ಮೇ 31ಕ್ಕೆ ಶಾಲೆಗಳ ಆರಂಭ: ಸರ್ಕಾರದಿಂದ ಮಾರ್ಗಸೂಚಿ, ಮೊದಲ ದಿನ ಸಿಹಿ ನೀಡಿ ಮಕ್ಕಳ ಸ್ವಾಗತ
ಬೇಸಿಗೆ ರಜೆ ಕಳೆದು ನೂತನ ಶೈಕ್ಷಣಿಕ ವರ್ಷ ಮೇ 31ರಂದು ಬುಧವಾರ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಶಾಲೆ ಆರಂಭವಾದ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಜೊತೆಗೆ ಕಡ್ಡಾಯವಾಗಿ ಸಿಹಿ ಪದಾರ್ಥ ನೀಡವಂತೆ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲಾ ಆಡಳಿತ ಮಂಡಳಿಗಳಿಗೆ ಸರ್ಕಾರ ಸೂಚನೆ ನೀಡಿದೆ.
Published: 29th May 2023 10:21 AM | Last Updated: 29th May 2023 02:16 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಬೇಸಿಗೆ ರಜೆ ಕಳೆದು ನೂತನ ಶೈಕ್ಷಣಿಕ ವರ್ಷ ಮೇ 31ರಂದು ಬುಧವಾರ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ತರಗತಿಗಳ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಜೊತೆಗೆ ಕಡ್ಡಾಯವಾಗಿ ಸಿಹಿ ಪದಾರ್ಥ ನೀಡವಂತೆ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲಾ ಆಡಳಿತ ಮಂಡಳಿಗಳಿಗೆ ಸರ್ಕಾರ ಸೂಚನೆ ನೀಡಿದೆ.
ಶಾಲೆಯ ಮೊದಲ ದಿನ ಪ್ರಾರಂಭಿಸುವ ಮೊದಲು ತರಗತಿಯ ಕೊಠಡಿಗಳು, ಅಡುಗೆ ಪಾತ್ರೆಗಳು, ಆಹಾರ ಧಾನ್ಯಗಳು ಮತ್ತು ನೀರಿನ ಸಂಪ್‌ಗಳು ಸೇರಿದಂತೆ ಶಾಲೆ ಆವರಣವನ್ನು ಸ್ವಚ್ಛಗೊಳಿಸಲು ಮತ್ತು ಅನಗತ್ಯ ವಸ್ತುಗಳನ್ನು ವಿಲೇವಾರಿ ಮಾಡಲು ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರತಿ ತರಗತಿಗೆ ತಮ್ಮ ವೇಳಾಪಟ್ಟಿಯನ್ನು ಸಿದ್ಧವಾಗಿರಿಸಲು ನಿರ್ವಾಹಕರನ್ನು ಕೇಳಲಾಗಿದೆ. 244 ಕೆಲಸದ ದಿನಗಳು ಹೊಸ ಶಾಲಾ ವರ್ಷಕ್ಕಾಗಿ, ವರ್ಷವಿಡೀ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಶೈಕ್ಷಣಿಕ ಮಾರ್ಗಸೂಚಿಯನ್ನು ಹೊರತಂದಿದೆ.
2023-24ರ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಒಟ್ಟು 244 ದಿನ ಕಾರ್ಯನಿರ್ವಹಿಸಲಿದೆ. ಮೇ 31ರಿಂದ ಶಾಲೆಗಳು ಅಕ್ಟೋಬರ್ 7 ರವರೆಗೆ ಕಾರ್ಯನಿರ್ವಹಿಸುತ್ತವೆ; ಅಕ್ಟೋಬರ್ 8 ರಿಂದ ಅಕ್ಟೋಬರ್ 24 ರವರೆಗೆ ದಸರಾ ರಜೆಯಿರುತ್ತದೆ. ಎರಡನೇ ಅವಧಿಯು ಅಕ್ಟೋಬರ್ 25 ರಂದು ಪ್ರಾರಂಭವಾಗಿ ಏಪ್ರಿಲ್ 10, 2024 ರವರೆಗೆ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಜೂನ್ 1 ರಿಂದ ಪಠ್ಯಕ್ರಮದ ಬೋಧನೆ ಪ್ರಾರಂಭವಾಗಲಿದೆ. ನಾಳೆಯೊಳಗೆ ಹೊಸ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರವನ್ನು ಕಡ್ಡಾಯವಾಗಿ ವಿತರಿಸಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಬಾಕಿ ಇರುವ ವಿದ್ಯಾರ್ಥಿಗಳಿಗೆ ಆಧಾರ್ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತಿಳಿಸಲಾಗಿದೆ.
ಸಮವಸ್ತ್ರ, ಪಠ್ಯಪುಸ್ತಕ ವಿತರಣೆ: ಇದೇ ಮೊದಲ ಬಾರಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಒಂದು ಜತೆ ಸಮವಸ್ತ್ರ ಮತ್ತು ಶಾಲೆ ಆರಂಭಕ್ಕೂ ಮುನ್ನವೇ ಶೇ.98ರಷ್ಟು ಪಠ್ಯಪುಸ್ತಕಗಳನ್ನು ವಿತರಿಸಿ ದಾಖಲೆ ಮಾಡಿದೆ.
ಕಳೆದ ವರ್ಷ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸೇರಿದಂತೆ ಪಠ್ಯಪುಸ್ತಕ ಕೂಡ ಸರಿಯಾದ ಸಮಯಕ್ಕೆ ಹಂಚಿಕೆ ಮಾಡಲಾಗಿರಲಿಲ್ಲ. ಆಗಸ್ಟ್ ತಿಂಗಳಾಂತ್ಯದವರೆಗೂ ಕಾಯಬೇಕಾಗಿತ್ತು. ಆದರೆ ಈ ಬಾರಿ ಮಾತ್ರ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎನ್ನುವಂತೆ ಶಾಲೆಗಳ ಆರಂಭಕ್ಕೆ ಮುನ್ನವೇ ಸಮವಸ್ತ್ರ, ಪಠ್ಯಪುಸ್ತಕಗಳನ್ನು ವಿತರಿಸಿದೆ.
ನಾಡಿದ್ದರಿಂದ ಶಾಲೆ ಆರಂಭಕ್ಕಾಗಿ ಶಾಲೆಗಳನ್ನು ಸಿಂಗಾರಗೊಳಿಸುವಂತೆ, ಸಿಹಿ ಮತ್ತು ಬಿಸಿಯೂಟ ವಿತರಿಸಿ ಬರಮಾಡಿಕೊಳ್ಳುವಂತೆ ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆಯನ್ನು ಶಿಕ್ಷಣ ಇಲಾಖೆ ಆಯುಕ್ತರು ನೀಡಿದ್ದಾರೆ.
ರಾಜ್ಯದ 23- 24 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಯನ್ನು ಮೇ 31 ರಿಂದ ಸಿಹಿ ನೀಡುವ ಮೂಲಕ ಪ್ರಾರಂಭವಾಗಲಿದೆ. ಪೂರಕ ಸಿದ್ಧತೆಗಳು ಇಂದಿನಿಂದ ನಡೆಯಲಿದ್ದು, ಶಾಲೆಯತ್ತ ಹೆಜ್ಜೆ ಹಾಕುತ್ತಿರುವ ಎಲ್ಲಾ ಮಕ್ಕಳಿಗೂ ಶುಭ ಕೋರುತ್ತಾ, ಆರೋಗ್ಯಕರ ವಾತಾವರಣದಲ್ಲಿ ಖುಷಿಯ ಕಲಿಕೆ ನಿಮ್ಮದಾಗಲಿ ಎಂದು ಹಾರೈಸುತ್ತೇನೆ, pic.twitter.com/7YX1kyS2jK
— Madhu Bangarappa (@Madhu_Bangarapp) May 29, 2023