ಕಾವೇರಿ ಒಳ ಹರಿವು ಹೆಚ್ಚಳ, ಜಾತಿ ಆಧಾರದ ಮೇಲೆ ಹುದ್ದೆ ನೀಡೋಕೆ ಆಗಲ್ಲ- ಡಿಸಿಎಂ ಡಿಕೆ ಶಿವಕುಮಾರ್

ರಾಜ್ಯದ ಕಾವೇರಿ ಪಾತ್ರದ ಆಣೆಕಟ್ಟುಗಳ ಒಳಹರಿವು 15 ಸಾವಿರ ಕ್ಯೂಸೆಕ್ ಗೆ ಹೆಚ್ಚಾಗಿದ್ದು, ಇದು ರಾಜ್ಯದ ಪಾಲಿಗೆ ಸ್ವಲ್ಪ ನಿರಾಳತೆ ತಂದಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. 
ಡಿಸಿಎಂ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯದ ಕಾವೇರಿ ಪಾತ್ರದ ಆಣೆಕಟ್ಟುಗಳ ಒಳಹರಿವು 15 ಸಾವಿರ ಕ್ಯೂಸೆಕ್ ಗೆ ಹೆಚ್ಚಾಗಿದ್ದು, ಇದು ರಾಜ್ಯದ ಪಾಲಿಗೆ ಸ್ವಲ್ಪ ನಿರಾಳತೆ ತಂದಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. 

ಚಿತ್ರಕಲಾ ಪರಿಷತ್ ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, "ರಾಜ್ಯದ ಹಿರಿಯ ನ್ಯಾಯ ಮೂರ್ತಿಗಳು ಹಾಗೂ ವಕೀಲರ ಜೊತೆ ಚರ್ಚೆ ಮಾಡಿ ತಮಿಳುನಾಡಿಗೆ ನೀರು ಹರಿಸುವ ತೀರ್ಮಾನ ಪುನರ್ ಪರಿಶೀಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಶನಿವಾರ ಮೇಲ್ಮನವಿ ಸಲ್ಲಿಸಿದ್ದೇವೆ. ಒಳ ಹರಿವು ಹೆಚ್ಚಾಗಿದ್ದು, ರಾಜ್ಯದಲ್ಲಿ ಹೆಚ್ಚಿನ ಮೇಲೆ ಬೀಳಲಿ ಎಂದು ಎಲ್ಲಾ ಜನರು ಪ್ರಾರ್ಥನೆ ಮಾಡಬೇಕಿದೆ ಎಂದರು.

ನಮ್ಮ ರೈತರ ಬೆಳೆ ಹಾಳಾಗದಂತೆ ಈಗಾಗಲೇ ನೀರು ಬಿಟ್ಟಿದ್ದೇವೆ. ತಮಿಳುನಾಡಿಗೆ ಕೆಆರ್ ಎಸ್ ಆಣೆಕಟ್ಟು ಮೂಲಕ ನೀರು ಹರಿಸದಿದ್ದರೂ ಬೆಂಗಳೂರು ಹಾಗೂ ಸುತ್ತಮುತ್ತಲ ಭಾಗದಲ್ಲಿ ಬಿದ್ದ ಮಳೆ ಹಾಗೂ ಸೀಪೆಜ್ ಮೂಲಕ ಆರೂವರೆ ಸಾವಿರಕ್ಯೂಸೆಕ್ ಅನಿಯಂತ್ರಿತ ನೀರು ಹರಿದಿದೆ. ಹೀಗಾಗಿ ನಮ್ಮಲ್ಲಿ ಮಳೆ ಬಂದಷ್ಟು ನಮಗೆ ಶಕ್ತಿ ಬರುತ್ತದೆ. ಉಳಿದಂತೆ ಕಾವೇರಿ ವಿಚಾರದಲ್ಲಿ ಕಾನೂನು ಹೋರಾಟಕ್ಕೆ ನಾವು ಬದ್ಧವಿದ್ದೇವೆ ಎಂದು ಅವರು ತಿಳಿಸಿದರು. 

ಜಾತಿ ಆಧಾರದ ಮೇಲೆ  ಹುದ್ದೆ ನೀಡೋಕೆ ಆಗಲ್ಲ: ಇನ್ನೂ ಸಿದ್ದರಾಮಯ್ಯ ಆಡಳಿತದಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎಂಬ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, ಅಧಿಕಾರಿಗಳು ಸಹಜವಾಗಿ ತಮಗೆ ಉತ್ತಮ ಹುದ್ದೆ ನೀಡಬೇಕು ಎಂದು ನಿರೀಕ್ಷಿಸುತ್ತಾರೆ. ಆದರೆ ಸರ್ಕಾರ ಜಾತಿ ಆಧಾರದ ಮೇಲೆ ಹುದ್ದೆ ನೀಡಲು ಆಗುವುದಿಲ್ಲ. ನಾವು ಎಲ್ಲರನ್ನೂ ಗಮನಿಸಬೇಕು. ಮುಖ್ಯಮಂತ್ರಿಗಳು ಎಲ್ಲರನ್ನೂ ಸಮತೋಲನ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳಿಗೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ. ಮಂತ್ರಿಗಳಾದ ನಮ್ಮಲ್ಲೂ ಸಾಮಾನ್ಯ ಪ್ರಜ್ಞೆ ಇರಬೇಕು. ನಾವು ಯಾರಾದರೂ ಒಬ್ಬರಿಗೆ ಪೋಸ್ಟಿಂಗ್ ನೀಡಲು ಸಾಧ್ಯವೇ? ನಾವು ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಬೇಕು. ಸರ್ಕಾರ ಎಂದರೆ ಎಲ್ಲವೂ ಮುಖ್ಯಮಂತ್ರಿ ಮೇಲೆ ಹಾಕಬಾರದು. ಸಚಿವರಾದ ನಾವುಗಳು ಜವಾಬ್ದಾರಿ ವಹಿಸಿಕೊಳ್ಳಬೇಕು. ಎಲ್ಲಾ ಕಾಲದಲ್ಲೂ ಇದು ನಡೆದುಕೊಂಡು ಬಂದಿದೆ. ಶಾಮನೂರು ಶಿವಶಂಕರಪ್ಪ ಅವರು ನಮ್ಮ ಪಕ್ಷದ ನಾಯಕರು. ಒಂದು ಸಮಾಜದ ಸಂಘದ ಅಧ್ಯಕ್ಷರು. ಅವರ ಮೇಲೂ ಒತ್ತಡ ಇರುತ್ತದೆ. ಕೆಲವು ಅಧಿಕಾರಿಗಳು ಸಚಿವರ ಬಳಿಯೂ ಹೋಗಿ ಮನವಿ ಮಾಡಿದ್ದಾರೆ. ಈ ರೀತಿ ಕೇಳುವುದರಲ್ಲಿ ತಪ್ಪಿಲ್ಲ ಎಂದರು.

ಮುಂದಿನ ಒಂದು ವರ್ಷದ ಒಳಗೆ ಸರ್ಕಾರ ಬೀಳುತ್ತದೆ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, "ಪರಮೇಶ್ವರ್ ಅವರು ಇದಕ್ಕೆ ಉತ್ತರ ನೀಡಿದ್ದಾರೆ  ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com