ಮೈಸೂರು ದಸರಾ 2023: ಜಂಬೂಸವಾರಿ ಆನೆಗಳಿಗೆ ಅರಮನೆಯಲ್ಲಿ ಸಾಂಪ್ರದಾಯಿಕ ಸ್ವಾಗತ; ಗಜಪಡೆಗೆ ತೂಕ ಪರೀಕ್ಷೆ
ವಿಶ್ವ ವಿಖ್ಯಾತ ಮೈಸೂರು ದಸರಾ 2023 ಕಳೆಕಟ್ಟುತ್ತಿದೆ. ದಸರಾ ಆಚರಣೆಗೆ ಇನ್ನು ಒಂದು ತಿಂಗಳು ಬಾಕಿ ಇರುವಾಗ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಬಂದಿರುವ ಅಭಿಮನ್ಯು ನೇತೃತ್ವದ ಆನೆಗಳನ್ನು ಮೈಸೂರಿನ ಅರಮನೆ ಆವರಣಕ್ಕೆ ಬರ ಮಾಡಿಕೊಳ್ಳಲಾಯಿತು.
Published: 06th September 2023 10:00 AM | Last Updated: 06th September 2023 06:44 PM | A+A A-

ಮೈಸೂರು ಅರಮನೆಯಲ್ಲಿ ಗಜಪಡೆಗೆ ಅದ್ದೂರಿ ಸ್ವಾಗತ
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ 2023 ಕಳೆಕಟ್ಟುತ್ತಿದೆ. ದಸರಾ ಆಚರಣೆಗೆ ಇನ್ನು ಒಂದು ತಿಂಗಳು ಬಾಕಿ ಇರುವಾಗ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಬಂದಿರುವ ಅಭಿಮನ್ಯು ನೇತೃತ್ವದ ಆನೆಗಳನ್ನು ಮೈಸೂರಿನ ಅರಮನೆ ಆವರಣಕ್ಕೆ ಬರ ಮಾಡಿಕೊಳ್ಳಲಾಯಿತು. ವಿಶೇಷವಾಗಿ ಅಲಂಕೃತಗೊಂಡಿದ್ದ ಆನೆಗಳನ್ನುಅರಮನೆ ಜಯಮಾರ್ತಾಂಡ ದ್ವಾರದಲ್ಲಿ ಸ್ವಾಗತಿಸಲಾಯಿತು. ದಸರೆ ಮುಗಿಯುವವರೆಗೂ ಆನೆಗಳು ಅರಮನೆ ಆವರಣದಲ್ಲಿ ತಂಗಲಿವೆ.
ಅರಣ್ಯ ಭವನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು. ಗಜಪೂಜೆ ನಂತರ ನೈವೇದ್ಯ ಅರ್ಪಣೆ ಮಾಡಲಾಯಿತು. ಅರಣ್ಯಾಧಿಕಾರಿಗಳು ಗಜಪಡೆಗೆ ಪುಷ್ಪಾರ್ಚನೆ ಮಾಡಿದರು. ವಾದ್ಯಗೋಷ್ಠಿ ಮೂಲಕ ಅರಮನೆಯತ್ತ ಗಜಪಡೆ ಕಾಲ್ನಡಿಗೆಯಲ್ಲಿ ತೆರಳಿತು. ಕ್ಯಾಪ್ಟನ್ ಅಭಿಮನ್ಯು ಹಾಗೂ ಗಡಪಡೆಯು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಆಗಮಿಸಿದ ವೇಳೆಯಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಜನಪದ ಕಲಾ ತಂಡದೊಂದಿಗೆ ನಗರದ ಅಶೋಕಪುರಂನ ಅರಣ್ಯ ಭವನದಿಂದ ಅರಮನೆಗೆ ಆಗಮಿಸಿದವು.
ಇದನ್ನೂ ಓದಿ: ಈ ವರ್ಷ 'ನಾದ ಬ್ರಹ್ಮ' ಹಂಸಲೇಖರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ
ಕಾಲ್ನಡಿಗೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ವೇಳೆ ಅಲಂಕಾರಗೊಂಡ ಗಜಪಡೆಯನ್ನು ಜನ ಕಣ್ತುಂಬಿಕೊಂಡರು. ಕಳೆದ ಸೆಪ್ಟೆಂಬರ್ 1ರಂದು ಈ ಗಜಪಡೆ ಹುಣಸೂರಿನ ವೀರನಹೊಸಹಳ್ಳಿಯಿಂದ ಮೈಸೂರಿಗೆ ಆಗಮಿಸಿದ್ದವು. ಅರಣ್ಯಭವನದಲ್ಲಿ ಆನೆಗಳು ವಾಸ್ತವ್ಯ ಹೂಡಿದ್ದವು. ಅರಣ್ಯ ಭವನದಿಂದ ಮೈಸೂರು ಅರಮನೆಗೆ ಬಂದ ಗಜಪಡೆಯನ್ನು ಮಧ್ಯಾಹ್ನ 12.01ರಿಂದ 12.51ರ ಸಮಯದ ಅಭಿಜನ್ ಲಗ್ನದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿಯು ಗಜಪಡೆಗೆ ಅದ್ದೂರಿ ಸ್ವಾಗತ ನೀಡಿದರು.
ದಸರಾಕ್ಕೆ ಮುನ್ನುಡಿ, ಪೊಲೀಸ್ ಭದ್ರತೆಯಲ್ಲಿ ಮೈಸೂರು ದಸರಾ ಗಜಪಡೆಗೆ ತೂಕ ಪರೀಕ್ಷೆ: ಇಂದು ಪೊಲೀಸ್ ಭದ್ರತೆಯಲ್ಲಿ ದೇವರಾಜ ಮೊಹಲ್ಲಾದಲ್ಲಿರುವ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಮೈಸೂರು ದಸರಾ ಗಜಪಡೆಗೆ ತೂಕ ಪರೀಕ್ಷೆ ಮಾಡಲಾಗಿದೆ. ಕ್ಯಾಪ್ಟನ್ ಅಭಿಮನ್ಯು 5,160 ಕೆಜಿ, ವಿಜಯ ಆನೆ 2,830 ಕೆಜಿ ತೂಕ, ಭೀಮಾ 4,370 ಕೆಜಿ, ವರಲಕ್ಷ್ಮೀ 3,020 ಕೆಜಿ, ಕಂಜನ್ ಆನೆ 4,240 ಕೆಜಿ, ಮಹೇಂದ್ರ 4,530 ಕೆಜಿ, ಧನಂಜಯ 4,940 ಕೆಜಿ, ಗೋಪಿ 5,080 ಕೆಜಿ ತೂಕ ಇದೆ.