ಮೈಸೂರು ದಸರಾ: ಇಂದು ಮಧ್ಯಾಹ್ನ ಅರಮನೆ ಪ್ರವೇಶಿಸಲಿರುವ ಗಜಪಡೆ, ರಾಜವಂಶಸ್ಥರಿಂದ ಪೂಜೆ
ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಗಜಪಡೆ ಮೆರವಣಿಗೆ ನೋಡುವುದು ಇನ್ನೊಂದು ಸೊಗಸು. ನಾಡದೇವತೆ ಚಾಮುಂಡಿ ಮೂರ್ತಿಯನ್ನು ಹೊರುವ ಆನೆ ಮತ್ತು ಅದರ ಹಿಂದೆ ಸಾಗುವ ಆನೆಗಳಿಗೆ ಒಂದು ತಿಂಗಳ ಮೊದಲೇ ತಾಲೀಮು ನೀಡಲಾಗುತ್ತದೆ.
Published: 05th September 2023 10:38 AM | Last Updated: 05th September 2023 08:35 PM | A+A A-

ಸಾಂದರ್ಭಿಕ ಚಿತ್ರ
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಗಜಪಡೆ ಮೆರವಣಿಗೆ ನೋಡುವುದು ಇನ್ನೊಂದು ಸೊಗಸು. ನಾಡದೇವತೆ ಚಾಮುಂಡಿ ಮೂರ್ತಿಯನ್ನು ಹೊರುವ ಆನೆ ಮತ್ತು ಅದರ ಹಿಂದೆ ಸಾಗುವ ಆನೆಗಳಿಗೆ ಒಂದು ತಿಂಗಳ ಮೊದಲೇ ತಾಲೀಮು ನೀಡಲಾಗುತ್ತದೆ.
ಈ ಬಾರಿಯ ದಸರಾಕ್ಕೆ ಈಗಾಗಲೇ ಕಾಡಿನಿಂದ ನಾಡಿಗೆ ಗಜಪಡೆಗಳನ್ನು ಸರ್ಕಾರ ವತಿಯಿಂದ ಪೂಜೆ ಮಾಡಿ ಸ್ವಾಗತಿಸಲಾಗಿದ್ದು ಇಂದು ಗಜಪಡೆ ಮೈಸೂರು ಅರಮನೆ ಪ್ರವೇಶಿಸಲಿವೆ. ಇಂದು ಅರಮನೆಗೆ ಸಾಂಪ್ರದಾಯಿಕ ಪೂಜೆ, ವಿಧಿ ವಿಧಾನಗಳ ಮೂಲಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ, ಅರಣ್ಯ ಸಚಿವ ಈಶ್ವರ ಖಂಡ್ರೆ, ಅಧಿಕಾರಿಗಳು, ಜನಪ್ರತಿನಿಧಿಗಳು, ಮೈಸೂರು ಅರಮನೆಯ ಯುವರಾಜರು, ಮಹಾರಾಣಿಯರ ಸಮ್ಮುಖದಲ್ಲಿ ಮಧ್ಯಾಹ್ನ ಸ್ವಾಗತ ಕೋರಲಾಗುತ್ತದೆ.
ಇದನ್ನೂ ಓದಿ: ಮೈಸೂರು ದಸರಾ 2023ಕ್ಕೆ ಮುನ್ನುಡಿ: ನಾಗರಹೊಳೆಯಿಂದ ದಸರಾ ಗಜಪಯಣಕ್ಕೆ ಚಾಲನೆ
ದಸರಾ ಗಜಪಡೆಗೆ ಅರಮನೆಯಲ್ಲಿ ರಾಜವಂಶಸ್ಥರು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅರಮನೆ ಆವರಣ ಮತ್ತಷ್ಟು ಕಳೆಕಟ್ಟಲಿದೆ. ಬಳಿಕ ನಡಿಗೆಯಲ್ಲಿ ದಸರಾ ಆನೆಗಳು ಅರಮನೆ ಅಂಗಳಕ್ಕೆ ತೆರಳಲಿದ್ದು, ಈ ವೇಳೆ ದಸರಾ ಆನೆಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗುತ್ತದೆ.
ಕಳೆದ ವರ್ಷದಂತೆ ಈ ವರ್ಷವೂ ಆಪರೇಷನ್ ಹೀರೋ ಖ್ಯಾತಿಯ ಹುಲಿ ಸೆರೆಯಲ್ಲಿ ಹೆಸರುವಾಸಿಯಾಗಿರುವ 58 ವರ್ಷದ ಅಭಿಮನ್ಯು ಅಂಬಾರಿ ಹೊರಲಿದ್ದು, ಅದರೊಂದಿಗೆ ಅರ್ಜುನ, ಭೀಮ, ಮಹೇಂದ್ರ, ಬಳ್ಳೆ ಆನೆ ಶಿಬಿರದ ಅರ್ಜುನ, ಭೀಮನಕಟ್ಟೆ ಆನೆ ಶಿಬಿರದ ವರಲಕ್ಷ್ಮಿ, ಕೊಡಗಿನ ಮಡಿಕೇರಿ ದುಬಾರೆ ಶಿಬಿರದ ಧನಂಜಯ, ಗೋಪಿ, ಹೊಸ ಆನೆ ಕಂಜನ್ ಮತ್ತು ಹೆಣ್ಣಾನೆ ವಿಜಯ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಲಿವೆ.