ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ರೈತ ಆತ್ಮಹತ್ಯೆ ಎಂದು ಪ್ರಕರಣ ದಾಖಲು!

ಕಲಬುರಗಿಯ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಶಿವಕುಮಾರ್ ಪೂಜಾರಿ ಆತ್ಮಹತ್ಯೆಯನ್ನು ರೈತ ಆತ್ಮಹತ್ಯೆ ಎಂದು ದೂರು ದಾಖಲಿಸಲಾಗಿದೆ.
ಶಿವಕುಮಾರ್ ಪೂಜಾರಿ
ಶಿವಕುಮಾರ್ ಪೂಜಾರಿ

ಕಲಬುರಗಿ: ಕಲಬುರಗಿಯ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಶಿವಕುಮಾರ್ ಪೂಜಾರಿ ಆತ್ಮಹತ್ಯೆಯನ್ನು ರೈತ ಆತ್ಮಹತ್ಯೆ ಎಂದು ದೂರು ದಾಖಲಿಸಲಾಗಿದೆ.

ಕಲಬುರಗಿಯ ಚಿಂಚೊಳ್ಳಿ ತಾಲೂಕಿನ ಶಿರೋಳ್ಳಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರಿ ಕಾಂಗ್ರೆಸ್ ಕಾರ್ಯಕರ್ತರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಶಿವಕುಮಾರ್ ಆಡಿಯೋ ರೆಕಾರ್ಡ್ ಮಾಡಿದ್ದು, ತಮ್ಮ ಸಾವಿಗೆ ಸಚಿವ ಶರಣ ಪ್ರಕಾಶ್ ಪಾಟೀಲ್ ಕಾರಣ ಎಂದು ಹೇಳಿಕೊಂಡಿದ್ದರು.

ಆದರೂ ಶಿವಕುಮಾರ್ ಪೂಜಾರಿ ಆತ್ಮಹತ್ಯೆಯನ್ನು ರೈತ ಆತ್ಮಹತ್ಯೆ ಎಂದು ದೂರು ದಾಖಲಾಗಿದೆ. ಸ್ವತ: ಶಿವಕುಮಾರ್ ಪತ್ನಿ ಮಲ್ಲಮ್ಮ ಅವರು ರೈತ ಆತ್ಮಹತ್ಯೆ ಎಂದು ಸುಲೆಪೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪತಿ ಶಿವಕುಮಾರ್ 12 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಮಳೆಯಾಗದೇ ಇದ್ದಿದ್ದರಿಂದ ಬೆಳೆ ಹಾಳಾಗಿ ಹೋಗಿತ್ತು. ಸಾಲ ತೀರಿಸಲಿಕ್ಕಾಗದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಪತಿಯ ಆತ್ಮಹತ್ಯೆ ಕೇಸ್‌ನಲ್ಲಿ ಯಾರ ಮೇಲೆ ಕೂಡಾ ಅನುಮಾನ ಇಲ್ಲ ಎಂದು ಉಲ್ಲೇಖವಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಈ ನಡುವ ಪ್ರಕರಣದ ತನಿಖೆ ನಡೆಸುತ್ತಿರುವ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ಹೇಲಿಕೆ ನೀಡಿತ್ತು, ಶಿವಕುಮಾರ್ ಅವರ ಪತ್ನಿ ಸುಲೇಪೇಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪತಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಯಾರೂ ಜವಾಬ್ದಾರರಲ್ಲ ಎಂದು ದೂರಿನಲ್ಲಿ ಹೇಳಿದ್ದಾರೆ. ಆದರೂ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಆಡಿಯೋ ಕ್ಲಿಪ್ ವೊಂದರಿಂದಲೇ ಸಚಿವರ ವಿರುದ್ಧ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಮೂಲ ಆಡಿಯೋ ಕ್ಲಿಪ್ ನ್ನು ಪೊಲೀಸರು ವಶಕ್ಕೆ ಪಡೆಯಬೇಕಿದೆ. ಈ ಆಡಿಯೋ ಯಾವಾಗ, ಎಲ್ಲಿ ರೆಕಾರ್ಡ್ ಮಾಡಲಾಗಿದೆ ಎಂಬುದನ್ನು ತಿಳಿಯಬೇಕಿದೆ. ಆಡಿಯೋ ರೆಕಾರ್ಡ್ ಮಾಡುವ ವೇಳೆ ಅವರೊಂದಿಗೆ ಯಾರೆಲ್ಲಾ ಇದ್ದರು, ಯಾವ ವ್ಯಕ್ತಿ ಆಡಿಯೋ ವೈರಲ್ ಮಾಡಿದ್ದಾರೆಂಬ ಮಾಹಿತಿಗಳನ್ನು ಕಲೆ ಹಾಕಬೇಕಿದೆ. ಆಡಿಯೋ ಕ್ಲಿಪ್ ನ್ನು ವಿಧಿವಿಜ್ಞಾ ಪ್ರಯೋಗಾಲಯಕ್ಕೆ ಕಳುಹಿಸಬೇಕಿದೆ. ಹುಬ್ಬಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಡಿಯೋ-ವೀಡಿಯೋ ತಜ್ಞರ ತಂಡಕ್ಕೆ ಈ ಆಡಿಯೋ ಕ್ಲಿಪ್ ನ್ನು ರವಾನಿಸಲಾಗುವುದು. ಆಡಿಯೋ ಕ್ಲಿಪ್‌ನಲ್ಲಿರುವ ಧ್ವನಿ ಶಿವಕುಮಾರ್ ಅವರದ್ದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ. ವೈರಲ್ ಮಾಡುವ ಮೊದಲು ಆಡಿಯೋ ಎಡಿಟ್ ಮಾಡಲಾಗಿದೆಯೇ ಅಥವಾ ಅದರ ಕೆಲವು ಭಾಗಗಳು ಸೋರಿಕೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಶಿವಕುಮಾರ್‌ಗೆ ಸಚಿವರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಯಾವ ರೀತಿಯಲ್ಲಿ ಕಿರುಕುಳ ನೀಡಿದ್ದಾರೆ ಎನ್ನುವುದನ್ನೂ ಪೊಲೀಸ್ ತಂಡ ಪತ್ತೆ ಮಾಡಬೇಕಿದೆ. ಈ ಎಲ್ಲಾ ಅಂಶಗಳ ತನಿಖೆಯ ನಂತರ ಮತ್ತು ಆರೋಪಗಳಲ್ಲಿ ಸತ್ಯ ಕಂಡುಬಂದರೆ, ಪೊಲೀಸರು ಪಾರ್ಟಿಲ್ ವಿರುದ್ಧ ಪ್ರಕರಣವನ್ನು ದಾಖಲಿಸುತ್ತಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶಿವಕುಮಾರ್ ಅವರ ಸಂಬಂಧಿ ನರಸಪ್ಪ ಮಾತನಾಡಿ, ಕೆಲ ದಿನಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತರು ಶಿವಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ್ದರು. ನಂತರ ಅವರನ್ನು ಕಲಬುರಗಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಕಾಂಗ್ರೆಸ್ ಕಾರ್ಯಕರ್ತರು ನನ್ನನ್ನೂ  ಬಿಡುವುದಿಲ್ಲ. ಹೀಗಾಗಿ ನನಗೆ ಪೊಲೀಸ್ ರಕ್ಷಣೆ ಬೇಕು ಎಂದು ಹೇಳಿದ್ದಾರೆ.

ಶಿವಕುಮಾರ್ (38) ವೈಯಕ್ತಿಕ ಕಾರಣಗಳಿಂದ ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಮದುವೆಯಾಗಿ 15 ವರ್ಷಗಳಾದರೂ ದಂಪತಿಗೆ ಮಕ್ಕಳಾಗಿರಲಿಲ್ಲ ಎಂಬ ಚಿಂತೆ ಶಿವಕುಮಾರ್ ಅವರಿಗಿತ್ತು. ಕೃಷಿಗಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 70 ಸಾವಿರ ಹಾಗೂ ಖಾಸಗಿ ಲೇವಾದೇವಿಗಾರರಿಂದ 1-2 ಲಕ್ಷ ಸಾಲ ಮಾಡಿಕೊಂಡಿದ್ದರು. ಬರದಿಂದಾಗಿ ಬೆಳೆ ಕಳೆದುಕೊಂಡಿದ್ದರಿಂದ ಅವರು ಬೇಸರಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಈ ನಡವೆ ಶಿವಕುಮಾರ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಕಲಬುರಗಿ ಸಂಸದ ಉಮೇಶ ಜಾಧವ್, ಸೇಡಂ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಅವರು ಸಚಿವ ಪಾಟೀಲ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com