social_icon

ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ

ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಸಮಯದಲ್ಲಿ ಭಾರತ ದೇಶ ಸಣ್ಣ ಸಣ್ಣದಾದ ಸುಮಾರು 565 ರಾಜ್ಯಗಳು/ಸಂಸ್ಥಾನಗಳಾಗಿ ವಿವಿಧ ರಾಜ ಮಹಾರಾಜರುಗಳ ಆಳ್ವಡಿಗೆ ಒಳಪಟ್ಟಿತ್ತು.

Published: 17th September 2023 10:00 PM  |   Last Updated: 19th September 2023 05:27 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : Online Desk

ನಮಗೆಲ್ಲಾ ತಿಳಿದಿರುವಂತೆ ಆಗಸ್ಟ್ 15, 1947 ರಂದು ಸುಮಾರು 250ಕ್ಕೂ ಹೆಚ್ಚು ವರ್ಷಗಳ ಕಾಲ ಬ್ರಿಟಿಷರ ದಾಸ್ಯದಿಂದ ಹೊರಬಂದು ಭಾರತ ಸ್ವತ್ರಂತ್ಯ ದೇಶವಾಯಿತು. ಆದರೆ ಹಾಗೆ ಸ್ವಾತ್ರಂತ್ಯವಾಗುವುದಕ್ಕೂ ಮುನ್ನ ಧರ್ಮಾಧಾರಿತವಾಗಿ ಬ್ರಿಟೀಷರು ಭಾರತವನ್ನು ಮೂರು ಭಾಗಗಳನ್ನಾಗಿ ಮಾಡಿ ಭಾರತದ ಎಡ ಮತ್ತು ಬಲಗಳಲ್ಲಿ ಪೂರ್ವ ಮತ್ತು ಪಶ್ಛಿಮ ಪಾಕಿಸ್ಥಾನ (70ರ ದಶದಲ್ಲಿ ಸ್ವತಂತ್ರವಾದ ಬಾಂಗ್ಲಾ ದೇಶವಾಯಿತು) ಎಂದು ತುಂಡರಿಸಿ ಮಧ್ಯದ ಭಾಗವನ್ನು ಸ್ವತಂತ್ರ ಹಿಂದೂಸ್ಥಾನ ಎಂದು ಕರೆದು ಹೋದರು.

ಹಾಗೆ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಸಮಯದಲ್ಲಿ ಭಾರತ ದೇಶ ಸಣ್ಣ ಸಣ್ಣದಾದ ಸುಮಾರು 565 ರಾಜ್ಯಗಳು/ಸಂಸ್ಥಾನಗಳಾಗಿ ವಿವಿಧ ರಾಜ ಮಹಾರಾಜರುಗಳ ಆಳ್ವಡಿಗೆ ಒಳಪಟ್ಟಿತ್ತು. ಸ್ವಾತಂತ್ರ್ಯಾ ನಂತರದ ಭಾರತದ ಸರ್ಕಾರದ ಪ್ರಥಮ ಗೃಹ‍ ಸಚಿವರಾದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ನೇತೃತ್ವದಲ್ಲಿ ಇಂತಹ ಸಣ್ಣ ಸಣ್ಣ ರಾಜ್ಯಗಳಿಗೆ/ಸಂಸ್ಥಾನಗಳಿಗೆ ಹೊಸದಾಗಿ ರಚಿಸಲ್ಪಡುವ ಭಾರತ ಅಥವಾ ಪಾಕಿಸ್ತಾನದ ಜೊತೆ ವಿಲೀನವಾಗಲು ಅಥವಾ ಸ್ವತಂತ್ರವಾಗಿಯೇ ಇರಬಹುದಾದ ಆಯ್ಕೆಗಳನ್ನು ಅವರಿಗೆ ಕೊಡಲಾಗಿತ್ತು.

ಈ ರೀತಿಯ ಆಯ್ಕೆಯನ್ನು ಬಹುತೇಕ ರಾಜ್ಯಗಳು/ಸಂಸ್ಥಾನಗಳು ಆರಂಭದಲ್ಲಿ ಒಪ್ಪಲು ಹಿಂದೇಟು ಹಾಕಿದರು, ಪಟೇಲರ ರಾಜಕೀಯ ಮುತ್ಸದ್ದಿತನ ಮತ್ತು ಚಾಣಾಕ್ಷತನದಿಂದ ಮತ್ತು ಭವಿಷ್ಯದ ದೃಷ್ಟಿಯಿಂದ ಬಹುತೇಕ ಎಲ್ಲಾ ರಾಜ್ಯಗಳೂ ಭಾರತದೊಂದಿಗೆ ವಿಲೀನವಾಗಲು ಶರತ್ತುಬದ್ಧವಾಗಿ ಒಪ್ಪಿಕೊಂಡರೆ, ಮೈಸೂರು ಸಂಸ್ಥಾನದ ನಮ್ಮ ಒಡೆಯರ್ ಅವರು ಮಾತ್ರಾ ಯಾವುದೇ ಷರತ್ತುಗಳು ಇಲ್ಲದೇ ಹೃತ್ಪೂರ್ವಕವಾಗಿ ಸ್ವತಂತ್ರ್ಯ ಭಾರತಕ್ಕೆ ವಿಲೀನವಾಗಲು ಒಪ್ಪಿಕೊಂಡು ಸಹಿ ಹಾಕಿದ ಮೊತ್ತಮೊದಲನೇ ರಾಜರು ಎಂದೆನಿಸಿಕೊಂಡರೆ, ಅವರನ್ನೇ ಅನುಸರಿಸಿ, ಕೊಚ್ಚಿ, ತಿರುವನಂತಪುರ, ಭೋಪಾಲ್, ಗುಜರಾತ್ ಪ್ರಾಂತ್ಯದ ಬಹುತೇಕ ಚಿಕ್ಕ ಚಿಕ್ಕ ರಾಜ್ಯಗಳು ಸಹಾ ಭಾರತಕ್ಕೆ ಸೇರಿಕೊಂಡವು. ದುರಾದೃಷ್ಟವಷಾತ್ ಹೈದರಾಬಾದಿನ ನಿಜಾಮ ಮತ್ತು ಜುನಾಗಢದವರು ಪಾಕಿಸ್ತಾನದೊಂದಿಗೆ ಸೇರಲು ಇಚ್ಚಿಸಿದರೆ, ಕಾಶ್ಮೀರದ ರಾಜ ಅಲಿಪ್ತನೀತಿಯನ್ನು ತಾಳಿ ಸ್ವತಂತ್ರ್ಯವಾಗಿ ಉಳಿಯಲು ನಿರ್ಧರಿಸಿದರು. ಮುಂದೆ ನಾನಾ ರೀತಿಯ ರಾಜಕೀಯ ಕಾರಣಗಳಿಂದಾಗಿ ಕಾಶ್ಮೀರ ಮತ್ತು ಜುನಾಗಢ ಭಾರತಕ್ಕೆ ಸೇರಿಕೊಂಡರೆ, ದಕ್ಷಿಣ ಭಾಗದಲ್ಲಿದ್ದ ಹೈದರಾಬಾದಿನ ನಿಜಾಮ ಮಾತ್ರ ಪಾಕೀಸ್ಥಾನದ ಪರ ಕಠಿಣ ಒಲವು ತೋರಿದ್ದು ಪಟೇಲರಿಗೆ ತಲೆ ನೋವನ್ನು ತರಿಸಿತ್ತು.

ಹೈದರಾಬಾದ್ ರಾಜ್ಯದ ಅಥಿಕಾರ ಅಸಫ್ ಜಾಹಿ ರಾಜವಂಶದ VII ಮೀರ್ ಒಸ್ಮಾನ್ ಅಲಿ ಖಾನ್ ಎಂಬ ಮುಸಲ್ಮಾನ ನಿಜಾಮ ದೊರೆಯ ಹಿಡಿತದಲ್ಲಿ ಇದ್ದರೂ, ಆ ಪ್ರಾಂತ್ಯಕ್ಕೆ ಸೇರಿದ್ದ, ತೆಲಂಗಾಣ, ಮಹಾರಾಷ್ಟ್ರದ ಮರಾಠವಾಡ, ಕರ್ನಾಟಕದ ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಬಹುಸಂಖ್ಯಾತರಾಗಿ ಹಿಂದೂಗಳೇ ಇದ್ದ ಕಾರಣ ಅವರೆಲ್ಲರೂ ಹಿಂದೂಸ್ಥಾನದ ಪರವಾಗಿರಲು ಇಚ್ಚಿಸುತ್ತಿದ್ದರು. ಇದನ್ನು ಗಮನಿಸಿದ ಹೈದರಾಬಾದಿನ ನಿಜಾಮ ಕೂಡಲೇ ತನ್ನದು ಸ್ವತಂತ್ರ ರಾಜ್ಯ ಎಂದು ಘೋಷಿಸಿಕೊಂಡಿದ್ದಲ್ಲದೇ ಒಳಗೊಳಗೇ, ಪಾಕಿಸ್ತಾನದ ಮುಸ್ಲಿಮ್ ಲೀಗ್ ಜೊತೆ ಸಂಪರ್ಕವನ್ನು ಬೆಳಸಿ ಹೇಗಾದರೂ ಮಾಡಿ ತನ್ನ ಪ್ರದೇಶವನ್ನು ಪಾಕೀಸ್ಥಾನದೊಂದಿಗೆ ಸೇರಿಸಲು ಸಾಧ್ಯವೇ ಎಂದು ಹೊಂಚುಹಾಕುತ್ತಿದ್ದ. ಆಗ ತಾನೇ ಕಾಶ್ಮೀರದ ಸಮಸ್ಯೆ ಗಂಭೀರವಾಗುತ್ತಿದ್ದನ್ನು ಗಮನದಲ್ಲಿ ಇಟ್ಟುಕೊಂಡಿದ್ದ ಮತ್ತು ನಿಜಾಮನ ಈ ರೀತಿಯ ಕುತಂತ್ರದ ಬಗ್ಗೆ ಅರಿತಿದ್ದ ವಲ್ಲಭಭಾಯಿ ಪಟೇಲರು ಇದು ಮತ್ತೊಂದು ಕಾಶ್ಮೀರ ಆಗುವುದು ಬೇಡ ಎಂದು ನಿರ್ಧರಿಸಿ, ಬಹು ಜನರ ಆಶಯದಂತೆ ಈ ಪ್ರಾಂತ್ಯವನ್ನು ಭಾರತದಲ್ಲಿ ವಿಲೀನಗೊಳಿಸಲು ಕಾರ್ಯತಂತ್ರ ರೂಪಿಸಿದರು.

ಹೈದರಾಬಾದ್ ರಾಜ್ಯದ ಬಹುಸಂಖ್ಯಾತ ಹಿಂದೂಗಳು ಭಾರತ ಪರ ಒಲವಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಪಟೇಲರು ಏನಾದರೂ ತಂತ್ರಗಾರಿಕೆ ಮಾಡಬಹುದು ಎಂಬುದನ್ನು ಊಹಿಸಿದ್ದ ಹೈದರಾಬಾದ್ ನಿಜಾಮನೂ ಸಹಾ, ತನ್ನ ರಾಜ್ಯದಲ್ಲಿ ರಜಾಕಾರರೆಂಬ ಧಾರ್ಮಿಕ ಮತಾಂಧರ ಖಾಸಗಿ ಸೈನ್ಯವನ್ನು ಪರೋಕ್ಷವಾಗಿ ಕಟ್ಟಿ ಖಾಸಿಂ ರಜ್ವಿ ಎಂಬ ಮತಾಂಧನನ್ನು ಅದರ ಮುಖ್ಯ ಸೇನಾಧಿಕಾರಿಯಾಗಿ ನೇಮಿಸಿ ತನ್ನ ರಾಜ್ಯದಲ್ಲಿರುವ ಯಾವ ಪ್ರಜೆಗಳು ಭಾರತದ ಜೊತೆ ವಿಲೀನವಾಗಲು ಬಯಸಿದ್ದರೋ ಅಂತಹವರನ್ನು ಸದೆ ಬಡಿಯುವ ಕಾರ್ಯಕ್ಕೆ ನಿಯೋಜಿಸಿದ. ಶೇ 90ರಷ್ಟಿದ್ದ ಹಿಂದೂಗಳ ಮೇಲೆ ರಜಾಕಾರ ಕ್ರೂರತನದ ದೌರ್ಜನ್ಯ ದಿನೇ ದಿನೇ ಹೆಚ್ಚಾಗತೊಡಗಿತು.

ಭಾರತದ ಟ್ರೇಡ್ ಏಜೆಂಟ್ ಆಗಿ ಹೈದರಾಬಾದ್ ತಲುಪಿದ ಮುನ್ಶಿಯವರ ಹಾದಿ ಸುಗಮವಾಗಿ ಏನೂ ಇರಲಿಲ್ಲ. ಆರಂಭದಿಂದಲೂ ನಿಜಾಮರು ಅವರಿಗೆ ಒಂದಲ್ಲಾ ಒಂದು ರೀತಿಯ ಕಾಟವನ್ನೇ ನೀಡುತ್ತಲೇ ಇದ್ದದ್ದಲ್ಲದೇ, ಅವರಿಗೆ ಸೂಕ್ತವಾದ ವಸತಿಯನ್ನು ಒದಗಿಸಲು ನಿರಾಕರಿಸಿದಾಗ,ಭಾರತೀಯ ಸೇನೆಗೆ ಸೇರಿದ ಎರಡು ಕಟ್ಟಡದಲ್ಲಿಯೇ ಮುನ್ಷಿಯವರು ತಮ್ಮ ಸಿಬ್ಬಂದ್ದಿಗಳೊಂದಿಗೆ ವಾಸಿಸತೊಡಗಿ, ನಿಧಾನವಾಗಿ ರಜಾಕರಿಂದ ಮತ್ತು ಕಮ್ಯೂನಿಷ್ಟರಿಂದ ತೊಂದರೆಗೊಳಗಾಗುತ್ತಿದ್ದ ಹಿಂದೂಗಳನ್ನು ಭೇಟಿ ಮಾಡಿ ಅವರ ಸಂಕಟಗಳನ್ನು ಅರಿತು ಪಟೇಲರಿಗೆ ರಹಸ್ಯವಾಗಿ ವರದಿ ಮಾಡತೊಡಗಿದರು.

ಅದೇ ಸಮಯದಲ್ಲಿ ಅಲ್ಲಿನ ಜನರೂ ತಮ್ಮ ಸ್ವಾತಂತ್ರ್ಯಕ್ಕಾಗಿ  ಸರದಾರ ಶರಣಗೌಡ ಇನಾಮದಾರ್, ಸ್ವಾಮಿ ರಾಮನಂದ ತೀರ್ಥರು ಮುಂತಾದ ಪ್ರಮುಖರ ಮುಂದಾಳತ್ವದಲ್ಲಿ ಹೋರಾಟ ನಡೆಸಲು ಆರಂಭಿಸಿದ್ದಲ್ಲದೇ ದೇಶದ ತ್ರಿವರ್ಣ ಧ್ವಜವನ್ನು ಹಾರಿಸಲು ಪ್ರಯತ್ನಿಸುವ ಸಂಧರ್ಭದಲ್ಲಿ ರಜಾಕರಗಳು ಅವರನ್ನು ನಿರ್ದಯವಾಗಿ ಗುಂಡು ಹಾರಿಸಿ ಕೊಂದು ಹಾಕಿದ್ದರು. ಈ ಹೋರಾಟದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸತ್ಯಾಗ್ರಹಿಗಳೂ ಸಹಾ ಹೈದರಾಬಾದ್ ವಿಮೋಚನಾ ಚಳವಳಿಯಲ್ಲಿ ಸಕ್ರಿಯವಾಗಿ ಬೆಂಬಲಿಸಿದ್ದಲ್ಲದೇ, ಆಗಸ್ಟ್ 1946 ರಲ್ಲಿ, ತೆಲಂಗಾಣದ “ವರಂಗಲ್” ನಗರದಲ್ಲಿ ರಜಾಕರರು ಹಿಂದೂಗಳನ್ನು ಹತ್ಯೆ ಮಾಡಿದಾಗ, ಸಂಘದ ಸ್ವಯಂ ಸೇವಕರು ವಾರಂಗಲ್ ಕೋಟೆಯ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರು.

ಇವೆಲ್ಲದರ ಮಧ್ಯೆ ಇಸ್ಲಾಮ್ ಮತಾಂಧ ರಜಾಕಾರರ ಜೊತೆಗೆ, ಕಮ್ಯುನಿಸ್ಟರೂ ಸಹಾ ಸದ್ದಿಲ್ಲದೇ ಈ ಪ್ರಕ್ರಿಯೆಯನ್ನು ಪರೋಕ್ಷವಾಗಿ ಹೇಗೆ ಬೆಂಬಲಿಸಿದ್ದರು ಎಂಬುದನ್ನು ಹಿರಿಯ ಲೇಖಕರಾದ ಲೇಖಕ ಶ್ರೀ ವಿ.ಪಿ.ಮೆನನ್ ಅವರು ತಮ್ಮ. ದಿ ಸ್ಟೋರಿ ಆಫ್ ಇಂಟಿಗ್ರೇಷನ್ ಆಫ್ ಇಂಡಿಯನ್ ಸ್ಟೇಟ್ಸ್ ಎಂಬ ತನ್ನ ಪುಸ್ತಕದಲ್ಲಿ ಈ ರೀತಿಯಾಗಿ ವಿವರಿಸಿದ್ದಾರೆ.

ಆ ಪ್ರಾಂತ್ಯದ ಜನರನ್ನು ರಜಾಕಾರರು ಹಗಲಿನ ಹೊತ್ತು ದಂಡಿಸಿದರೆ, ಕಮ್ಯೂನಿಸ್ಟರು ರಾತ್ರಿಯ ಹೊತ್ತಿನಲ್ಲಿ ದಬ್ಬಾಳಿಕೆ ನಡೆಸಿದರು. ತದನಂತರ ಕಮ್ಯೂನಿಸ್ಟರು ರಜಾಕಾರರೊಂದಿಗೆ ಮೈತ್ರಿಯನ್ನು ಮಾಡಿಕೊಳ್ಳುವ ಮೂಲಕ ಅಕ್ಷರಶಃ ಭಾರತದ ಪರ ಒಲವಿದ್ದ ಹಿಂದೂಗಳನ್ನು ಹತ್ಯೆಮಾಡುವ ಮೂಲಕ ಹತ್ತಿಕ್ಕುವ ಪಯತ್ನ ಮಾಡಿದರು. ಈ ಎಲ್ಲಾ ಕುಕೃತ್ಯಗಳಿಗೆ ಹೈದರಾಬಾದಿನ ನಿಜಾಮನ ಕೃಪಾಶೀರ್ವಾದವಿತ್ತು ಎಂಬುದು ನಿಜಕ್ಕೂ ವಿಪರ್ಯಾಸವೇ ಸರಿ. ನಿಜಾಮ, ರಜಾಕಾರರು ಮತ್ತು ಕಮ್ಯುನಿಸ್ಟರು ಈ ಮೂವರು ಸಂಘಟಿತರಾಗಿ ಇಡೀ ಪ್ರಾಂತ್ಯವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಪರಿವರ್ತಿಸಲು ಉದ್ದೇಶಿಸಿದ್ದರು. ರಜಾಕಾರರ ಈ ಪರಿಯ ಕಿರುಕುಳಗಳನ್ನು ರಜಾಕಾರರ ಕಿರುಕುಳ ತಾಳದೆ ಪ್ರಾಣ ರಕ್ಷಣೆಗಾಗಿ ಅದಾಗಲೇ ಭಾರತದ ಪರವಾಗಿದ್ದ ಆಕ್ಕ ಪಕ್ಕದ ಜಿಲ್ಲೆಗಳಾದ ಬಿಜಾಪುರ ಮತ್ತು ಸೋಲಾಪುರಕ್ಕೆ ಬಂದು ಆಶ್ರಯವನ್ನು ಪಡೆಯತೊಡಗಿದರು.

ರಜಾಕರಿಗಿಂತಲೂ ಕ್ರೂರರಾಗಿದ್ದ ಕಮ್ಯುನಿಸ್ಟರು ಹೈದರಾಬಾದಿನ ಹಿಂದೂಗಳ ಮೇಲೆ ಉಗ್ರವಾದ ದೌರ್ಜನ್ಯವನ್ನು ನಡೆಸಿದ ಪರಿಣಾಮ 1947 ಆಗಸ್ಟ್ 15 ರಿಂದ 13 ಸೆಪ್ಟೆಂಬರ್ 1948 ರವರೆಗೆ ಸುಮಾರು 2000 ಕ್ಕೂ ಅಧಿಕ ಹಿಂದೂಗಳನ್ನು ಬರ್ಬರವಾಗಿ ಕೊಂದಿದ್ದಲ್ಲದೇ, ಸುಮಾರು 22 ಪೋಲಿಸ್ ಔಟ್ ಪೋಸ್ಟ್‌ಗಳ ಮೇಲೆ ದಾಳಿ ಮಾಡಿ, ನೂರಾರು ಗ್ರಾಮಗಳ ಮೇಲೆ ಧಾಳಿ ಮಾಡಿ ಅಲ್ಲಿನ ದಾಖಲೆಗಳನ್ನು ವಶಪಡಿಸಿಕೊಂಡು ನಾಶ ಪಡಿಸಿದ್ದಲ್ಲದೇ, ಅಲ್ಲಿನ ಪೋಲೀಸ್ ಠಾಣೆಯಿಂದ ಸುಮಾರು 230 ಬಂದೂಕುಗಳನ್ನು ಸ್ವಾದೀನಕ್ಕೆ ತೆಗೆದುಕೊಂಡು ಅದರ ಮೂಲಕ ಹಿಂದುಗಳ ಮೇಲೆ ಮತ್ತಷ್ಟು ದೌರ್ಜನ್ಯವನ್ನು ಎಸಗಲು ಮುಂದಾಗಿದ್ದ ವಿಷಯವನ್ನು ಮುನ್ಶಿಯವರು ಪಟೇಲರಿಗೆ ತಿಳಿಸಿದ್ದಲ್ಲದೇ, ಈ ಆತಂಕಕಾರಿ ಅಶಾಂತಿಯ ನಡುವೆ, ನಿಜಾಮರು ಸ್ಟ್ಯಾಂಡ್‌ಸ್ಟಿಲ್ ಒಪ್ಪಂದದ ನಿಯಮಗಳನ್ನು ಗೌರವಿಸಲು ನಿರಾಕರಿಸಿದ ಪರಿಣಾಮ, ಶಾಂತಿ ಮತ್ತು ಸಾಮರಸ್ಯವನ್ನು ಪುನಃಸ್ಥಾಪಿಸಲು ಈ ಕೂಡಲೇ ಕೇಂದ್ರ ಪಡೆಗಳನ್ನು ಕಳುಹಿಸಿ ಕೊಡಲು ಕೋರಿಕೊಂಡರು.

ಸರ್ದಾರ್ ವಲ್ಲಭಬಾಯಿ ಪಟೇಲ್ 

ಇಂತಹ ಸಮಯಕ್ಕೇ ಕಾಯುತ್ತಿದ್ದ ಪಟೇಲರು ಪಟೇಲರು ನಿಜಾಮನೊಂದಿಗೆ ಮಾತುಕತೆಗಳನ್ನು ನಡೆಸುವ ಮೂಲಕ, ನಿರಂತರವಾಗಿ ರಾಜತಾಂತ್ರಿಕ ಒತ್ತಡಗಳನ್ನು ಹೇರಿದರೂ ಅವರ ಷರತ್ತುಗಳಿಗೆ ನಿಜಾಮ ಒಪ್ಪದಿದ್ದಾಗ ಅಂತಿಮವಾಗಿ ಪಟೇಲರು ನಮ್ಮ ಭಾರತೀಯ ಸೇನೆಯನ್ನು ಹೈದರಾಬಾದ್ ಪ್ರಾಂತ್ಯಕ್ಕೆ ಸೆಪ್ಟೆಂಬರ್ 13 1948 ರಂದು ನುಗ್ಗಿಸಿ, ದಂಡಂ ದಶಗುಣಂ ಭವೇತ್ ಎಂದು ಸೆಪ್ಟೆಂಬರ್ 17ರವರೆಗೂ ಸುಮಾರು 5 ದಿನಗಳ ಕಾಲ ನಿರಂತವಾಗಿ ಭಾರತೀಯ ಸೇನೆಯು ತಮ್ಮ ಶೌರ್ಯ ಮತ್ತು ನಿಖರವಾದ ಸಿದ್ಧತೆಯ ಮೂಲಕ ಹೈದರಾಬಾದ್ ನಿಜಾಮರ ಪಡೆಯ ವಿರುದ್ಧ ಹೋರಾಟ ನಡೆಸಿ, ಅವರನ್ನು ಮಣಿಸಿದ ಪರಿಣಾಮ, ನಿಜಾಮನ ಸೇನೆ ಸಂಪೂರ್ಣವಾಗಿ ಭಾರತೀಯ ಸೇನೆಗೆ ಶರಣಾಗುತ್ತಿದ್ದಂತೆಯೇ ಹೈದರಾಬಾದ್ ನಿಜಾಮ ತನ್ನ  ಸ್ವತಂತ್ರ ರಾಜ್ಯವನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸಲು ಒಪ್ಪಿಕೊಂಡ ಪರಿಣಾಮ ಆಪರೇಷನ್ ಪೋಲೋ ಕಾರ್ಯಾಚರಣೆ ಅತ್ಯಂತ ಯಶಸ್ವಿಯಾಗಿ ಹೈದರಾಬಾದ್  ಪ್ರಾಂತ್ಯ ಭಾರತದೊಂದಿಗೆ 17ನೇ ಸಪ್ಟೆಂಬರ್ 1948 ರಂದು ವಿಲೀನವಾಯಿತು. ಮುಂದೆ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ದೇಶದ ಎಲ್ಲಾ ಭಾಗಗಳು ಪುನರ್ವಿಂಗಡಣೆಯಾದ ಸಂಧರ್ಭದಲ್ಲಿ ಹೈದರಾಬಾದ್ ನಿಜಾಮನ ಆಳ್ವಿಕೆಯಲ್ಲಿದ್ದ ಕನ್ನಡ ಭಾಷಿಕರ ಪ್ರಾಂತ್ಯಗಳು ಅಂದಿನ ಮೈಸೂರು ರಾಜ್ಯಕ್ಕೆ ಸೇರಿಕೊಂಡಿತು.

ಹೀಗೆ ಮೈಸೂರು ಪ್ರಾಂತ್ಯಕ್ಕೆ ಸೇರಿಕೊಂಡರೂ ಅಲ್ಲಿನ ಜನರು, ಹೈದಾರಾಬಾದಿನ ನಿಜಾಮನಿಂದ ಬಿಡುಗಡೆ ಹೊಂದಿದ ಶುಭಗಳಿಕೆಯನ್ನು ಪ್ರತೀವರ್ಷವೂ ಸಪ್ಟೆಂಬರ್ 17 ರಂದು ಅತ್ಯಂತ ಸಂಭ್ರಮ ಸಡಗರಗಳಿಂದ, ಮತ್ತು ಬಹಳ ವಿಜೃಂಭಣೆಯಿಂದ ವಿಮೋಚನಾ ದಿನಾಚರಣೆಯನ್ನು ಆಚರಿಸುವುದನ್ನು ರೂಢಿಗೆ ತಂದಿದ್ದಲ್ಲದೇ, ಅಂದು ಆಗಸ್ಟ್ 15 ರಂದು ಸ್ವಾತ್ರಂತ್ರ್ಯ ದಿನಾಚರಣೆಯನ್ನು ಅಚರಿಸುವಂತೆಯೇ ಧ್ವಜಾರೋಹಣ ಮಾಡಿ ಆನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಚರಿಸುವ ಮೂಲಕ ಆ ಪ್ರಾಂತ್ಯದಲ್ಲಿ ಅದೊಂದು ಸರ್ಕಾರಿ ಹಬ್ಬವನ್ನಾಗಿ ಆಚರಿಸಿಕೊಂಡು ಬಂದಿದ್ದಾರೆ. 

ತದ ನಂತರ ಅದೇ ಸಪ್ಟೆಂಬರ್ 17ರ 2019 ರಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಯಡೆಯೂರಪ್ಪನವರ ಸಾರಥ್ಯದಲ್ಲಿ ಅದೇ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಉತ್ಸವದ ಹೆಸರನ್ನು ಬದಲಾಯಿಸಿ ಅದನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನವನ್ನಾಗಿ ಆಚರಿಸುವ ಪದ್ದತಿಯನ್ನು ರೂಢಿಗೆ ತಂದರು. ಕರ್ನಾಟಕದ ಉಳಿದ ಎಲ್ಲಾ ಭಾಗಗಳಲ್ಲಿ ವರ್ಷಕ್ಕೆ ಒಂದು ಬಾರಿ ಸ್ವಾತಂತ್ರ್ಯ ದಿನವನ್ನು ಆಚರಿಸಿದರೆ ಕಲ್ಯಾಣ ಕರ್ನಾಟಕದ ಜನರು ಮಾತ್ರಾ ಎರಡು ಬಾರಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಾರೆ. ಆಗಸ್ಟ್ 15 ರಂದು ಬ್ರಿಟೀಷರ ದಾಸ್ಯದಿಂದ ಹೊರಬಂದ ಸಂಭ್ರಮವಾದರೇ, ಸಪ್ಟೆಂಬರ್ 17 ನಿಜಾಮ ಮತ್ತು ರಝಾಕಾರ ದಬ್ಬಾಳಿಕೆಯಿಂದ ಹೊರಬಂದು ಭಾರತದ ಒಕ್ಕೂಟಕ್ಕೆ ಸೇರಿದ ಸುದಿನವನ್ನು ನೆನಪಿಸಿಕೊಳ್ಳುತ್ತಾರೆ.

ಈ ದಿನದ ಸಂಪೂರ್ಣ ಶ್ರೇಯ ಭಾರತ ಪರ ಸೇರಿಕೊಳ್ಳಲು ರಜಾಕರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ ಎಲ್ಲಾ ಸ್ವಾತ್ರಂತ್ಯ್ರ ಹೋರಾಟಗಾರರಿಗೂ ಮತ್ತು ಹೈದರಾಬಾದಿನ ನಿಝಾಮನ ಎಲ್ಲಾ ಕುತಂತ್ರವನ್ನೂ ಚಾಣಾಕ್ಷತನದಿಂದ ಮೆಟ್ಟಿ ಆತನನ್ನು ಶರಣಾಗುವಂತೆ ಮಾಡಿ ಹೈದರಾಬಾದ್ ಪ್ರಾಂತ್ಯವನ್ನು ಮತ್ತೊಂದು ಕಾಶ್ಮೀರವಾಗದಂತೆ ತಡೆದ ಅಂದಿನ ಗೃಹಮಂತ್ರಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಮತ್ತು ಕೆ.ಎಂ. ಮುನ್ಶಿಯವರಿಗೆ ಅವರಿಗೆ ಸಲ್ಲುತ್ತದೆ. ಅಂತಹ ಮಹಾನುಭಾವರನ್ನು ಇಂದು ನಾವೆಲ್ಲರು ಹೃತ್ಪೂರ್ವಕವಾಗಿ ನೆನಪಿಸಿಕೊಂಡು ಗೌರವ ಸಲ್ಲಿಸುವುದು ಕೇವಲ ಕಲ್ಯಾಣ ಕರ್ನಾಟಕದ ಜನರಿಗಷ್ಟೇ ಅಲ್ಲದೇ ಸಮಸ್ತ ಭಾರತೀಯರ ಆದ್ಯ ಕರ್ತವ್ಯ ಆಗಿದೆ ಅಲ್ವೇ?

ಬರಹ-ಶ್ರೀಕಂಠ ಬಾಳಗಂಚಿ

ಏನಂತೀರಿ.ಕಾಂ


Stay up to date on all the latest ರಾಜ್ಯ news
Poll
Khalistani militant Hardeep Singh Nijjar

ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವನ್ನು ನೀವು ನಂಬುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp