ಸಿದ್ದುಗೆ ಪ್ರಧಾನಿ ಪಟ್ಟಕ್ಕೆ ಕುರುಬ ಸಮುದಾಯ ಇಂಗಿತ: ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಆ ಸ್ಥಾನಕ್ಕೇರಬಹುದು ಎಂದ ಸಿದ್ದರಾಮಯ್ಯ!
ಸಿದ್ದರಾಮಯ್ಯ ಅವರನ್ನು ದೇಶದ ಪ್ರಧಾನಮಂತ್ರಿಗಳ ಸ್ಥಾನದಲ್ಲಿ ನೋಡಲು ಕೆಲ ಕುರುಬ ಸಮುದಾಯದ ಮುಖಂಡರು ಇಂಗಿತ ವ್ಯಕ್ತಪಡಿಸಿದ್ದು, ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾನು ರೇಸ್ ನಲ್ಲಿ ಇಲ್ಲ. ಆದರೆ, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಆ ಸ್ಥಾನಕ್ಕೇರಬಹದುದು ಎಂದು ಹೇಳಿದ್ದಾರೆ...
Published: 10th September 2023 09:46 AM | Last Updated: 10th September 2023 02:53 PM | A+A A-

ಸಿಎಂ ಸಿದ್ದರಾಮಯ್ಯ
ಹುಬ್ಬಳ್ಳಿ: ಸಿದ್ದರಾಮಯ್ಯ ಅವರನ್ನು ದೇಶದ ಪ್ರಧಾನಮಂತ್ರಿಗಳ ಸ್ಥಾನದಲ್ಲಿ ನೋಡಲು ಕೆಲ ಕುರುಬ ಸಮುದಾಯದ ಮುಖಂಡರು ಇಂಗಿತ ವ್ಯಕ್ತಪಡಿಸಿದ್ದು, ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾನು ರೇಸ್ ನಲ್ಲಿ ಇಲ್ಲ. ಆದರೆ, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಆ ಸ್ಥಾನಕ್ಕೇರಬಹದುದು ಎಂದು ಹೇಳಿದ್ದಾರೆ. ಇದೇ ವೇಳೆ ನರೇಂದ್ರ ಮೋದಿಯವರನ್ನು ಉದಾಹರಣೆಯಾಗಿ ನೀಡಿದ್ದಾರೆ.
ಕೆಲ ದಿನಗಳಿಂದ ಹೇಳಿಕೆ ನೀಡುತ್ತಿರುವ ಕುರುಬ ಸಮುದಾಯದ ನಾಯಕ ಹೆಚ್ ವಿಶ್ವನಾಥ್, ಹೆಚ್ಎಂ ರೇವಣ್ಣ ಹಾಗೂ ಇವರ ಅನುಯಾಯಿಗಳು, ಮೋದಿಯವರಿಗೆ ಸವಾಲು ಹಾಕುವ ಏಕೈಕ ನಾಯಕರೆಂದರೆ ಅದು ಸಿದ್ದರಾಮಯ್ಯ. ಅವರಿಂದಲೇ ಕಾಂಗ್ರೆಸ್ ಹೆಚ್ಚೆಚ್ಚು ಸ್ಥಾನಗಳನ್ನು ಗೆಲುವು ಸಾಧಿಸಿದೆ. ಸಿದ್ದರಾಮಯ್ಯ ರಾಷ್ಟ್ರದ ರಾಜಕಾರಣಕ್ಕೆ ಹೋಗಬೇಕು ಎಂದು ಇಂಗಿತ ವ್ಯಕ್ತಪಡಿಸುತ್ತಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ್ದ ವಿಶ್ವನಾಥ್ ಅವರು, ಸಿದ್ದರಾಮಯ್ಯ ಅವರು ಯಾಕೆ ರಾಷ್ಟ್ರದ ರಾಜಕಾರಣಕ್ಕೆ ಹೋಗಬಾರದು. ಈ ಹಿಂದೆ ಹೆಚ್ ಡಿ ದೇವೇಗೌಡ ಅವರು ಪ್ರಧಾನಮಂತ್ರಿ ಆಗುವ ಯಾವುದೇ ಕನಸು ಕಂಡಿರಲಿಲ್ಲ. ಅದರಂತೆ ಸಿದ್ದರಾಮಯ್ಯ ಅವರು ಯಾವುದೇ ಕನಸು ಕಂಡಿಲ್ಲ. ಆದರೆ ನಾವು ಕನಸು ಕಾಣುತ್ತೇವೆಂದು ಹೇಳಿದ್ದರು.
ಇದನ್ನೂ ಓದಿ: ಯಾವುದೋ ಗಳಿಗೆಯಲ್ಲಿ ಪಕ್ಷ ಬಿಟ್ಟಿದ್ದೆ, ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದಲೇ ಟಿಕೆಟ್ ಕೇಳುವೆ: ಎಚ್ ವಿಶ್ವನಾಥ್
ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ನನಗೆ ಈ ಬಗ್ಗೆ ಆಸಕ್ತಿ ಇಲ್ಲ. ನಾನು ರಾಷ್ಟ್ರ ರಾಜಕಾರಣಕ್ಕೆ ಬರುವುದಿಲ್ಲ. ಆದರೆ, ಪ್ರಜಾಪ್ರಭುತ್ವದಲ್ಲಿ, ಯಾರು ಬೇಕಾದರೂ ಪ್ರಧಾನಿಯಾಗಬಹುದು. ಮೋದಿ ಅವರು ಗುಜರಾತ್ ರಾಜ್ಯದ ಸಿಎಂ ಆಗಿದ್ದರು. ನಂತರ ಪ್ರಧಾನಮಂತ್ರಿಗಳಾದರು ಎಂದು ಉದಾಹರಣೆ ನೀಡಿದರು.
ಇದೇ ವೇಳೆ ರಾಜ್ಯದಲ್ಲಿ ತಲೆದೋರುತ್ತಿರುವ ಜಲ ಸಮಸ್ಯೆ ಕುರಿತು ಮಾತನಾಡಿ, ಕಾವೇರಿ, ಮಹದಾಯಿ, ಕೃಷ್ಣಾ ಮೇಲ್ದಂಡೆ, ಮೇಕೆದಾಟು ಸೇರಿದಂತೆ ಕರ್ನಾಟಕಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಪ್ರಧಾನಿ ಕಚೇರಿಯಿಂದ ಸಮಯ ಕೇಳಿದೆ. ಆದರೆ, ಪಿಎಂಒ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದರು.
ಮಹದಾಯಿ ಯೋಜನೆ ಆರಂಭಿಸಲು ಸರ್ಕಾರ ಸಿದ್ಧವಿದೆ, ಆದರೆ, ಕೇಂದ್ರದಿಂದ ಅರಣ್ಯ ಮತ್ತು ಪರಿಸರ ಅನುಮತಿ ಸಿಕ್ಕಿಲ್ಲ. ಬರಪೀಡಿತ ಪ್ರದೇಶಗಳಿಗೆ ಪರಿಹಾರ ನೀಡಲು ಮಾರ್ಗಸೂಚಿಗಳನ್ನು ಪರಿಷ್ಕರಿಸುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿದೆ, ಆದರೆ ಕೇಂದ್ರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದರು.
ಇದನ್ನೂ ಓದಿ: ಮಾಡಿದ್ದು ಒಂದೇ ಒಂದು ಕಾಲ್, ಹೋಗಿದ್ದು ಬರೊಬ್ಬರಿ 1.99 ಲಕ್ಷ ರೂ.: ಹಣ ಕಳೆದುಕೊಂಡ ಎಂಎಲ್ ಸಿ ಹೆಚ್. ವಿಶ್ವನಾಥ್ ಪುತ್ರ!
ಇದೇ ವೇಳೆ ಪದೇ ಪದೇ ವಿದ್ಯುತ್ ಕಡಿತವಾಗುತ್ತಿರುವುದನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಕುರಿತು ಮಾತನಾಡಿ, ಆಗಸ್ಟ್‌ನಲ್ಲಿ ಮಳೆ ಕೊರತೆಯಾಗಿದ್ದರಿಂದ ವಿದ್ಯುತ್ ಬಳಕೆ ಹಲವು ಪಟ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹೊರಗಿನಿಂದ ಖರೀದಿಸಿ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಜೆಡಿಎಸ್-ಬಿಜೆಪಿ ಮೈತ್ರಿ ಕುರಿತು ಮಾತನಾಡಿ, “ಜೆಡಿಎಸ್ ಬಿಜೆಪಿಯ ಬಿ ಟೀಮ್ ಆಗಿದೆ. ಈ ಹಿಂದೆಯೇ ಈ ಬಗ್ಗೆ ನಾನು ಹೇಳಿದ್ದೆ. ಜಾತ್ಯತೀತ ಪಕ್ಷವಾಗಿರುವ ಜೆಡಿಎಸ್ ಈಗ ಕೋಮುವಾದಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಬೇರೆ ಪಕ್ಷಗಳೊಂದಿಗೆ ಕೈಜೋಡಿಸುವುದಿಲ್ಲ ಎಂದು ಹೇಳಿದ್ದರು, ಆದರೆ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂಬುದು ಈಗ ಸಾಬೀತಾಗಿದೆ ಎಂದು ಹೇಳಿದರು.