ಮಂಗಳೂರು: ಸೆ.25 ರಿಂದ ಕಲ್ಲಿದ್ದಲು ಲಾರಿ ಮಾಲೀಕರಿಂದ ಅನಿರ್ದಿಷ್ಟಾವಧಿ ಮುಷ್ಕರ
ನವಮಂಗಳೂರು ಬಂದರಿನಿಂದ(ಎನ್‌ಎಂಪಿ) ರಾಜ್ಯದ ವಿವಿಧ ಭಾಗಗಳಲ್ಲಿರುವ ಉಕ್ಕು, ಸಕ್ಕರೆ ಮತ್ತು ಕಾಗದದ ಉದ್ದಿಮೆಗಳಿಗೆ ಕಲ್ಲಿದ್ದಲು ಸಾಗಿಸುವ ಲಾರಿ ಮಾಲೀಕರು, ಸಾರಿಗೆ ವೆಚ್ಚ ಹೆಚ್ಚಳ ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ...
Published: 21st September 2023 09:09 PM | Last Updated: 21st September 2023 09:09 PM | A+A A-

ಸಾಂದರ್ಭಿಕ ಚಿತ್ರ
ಮಂಗಳೂರು: ನವಮಂಗಳೂರು ಬಂದರಿನಿಂದ(ಎನ್‌ಎಂಪಿ) ರಾಜ್ಯದ ವಿವಿಧ ಭಾಗಗಳಲ್ಲಿರುವ ಉಕ್ಕು, ಸಕ್ಕರೆ ಮತ್ತು ಕಾಗದದ ಉದ್ದಿಮೆಗಳಿಗೆ ಕಲ್ಲಿದ್ದಲು ಸಾಗಿಸುವ ಲಾರಿ ಮಾಲೀಕರು, ಸಾರಿಗೆ ವೆಚ್ಚ ಹೆಚ್ಚಳ ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆಪ್ಟೆಂಬರ್ 25 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ಬಳ್ಳಾರಿ ಮತ್ತು ಕೊಪ್ಪಳದ ಉಕ್ಕು ಉದ್ಯಮಗಳಿಗೆ ಮತ್ತು ಶಿವಮೊಗ್ಗ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸಕ್ಕರೆ ಹಾಗೂ ಕಾಗದದ ಕೈಗಾರಿಕೆಗಳಿಗೆ ಎನ್‌ಎಂಪಿಯಿಂದ ಕಲ್ಲಿದ್ದಲು ಪೂರೈಸುವ 2000 ಟ್ರಕ್‌ಗಳಿವೆ. ಪ್ರತಿದಿನ ಸರಾಸರಿ, 300 ಕಲ್ಲಿದ್ದಲು ತುಂಬಿದ ಟ್ರಕ್‌ಗಳು ಬಂದರಿನಿಂದ ಹೊರಡುತ್ತವೆ.
ಇದನ್ನು ಓದಿ: ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಅನುಪಮ್ ಅಗರ್ವಾಲ್ ನೇಮಕ
ಕಳೆದ ಐದು ವರ್ಷಗಳಲ್ಲಿ ನಮ್ಮ ಕಾರ್ಯಾಚರಣೆಯ ವೆಚ್ಚ ದ್ವಿಗುಣಗೊಂಡಿದೆ, ಕಲ್ಲಿದ್ದಲು ಖರೀದಿದಾರರು ಸಾಗಣೆ ವೆಚ್ಚವನ್ನು ಪ್ರತಿ ಟನ್‌ಗೆ ಕೇವಲ 100-150 ರೂ ಹೆಚ್ಚಿಸಿರುವುದು ಟ್ರಕ್ ಮಾಲೀಕರಿಗೆ ನಷ್ಟವಾಗುತ್ತಿದೆ ಎಂದು ದಕ್ಷಿಣ ಕನ್ನಡ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸುಶಾಂತ್ ಶೆಟ್ಟಿ ಅವರು ಹೇಳಿದ್ದಾರೆ.
"ಕಳೆದ ಐದು ವರ್ಷಗಳಲ್ಲಿ, ಟ್ರಕ್ (14-ಚಕ್ರ) ಬೆಲೆ 30 ಲಕ್ಷದಿಂದ 40 ಲಕ್ಷಕ್ಕೆ ಏರಿಕೆಯಾಗಿದೆ, ಟಯರ್ 16,000 ರಿಂದ 28,000 ರೂ., ರಸ್ತೆ ತೆರಿಗೆ 2,000 ರೂ.ಗೆ ಏರಿದೆ. ಆದರೆ ಇಂಧನ ಮತ್ತು ಬಿಡಿಭಾಗಗಳ ವೆಚ್ಚವು ದ್ವಿಗುಣಗೊಂಡಿದೆ. ಆದರೆ ಕಲ್ಲಿದ್ದಲು ಖರೀದಿದಾರರು ಮಾತ್ರ ಸಾಗಾಣಿಕೆ ವೆಚ್ಚವನ್ನು ಕೇವಲ 100 ರೂಪಾಯಿ ಹೆಚ್ಚಿಸಿದ್ದಾರೆ’’ ಎಂದು ಆರೋಪಿಸಿದರು.
ಕೊಪ್ಪಳಕ್ಕೆ ಪ್ರತಿ ಟನ್ ಕಲ್ಲಿದ್ದಲು ಪೂರೈಕೆಗೆ 1,300 ರೂ. ಮತ್ತು ಬಳ್ಳಾರಿಗೆ 1,400 ರೂ.ಗಳನ್ನು ನಿಗದಿಪಡಿಸುವಂತೆ ಲಾರಿ ಮಾಲೀಕರ ಸಂಘ ಸರ್ಕಾರಕ್ಕೆ ಒತ್ತಾಯಿಸಿದೆ. ಹದಿನೈದು ದಿನಗಳ ಹಿಂದೆ ಸಂಘವು ತಮ್ಮ ಕುಂದುಕೊರತೆಗಳನ್ನು ಪರಿಹರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಆದರೆ ಯಾವುದೇ ಸ್ಪಂದನೆ ಸಿಗದ ಕಾರಣ ಲಾರಿ ಮಾಲೀಕರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.