
ಸಾಂದರ್ಭಿಕ ಚಿತ್ರ
ಬೆಂಗಳೂರು: ತಮ್ಮನ್ನು ಆರ್‌ಎಸ್‌ಎಸ್ ಕಾರ್ಯಕರ್ತರು ಎಂದು ಹೇಳಿಕೊಂಡು ಗೋಮಾಂಸ ದರೋಡೆ ಮಾಡಿದ್ದ ಗ್ಯಾಂಗ್ ವೊಂದನ್ನು ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತರಂತೆ ನಟಿಸಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದ ನಾಲ್ವರನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿಯನ್ನು ಮೊಹಮ್ಮದ್ ಎಂದು ಪೊಲೀಸರು ಗುರುತಿಸಿದ್ದು, ಈತ ಗೋಮಾಂಸವನ್ನು ಅಪಹರಿಸಿ ಕಳ್ಳತನ ಮಾಡಲು ಯೋಜನೆ ರೂಪಿಸಿದ್ದ ಎಂದು ತಿಳಿದು ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಸೆಪ್ಟೆಂಬರ್ 10 ರಂದು ಜಾವೇದ್ ಎಂಬ ವ್ಯಕ್ತಿ ರಾಮನಗರದಿಂದ ಬೆಂಗಳೂರಿನ ತಿಲಕ್ ನಗರದ ಅಂಗಡಿಯೊಂದಕ್ಕೆ ಗೋಮಾಂಸ ಸಾಗಿಸುತ್ತಿದ್ದ. ಆತ ಮೈಕೋ ಲೇಔಟ್ ಸಿಗ್ನಲ್ ತಲುಪಿದಾಗ ಮೂವರು ವ್ಯಕ್ತಿಗಳು ತಾವು ಆರ್‌ಎಸ್‌ಎಸ್ ಕಾರ್ಯಕರ್ತರೆಂದು ಹೇಳಿಕೊಂಡು ಕಾರನ್ನು ನಿಲ್ಲಿಸಿ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದಿದ್ದರು. ಈ ವೇಳೆ ಆರೋಪಿ ಮಹಮದ್ ವಾಹನದಲ್ಲಿ ಗೋಮಾಂಸ ಸಾಗಿಸಲು ಬಿಡಲು 1 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದ. ಇದಕ್ಕೆ ಒಪ್ಪಿದ ಜಾವೆದ್ 10,000 ರೂ.ಗಳನ್ನು ಪಾವತಿಸಿದ ನಂತರ ಹೋಗಲು ಅವಕಾಶ ನೀಡಲಾಯಿತು.
ಇದನ್ನೂ ಓದಿ: ಕರ್ನಾಟಕ: ಟ್ರೆಕ್ಕಿಂಗ್ ವೇಳೆ ಎನ್ಸೆಫಾಲಿಟಿಸ್ ಸೋಂಕು, 20 ದಿನ ಜೀವನ್ಮರಣ ಹೋರಾಟದ ಬಳಿಕ ಟ್ರೆಕ್ಕರ್ ಸಾವು
ಬಳಿಕ ಸಂತ್ರಸ್ಥ ಜಾವೇದ್ ತನ್ನ ವಾಹನದ ಬಗ್ಗೆ ಕೇಳಿದಾಗ ಆರೋಪಿಗಳು ಸೇಂಟ್ ಜಾನ್ಸ್ ಸಿಗ್ನಲ್‌ನಿಂದ ಅದನ್ನು ತೆಗೆದುಕೊಳ್ಳುವಂತೆ ಹೇಳಿ ಬಿಟ್ಟು ಕಳುಹಿಸಿದ್ದಾರೆ. ಜಾವೆದ್ ಅಲ್ಲಿಗೆ ಹೋದಾಗ ಆತನ ಕಾರಿನಲ್ಲಿ ದನದ ಮಾಂಸ ಕಾಣೆಯಾಗಿತ್ತು. ಇದರಿಂದ ಅನುಮಾನಗೊಂಡ ಜಾವೇದ್ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದನು. ಎಫ್‌ಐಆರ್ ದಾಖಲಿಸಿದ ನಂತರ ಪೊಲೀಸರು ಶೋಧ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ದನದ ಮಾಂಸದ ಅಂಗಡಿ ಹೊಂದಿರುವ ಆರೋಪಿ ಮಹಮದ್
ಇನ್ನು ತಿಲಕ್ ನಗರದಲ್ಲಿ ದನದ ಮಾಂಸದ ಅಂಗಡಿಯನ್ನು ಹೊಂದಿರುವ ಮೊಹಮ್ಮದ್, ಹಣ ನೀಡದೆ ದನದ ಮಾಂಸವನ್ನು ತೆಗೆದುಕೊಂಡು ಹೋಗಲು ಯೋಜನೆ ರೂಪಿಸಿದ್ದ. ಅದಕ್ಕಾಗಿ ಆತ ಜಾವೆದ್ ಮೇಲೆ ಆರ್ ಎಸ್ ಎಸ್ ಕಾರ್ಯಕರ್ತರ ಸೋಗಿನಲ್ಲಿ ದಾಳಿ ನಡೆಸಿದ್ದ. ಆರ್ ಎಸ್ ಎಸ್ ಕಾರ್ಯಕರ್ತರ ಹೆಸರಿನಲ್ಲಿ ದಾಳಿ ನಡೆಸಿದರೆ ಕೇಸ್ ಆಗುವುದಿಲ್ಲ.. ಜಾವೆದ್ ಕೂಡ ಹೆದರಿಕೆಯಿಂದ ಪೊಲೀಸರ ಮೊರೆ ಹೋಗುವುದಿಲ್ಲ ಎಂದು ಭಾವಿಸಿ ದಾಳಿ ನಡೆಸಿದ್ದ. ಆದರೆ ಪೊಲೀಸರ ಮಧ್ಯ ಪ್ರವೇಶದಿಂದ ಇಡೀ ಪ್ರಕರಣ ಬಯಲಿಗೆ ಬಂದಿದೆ.
ಇದನ್ನೂ ಓದಿ: ಸೆಪ್ಟಂಬರ್ 29 ರವರೆಗೆ ಅಭಿನವ ಹಾಲಶ್ರೀ ಸಿಸಿಬಿ ಕಸ್ಟಡಿಗೆ: ಬೆಂಗಳೂರಿನ 19ನೇ ಎಸಿಎಂಎಂ ನ್ಯಾಯಾಲಯ ಆದೇಶ
ಈ ಪ್ರಕರಣದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಮೊಹಮ್ಮದ್‌ನ ಸೂಚನೆಯಂತೆ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ವಿಚಾರಣೆ ವೇಳೆ ಆರೋಪಿಗಳು ಬಹಿರಂಗಪಡಿಸಿದ್ದಾರೆ. ಅವರು ಇಂತಹ ಪ್ರಕರಣಗಳಲ್ಲಿ ಹಿಂದೆ ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ವಿಚಾರಣೆ ನಡೆಸುತ್ತಿದ್ದಾರೆ.