ಪಿಎಚ್‌ಸಿಗಳಲ್ಲಿ ಆರೋಗ್ಯ ಸೌಲಭ್ಯಗಳ ವಿಸ್ತರಿಸಲು ನಮ್ಮೊಂದಿಗೆ ಕೈ ಜೋಡಿಸಿ: 'ಫನಾ'ಗೆ ಬಿಬಿಎಂಪಿ ಮನವಿ
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಎಚ್‌ಸಿ) ವಿಶೇಷ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸಲು ಖಾಸಗಿ ಆಸ್ಪತ್ರೆಗಳು ನಮ್ಮೊಂದಿಗೆ ಕೈಜೋಡಿಸಬೇಕೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆರೋಗ್ಯ ಅಧಿಕಾರಿಗಳು ಶುಕ್ರವಾರ ಹೇಳಿದರು.
Published: 16th September 2023 12:10 PM | Last Updated: 16th September 2023 02:35 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಎಚ್‌ಸಿ) ವಿಶೇಷ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸಲು ಖಾಸಗಿ ಆಸ್ಪತ್ರೆಗಳು ನಮ್ಮೊಂದಿಗೆ ಕೈಜೋಡಿಸಬೇಕೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆರೋಗ್ಯ ಅಧಿಕಾರಿಗಳು ಶುಕ್ರವಾರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯಕ್ಕಾಗಿ), ಡಾ.ಕೆ.ವಿ ತ್ರಿಲೋಕ್ ಚಂದ್ರ ಅವರು, ಪ್ರತಿ ಖಾಸಗಿ ಆಸ್ಪತ್ರೆಯು ತಮ್ಮ ಸೇವೆಗಳನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಎಚ್‌ಸಿ) ವಿಸ್ತರಿಸುವ ವ್ಯವಸ್ಥೆಯನ್ನು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ ಅಸೋಸಿಯೇಷನ್ (PHANA) ರೂಪಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಗೆ ಆದ್ಯತೆ ನೀಡಬೇಕು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಬ್ರಾಂಡ್ ಬೆಂಗಳೂರು ಉಪಕ್ರಮದ ಅಡಿಯಲ್ಲಿ, ಖಾಸಗಿ ಆಸ್ಪತ್ರೆಗಳು ತಜ್ಞ ವೈದ್ಯರೊಂದಿಗೆ ಪಿಎಚ್‌ಸಿಗಳನ್ನು ಹೇಗೆ ಸುಗಮಗೊಳಿಸುವುದು ಮತ್ತು ಸರ್ಕಾರದ ಹೊರೆಯನ್ನು ಕಡಿಮೆ ಮಾಡುವುದು ಹೇಗೆ ಎಂಬುದನ್ನು ಚರ್ಚಿಸುತ್ತಿದೆ. ಅದರಂತೆ ಸರ್ಕಾರದಿಂದ ನಡೆಸಲ್ಪಡುವ ಮಾಧ್ಯಮಿಕ ಮತ್ತು ತೃತೀಯ ಆರೈಕೆ ಕೇಂದ್ರಗಳಿಗೆ ಬರುವ ರೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಕುರಿತಂತೆ ಫನಾ ಚಿಂತನೆ ನಡೆಸಬೇಕು. ಪ್ರತಿ ಖಾಸಗಿ ಆಸ್ಪತ್ರೆಯು ಹತ್ತಿರದ ಪಿಎಚ್‌ಸಿಯನ್ನು ದತ್ತು ಪಡೆದುಕೊಳ್ಳಬೇಕೆಂದು ತಿಳಿಸಿದರು.
ನಗರದಲ್ಲಿ ನೂರಾರು ಪಿಎಚ್‌ಸಿಗಳು ಮತ್ತು ನಮ್ಮ ಕ್ಲಿನಿಕ್‌ಗಳಿದ್ದರೂ, ಇಲ್ಲಿನ ಸೌಲಭ್ಯಗಳ ಕೊರತೆಯಿಂದಾಗಿ ನಾಗರೀಕರು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಸಂಸ್ಥೆಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಬೆಂಗಳೂರಿನ ಪ್ರಮುಖ ಸರ್ಕಾರಿ ಆಸ್ಪತ್ರೆಗಳಾದ ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಮತ್ತು ಜಯನಗರ ಜನರಲ್ ಆಸ್ಪತ್ರೆಗಳ ಮೇಲೆ ಹೊರೆ ಹೆಚ್ಚಾಗಿದೆ ಎಂದರು.