಲಗಿದ್ದಾರೆ.
ಮರುದಿನ ಪಕ್ಕದ ಶೆಡ್‍ನಲ್ಲಿ ವಾಸವಾಗಿದ್ದ ವೀರೇಂದ್ರಕುಮಾರ್ ಸ್ನೇಹಿತರು ಶೆಡ್‍ಗೆ ಬಂದು ನೋಡಿದಾಗ ವೀರೇಂದ್ರಕುಮಾರ್ ಮಲಗಿದ್ದಾನೆ ಎಂದುಕೊಂಡಿದ್ದಾರೆ. ಎಷ್ಟು ಹೊತ್ತಾದರೂ ಮೇಲೇಳದಿದ್ದಾಗ ಮುಖಕ್ಕೆ ನೀರು ಎರಚಿದ್ದಾರೆ. ಆದರೂ ಏಳದ್ದಕ್ಕೆ ಅನುಮಾನಗೊಂಡು ಗುತ್ತಿಗೆದಾರನಿಗೆ ಮಾಹಿತಿ ನೀಡಿದ್ದಾರೆ. ಗುತ್ತಿಗೆದಾರ ಶೆಟ್ ಬಳಿ ಬಂದು ನೋಡಿದಾಗ ವೀರೇಂದ್ರ ಕುಮಾರ್ ಮೃತಪಟ್ಟಿರುವುದು ತಿಳಿದುಬಂದಿದೆ.
ಬಳಿಕ ಗುತ್ತಿಗೆದಾರ ಕಾಡುಗೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಪರಿಶೀಲಿಸಿ ಶವವನ್ನು ಆಸ್ಪತ್ರೆಗೆ ಸಾಗಿಸಿ ತನಿಖೆ ಕೊಂಡಿದ್ದಾರೆ. ತನಿಖೆ ವೇಳೆ ಮಹೇಂದ್ರ ವರ್ಮ ಈ ಕೃತ್ಯ ನಡೆಸಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಕಾಡುಗೋಡಿ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.