social_icon

ತ್ಯಾಗ-ಬಲಿದಾನಗಳ ಮೂಲಕ ಕಟ್ಟಿದ ಭಾರತ ಉಳಿಸಲು 2ನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿದೆ: ಸಿದ್ದರಾಮಯ್ಯ

ದ್ವೇಷ ಮಾರಾಟದ ಸಂತೆಯಲ್ಲಿ ಪ್ರೀತಿ ಹಂಚುವ ಅಂಗಡಿ ತೆರೆಯುತ್ತೇನೆ ಎಂಬ ಸಂದೇಶದೊಂದಿಗೆ ಕನ್ಯಾಕುಮಾರಿಯಿಂದ ರಾಹುಲ್ ಗಾಂಧಿಯವರು ಶುರುಮಾಡಿದ್ದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಅವಕಾಶ ನನಗೂ ಒದಗಿಬಂದಿರುವುದು ನನ್ನ ಬದುಕಿನ ಭಾಗ್ಯ.

Published: 07th September 2023 05:08 PM  |   Last Updated: 07th September 2023 05:28 PM   |  A+A-


Siddaramaiah with rahul gandhi

ರಾಹುಲ್ ಗಾಂಧಿ ಜೊತೆ ಸಿಎಂ ಸಿದ್ದರಾಮಯ್ಯ

Posted By : Shilpa D
Source : Online Desk

ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸಿದ್ದ ಭಾರತ್ ಜೋಡೊ ಯಾತ್ರೆ ಒಂದನೇ ವಾರ್ಷಿಕೋತ್ಸವದ ಅಂಗವಾಗಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ

ಕಾಂಗ್ರೆಸ್ ಪಕ್ಷದ ನಾಯಕ ಮತ್ತು ದೇಶದ ಭರವಸೆಯ ಆಶಾಕಿರಣ ರಾಹುಲ್ ಗಾಂಧಿಯವರ ಜೊತೆ ಭಾರತ್ ಜೋಡೊ ಎಂಬ ಐತಿಹಾಸಿಕ ಪಾದಯಾತ್ರೆ ಶುರುವಾಗಿ ಇಂದಿಗೆ ಒಂದು ವರ್ಷ. ದ್ವೇಷ ಮಾರಾಟದ ಸಂತೆಯಲ್ಲಿ ಪ್ರೀತಿ ಹಂಚುವ ಅಂಗಡಿ ತೆರೆಯುತ್ತೇನೆ ಎಂಬ ಸಂದೇಶದೊಂದಿಗೆ ಕನ್ಯಾಕುಮಾರಿಯಿಂದ ರಾಹುಲ್ ಗಾಂಧಿಯವರು ಶುರುಮಾಡಿದ್ದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಅವಕಾಶ ನನಗೂ ಒದಗಿಬಂದಿರುವುದು ನನ್ನ ಬದುಕಿನ ಭಾಗ್ಯ.

ದ್ವೇಷ ಹಂಚುವ ಮೂಲಕ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದ್ದ ಕೋಮುವಾದಿ ಶಕ್ತಿಗಳ ವಿರುದ್ಧ ಸೆಡ್ಡುಹೊಡೆದು ನಾವು ಬಿತ್ತಿದ್ದ ಪ್ರೀತಿಯ ಬೀಜ ವ್ಯರ್ಥವಾಗಲಿಲ್ಲ. ನಾಡಿನ ಸೌಹಾರ್ದ ಮನಸುಗಳನ್ನು ಒಂದಾಗಿಸಿದ ಭಾರತ್ ಜೋಡೊ ಯಾತ್ರೆಯ ಫಲ ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ವ್ಯಕ್ತವಾಗಿದೆ. ರಾಹುಲ್ ಗಾಂಧಿಯವರು ಭಾರತ ಜೋಡೋ ಪಾದಯಾತ್ರೆಯುದ್ದಕ್ಕೂ ಜನತೆಯ ಜೊತೆ ನಡೆಸಿದ್ದ ಚರ್ಚೆ-ಸಂವಾದದ ಮೂಲಕ ಪಡೆದ ಅನುಭವದ ಫಲವೇ ನಮ್ಮ ಗ್ಯಾರಂಟಿ ಯೋಜನೆಗಳು ಎನ್ನುವುದನ್ನು ಈ ಸಂದರ್ಭದಲ್ಲಿ ಕೃತಜ್ಞತಾ ಪೂರ್ವಕವಾಗಿ ನೆನಪು ಮಾಡಿಕೊಳ್ಳುತ್ತೇನೆ.

ಇದನ್ನೂ ಓದಿ: ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗೆ ವರ್ಷಾಚರಣೆ: ಕೆಪಿಸಿಸಿ ವತಿಯಿಂದ ರಾಮನಗರದಲ್ಲಿ ಬೃಹತ್ ಕಾರ್ಯಕ್ರಮ

ಭಾರತದ ಇತಿಹಾಸದಲ್ಲಿ, ಕಾಂಗ್ರೆಸ್ ಪಕ್ಷ ಸ್ಥಾಪನೆಯಾದ 1885ರಿಂದ ಈವರೆಗಿನ ಸುಮಾರು ಒಂದೂಕಾಲು ಶತಮಾನದ ಅವಧಿ ಏನಿದೆ ಅದು ಗುಲಾಮಗಿರಿಯಿಂದ ಪ್ರಜಾಪ್ರಭುತ್ವದೆಡೆಗಿನ, ಅರಸೊತ್ತಿಗೆಯಿಂದ ಜನತಂತ್ರದೆಡೆಗಿನ, ಅಸಮಾನತೆಯಿಂದ ಸಮಾನತೆಯೆಡೆಗಿನ ಚಲನೆಯಾಗಿದೆ.

ಭಿನ್ನತೆಯಿಂದ ಬಹುತ್ವದ ಕಸುವನ್ನೂ, ವೈವಿಧ್ಯತೆಯಿಂದ ಏಕತೆಯ ಬಲವನ್ನೂ ಪಡೆಯುವ ಮೂಲಕ ಭಾರತ ಇಂದು ಪ್ರಜಾಪ್ರಭುತ್ವವಾದಿ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಂತಿದೆ. ಭಾರತ ದೇಶದ ಈ ಅಭೂತಪೂರ್ವ ಪಯಣದಲ್ಲಿ ಚಾಲಕಶಕ್ತಿಯಂತೆ ಕಾರ್ಯನಿರ್ವಹಿಸಿರುವುದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ದೇಶದ ಪ್ರತಿಯೊಬ್ಬ ಪ್ರಜೆಯೂ ಹೊರಬೇಕಾಗಿದೆ. ಒಡೆದು ಹೋಗುತ್ತಿರುವ ಭಾರತವನ್ನು ಜೋಡಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ.

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಉನ್ನತ ಮೌಲ್ಯಗಳನ್ನು ಅನುಸರಿಸಿದಂತೆಯೇ ಸ್ವಾತಂತ್ರ್ಯೋತ್ತರ ಭಾರತದಲ್ಲಿಯೂ ಸಹ ಕಾಂಗ್ರೆಸ್ ಪಕ್ಷವು ಶಾಂತಿ, ಸಾಮರಸ್ಯ, ಧಾರ್ಮಿಕ ಸಹಿಷ್ಣುತೆಯಂಥ ಪ್ರಜಾತಾಂತ್ರಿಕ ಮೌಲ್ಯಗಳನ್ನು, ದೇಶದ ಏಕತೆಯನ್ನು ಎತ್ತಿ ಹಿಡಿಯುತ್ತಲೇ ಇಲ್ಲಿನ ವೈವಿಧ್ಯತೆ, ಬಹುತ್ವವನ್ನು ಸಂಭ್ರಮಿಸುವಲ್ಲಿ ಮುಂಚೂಣಿಯಲ್ಲಿದೆ.

ರಾಹುಲ್ ಗಾಂಧಿಯವರು ಭಾರತ ಜೋಡೊ ಪಾದಯಾತ್ರೆಯ ನೇತೃತ್ವ ವಹಿಸಿದ್ದರೂ ಇದು ಕೇವಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ. ಇದು ಭಾರತೀಯರೆಲ್ಲರ ಕಾರ್ಯಕ್ರಮ. ದೇಶದ ಬೇರೆಬೇರೆ ಭಾಗಗಳಿಂದ, ಜಾತಿ, ಧರ್ಮ, ಪಕ್ಷ, ಪಂಥಗಳನ್ನು ಮೀರಿ ಜನ ಬಂದು ಇದರಲ್ಲಿ ಭಾಗವಹಿಸಿದ್ದರು.

ಮೂರು ದಶಕಗಳ ಹಿಂದೆ ಈ ದೇಶದಲ್ಲಿ ರಥಯಾತ್ರೆಯೊಂದು ಹೊರಟಿತ್ತು. ದ್ವೇಷ, ಸುಳ್ಳು, ಅಪನಂಬಿಕೆಗಳನ್ನು ಬಿತ್ತುತ್ತಾ ಸಾಗಿದ ಆ ಯಾತ್ರೆ ಬಹುತ್ವ ಭಾರತದ ಎದೆಯೊಳಗೆ ಮಾಡಿದ ಗಾಯ ಇನ್ನೂ ಮಾಸಿಲ್ಲ. ಆ ಗಾಯಕ್ಕೆ ಪ್ರೀತಿ, ಶಾಂತಿ, ಸಹಬಾಳ್ವೆಯ ಮುಲಾಮು ಹಚ್ಚಿ ಗುಣಪಡಿಸುವ ಸದುದ್ದೇಶದಿಂದ ರಾಹುಲ್ ಗಾಂಧಿಯವರು ಪಾದಯಾತ್ರೆ ಶುರುಮಾಡಿದ್ದರು.

ಇದನ್ನೂ ಓದಿ: ಭಾರತ್ ಜೋಡೋ ಭಾಗ-2: ಗುಜರಾತ್‌ನಿಂದ ಮೇಘಾಲಯದವರೆಗೆ ರಾಹುಲ್ ಗಾಂಧಿ ಪಾದಯಾತ್ರೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುತ್ವ ಪ್ರಜೆಗಳ ದನಿಗೆ ಕಿವಿಗೊಡಬೇಕು. ಅವರ ಕಷ್ಟ-ಸುಖ, ಸಮಸ್ಯೆ-ಸಂಕಷ್ಟಗಳನ್ನು ಅರಿಯುವ ಕೆಲಸವನ್ನು ಮಾಡಬೇಕು. ಜನ ಪರಸ್ಪರ ಪ್ರೀತಿ-ವಿಶ್ವಾಸದಿಂದ ಒಟ್ಟಾಗಿ ಬದುಕುವ ವಾತಾವರಣವನ್ನು ಕಲ್ಪಿಸಬೇಕು. ಆದರೆ ಭಾರತೀಯ ಜನತಾ ಪಕ್ಷ ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ಜನರ ನಡುವೆ ಪರಸ್ಪರ ದ್ವೇಷಾಸೂಯೆಗಳನ್ನು ಬಿತ್ತಿ  ಸಮಾಜವನ್ನು ಜಾತಿ-ಧರ್ಮದ ಆಧಾರದಲ್ಲಿ ಒಡೆಯುವ ಕೆಲಸವನ್ನು ಮಾಡುತ್ತಿದೆ. ಅನ್ಯಾಯದ ವಿರುದ್ದ ದನಿ ಎತ್ತುವವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಲಾಗುತ್ತಿದೆ. ಇದರ ವಿರುದ್ದ ಸಂಘಟಿತವಾದ ಹೋರಾಟ ನಡೆಯಬೇಕಾಗಿದೆ.

ಇದು ನಾವೆಲ್ಲ ಕೈಕಟ್ಟಿ ತೆಪ್ಪಗೆ ಕೂರುವ ಕಾಲ ಅಲ್ಲ. ದೇಶ ಉಳಿಸುವ ಕರೆಗೆ ನಾವೆಲ್ಲರೂ ಓಗೊಡಬೇಕಾಗಿದೆ. ದೇಶದ ಏಕತೆ, ಸಮಗ್ರತೆಯನ್ನು ಉಳಿಸಲು, ದೇಶದ ಸಂಪತ್ತಿನ ಲೂಟಿಯನ್ನು ತಡೆಯಲು, ಸಂವಿಧಾನದ ಗೌರವವನ್ನು ಕಾಪಾಡಲು, ನಮ್ಮ ಹಿರಿಯರು ತ್ಯಾಗ-ಬಲಿದಾನಗಳ ಮೂಲಕ ಕಟ್ಟಿದ ಭಾರತವನ್ನು ಉಳಿಸಲು ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿದೆ.

ಇದನ್ನೂ ಓದಿ: ಕಾಂಗ್ರೆಸ್‌ಗೆ 'ಭಾರತ್ ಜೋಡೋ', ಬಿಜೆಪಿ-ಆರ್‌ಎಸ್‌ಎಸ್‌ಗೆ 'ಭಾರತ್ ತೋಡೋ' ಸಿದ್ಧಾಂತವಿದೆ: ರಾಹುಲ್ ಗಾಂಧಿ

ಈ ಹೋರಾಟಕ್ಕೆ ಮಹಾತ್ಮ ಗಾಂಧೀಜಿ, ಬಾಬಾ ಸಾಹೇಬ್ ಅಂಬೇಡ್ಕರ್, ಪಂಡಿತ ಜವಾಹರಲಾಲ ನೆಹರೂ, ಮೌಲಾನ ಅಬುಲ್ ಕಲಮ್ ಆಜಾದ್, ವಲ್ಲಭಭಾಯಿ ಪಟೇಲ್, ಶ್ರೀಮತಿ ಇಂದಿರಾಗಾಂಧಿ, ಶ್ರೀ ರಾಜೀವ್ ಗಾಂಧಿ ಸೇರಿದಂತೆ ಹಿರಿಯ ಚೇತನಗಳು ನಡೆಸಿದ ಹೋರಾಟ ಸ್ಪೂರ್ತಿಯಾಗಬೇಕು.

ಬನ್ನಿ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಮುನ್ನಡೆಯೋಣ, ಕೈಗೆ ಕೈ ಜೋಡಿಸಿ ಹೋರಾಟಕ್ಕೆ ಬಲತುಂಬೋಣ. ಒಡೆಯುವವರನ್ನು ಹಿಮ್ಮೆಟ್ಟಿಸಿ ಕಟ್ಟುವ ಕಾಯಕದಲ್ಲಿ ತೊಡಗಿಸೋಣ. ನವಕರ್ನಾಟಕವನ್ನೊಳಗೊಂಡ ನವಭಾರತವನ್ನು ನಿರ್ಮಿಸೋಣ ಎಂದು ಟ್ವೀಟ್ ಮಾಡಿದ್ದಾರೆ.


Stay up to date on all the latest ರಾಜ್ಯ news
Poll
N R narayana Murty

ಯಾವುದನ್ನೂ ಫ್ರೀಯಾಗಿ ಕೊಡಬಾರದು ಎಂದು ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp