ಧಾರವಾಡ: ಪ್ರಚಾರದ ಹುಚ್ಚಿಲ್ಲದೆ ಸಹಾಯ; ಬಡ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಕ್ರಿಕೆಟಿಗ ಕೆ.ಎಲ್. ರಾಹುಲ್ ನೆರವು

ಟೀಂ ಇಂಡಿಯಾ ಕ್ರಿಕೆಟಿಗ ಕೆ ಎಲ್ ರಾಹುಲ್ ಅಂತರಾಷ್ಟ್ರೀಯ ಕ್ರಿಕೆಟ್ ಪಿಚ್‌ಗಳಲ್ಲಿ ದೊಡ್ಡ ಮೊತ್ತದ ರನ್ ಗಳಿಸುವುದು ಮಾತ್ರವಲ್ಲ, ಮೈದಾನದ ಹೊರಗೆ ಅವರ ಹೃದಯ ವೈಶಾಲ್ಯತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ವಿದ್ಯಾರ್ಥಿನಿ ಶೃತಿಗೆ ಕೆ.ಎಲ್ ರಾಹುಲ್ ನೆರವು
ವಿದ್ಯಾರ್ಥಿನಿ ಶೃತಿಗೆ ಕೆ.ಎಲ್ ರಾಹುಲ್ ನೆರವು

ಧಾರವಾಡ: ಟೀಂ ಇಂಡಿಯಾ ಕ್ರಿಕೆಟಿಗ ಕೆ ಎಲ್ ರಾಹುಲ್ ಅಂತರಾಷ್ಟ್ರೀಯ ಕ್ರಿಕೆಟ್ ಪಿಚ್‌ಗಳಲ್ಲಿ ದೊಡ್ಡ ಮೊತ್ತದ ರನ್ ಗಳಿಸುವುದು ಮಾತ್ರವಲ್ಲ, ಮೈದಾನದ ಹೊರಗೆ ಅವರ ಹೃದಯ ವೈಶಾಲ್ಯತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಆರ್ಥಿಕವಾಗಿ ಹಿಂದುಳಿದ ಬಡ ಬಾಲಕಿಗೆ ಶಾಲಾ ಶುಲ್ಕ ಕಟ್ಟಲು ನೆರವು ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ. ಕ್ರಿಕೆಟಿಗ ರಾಹುಲ್ ಅವರ ಈ ನೆರವಿಗೆ ಹುಬ್ಬಳ್ಳಿ-ಧಾರವಾಡ ಜನತೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಕೆ.ಎಲ್ ರಾಹುಲ್ ಸಹಾಯ ಮಾಡಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ಕೂಡ ಅನೇಕರಿಗೆ ನೆರವು ನೀಡಿದ್ದಾರೆ.

ಧಾರವಾಡ ತಾಲ್ಲೂಕಿನ ತಡಸಿನಕೊಪ್ಪ ಗ್ರಾಮದ ಗ್ಲೋಬಲ್ ಎಕ್ಸಲೆನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶ್ರುತಿ ಕುಲಾವಿ ಅವರ ಶುಲ್ಕ 21 ಸಾವಿರ ಭರಿಸಲು ಕ್ರಿಕೆಟಿಗ ಕೆ.ಎ‌ಲ್. ರಾಹುಲ್ ನೆರವಾಗಿದ್ದಾರೆ. ಶಾಲೆಯ ಬ್ಯಾಂಕ್ ಖಾತೆಗೆ ಶನಿವಾರ ಹಣ ಜಮೆಯಾಗಿದೆ. ಹಣ ಜಮೆಯಾದ ನಂತರ ಅದನ್ನು ಪಾವತಿಸಿದ್ದು ಕ್ರಿಕೆಟರ್ ಕೆ.ಎಲ್ ರಾಹುಲ್ ಎಂಬುದು ಶಿಕ್ಷಣ ಸಂಸ್ಥೆಯ ಗಮನಕ್ಕೆ ಬಂದಿದೆ.

ಹುಬ್ಬಳ್ಳಿಯ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹೆಬಸೂರು ಅವರು ಈ ಹಿಂದೆ ವಿದ್ಯಾರ್ಥಿಯೊಬ್ಬನಿಗೆ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಪ್ರವೇಶ ಪಡೆಯಲು ರಾಹುಲ್ ಅವರಿಂದ ಆರ್ಥಿಕ ನೆರವು ಕೊಡಿಸಿದ್ದರು. ಅದನ್ನು ಅರಿತ ಶ್ರುತಿ ಕುಟುಂಬದವರು ಮಂಜುನಾಥ ಅವರನ್ನು ಸಂಪರ್ಕಿಸಿ, ನೆರವು ಕೋರಿದ್ದರು. ಮಂಜುನಾಥ್ ತಮ್ಮ ಸ್ನೇಹಿತನ ಮೂಲಕ ರಾಹುಲ್ ಅವರನ್ನು ಸಂಪರ್ಕಿಸಿ ನೆರವು ಕೊಡಿಸಿದ್ದಾರೆ.

ಶ್ರುತಿ ಅವರ ತಂದೆ ಹನುಮಂತಪ್ಪ ಕುಲಾವಿ ಕಿರಾಣಿ, ಡಬರಿ ಅಂಗಡಿ ನಡೆಸುತ್ತಾರೆ. ಅವರಿಗೆ ಮೂವರು ಹೆಣ್ಣುಮಕ್ಕಳಿದ್ದಾರೆ, ಹಿರಿಯ ಇಬ್ಬರು ಮಕ್ಕಳನ್ನು ಇಂಗ್ಲೀಷ್ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು, ಆದರೆ ಶೃತಿಗೆ ಹಣ ಪಾವತಿಸಲು ಸಂಕಷ್ಟ ಎದುರಿಸಿದ್ದರು ಎಂದು ಶಾಲೆಯ ಶಿಕ್ಷಕರೊಬ್ಬರು ತಿಳಿಸಿದ್ದಾರೆ.

ರಾಹುಲ್ ಸದ್ದಿಲ್ಲದೆ ಜನರಿಗೆ ಸಹಾಯ ಮಾಡುತ್ತಾರೆ. ಆದರೆ ತಾವು ಮಾಡಿದ ಕೆಲಸಗಳ ಬಗ್ಗೆ ಅವರು ಪ್ರಚಾರದ ಹಿಂದೆ ಬಿದ್ದಿಲ್ಲ. ಇದು ಕೇವಲ ಹಣದ ಪ್ರಶ್ನೆಯಲ್ಲ. ಸಹಾಯ ಮಾಡಲು ಮನಸ್ಸಿರಬೇಕು, ಇದು ಅವರ ಹೃದಯವಂತಿಕೆಯನ್ನು ತೋರುತ್ತದೆ ಎಂದು ಹನುಮಂತಪ್ಪ ಅವರ ಸಂಬಂಧಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com