ಬೆಂಗಳೂರು: ವಿಲ್ಸನ್ ಗಾರ್ಡನ್‌ನಲ್ಲಿ ಮರ ಬಿದ್ದು ತಾಯಿ ಸಾವು, ಮಗು ಸ್ಥಿತಿ ಗಂಭೀರ
ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ಸೋಮವಾರ ರಾತ್ರಿ ಮಳೆಗೆ ಮರದ ಕೊಂಬೆ ಹಾಗೂ ವಿದ್ಯುತ್ ಕಂಬ ಬಿದ್ದು 37 ವರ್ಷದ ಮಹಿಳೆ ಮೃತಪಟ್ಟಿದ್ದಾರೆ ಮತ್ತು ಅವರ ಆರು ವರ್ಷದ ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
Published: 26th September 2023 06:58 PM | Last Updated: 27th September 2023 08:54 PM | A+A A-

ಮರದ ಕೊಂಬೆ ಹಾಗೂ ವಿದ್ಯುತ್ ಕಂಬ ಬಿದ್ದ ಸ್ಥಳ
ಬೆಂಗಳೂರು: ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ಸೋಮವಾರ ರಾತ್ರಿ ಮಳೆಗೆ ಮರದ ಕೊಂಬೆ ಹಾಗೂ ವಿದ್ಯುತ್ ಕಂಬ ಬಿದ್ದು 37 ವರ್ಷದ ಮಹಿಳೆ ಮೃತಪಟ್ಟಿದ್ದಾರೆ ಮತ್ತು ಅವರ ಆರು ವರ್ಷದ ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ಮಹಿಳೆಯನ್ನು ಹೇಮಾವತಿ ಹರ್ಷ ಎಂದು ಗುರುತಿಸಲಾಗಿದ್ದು, ಮಹಿಳೆ ತನ್ನ ಮನೆ ಬಳಿಯೇ ಮಗಳು ರುಚಿತಾಳಿಗೆ ಊಟ ಮಾಡಿಸುತ್ತಿದ್ದ ವೇಳೆಯೇ ಮರ ಮುರಿದು ಬಿದ್ದಿದೆ. ಈ ವೇಳೆ ತಾಯಿ ಮತ್ತು ಮಗು ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ತಾಯಿ, ಮಗು ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ತಾಯಿ ಮೃತಪಟ್ಟಿದ್ದಾರೆ. ಇದೀಗ ಗಂಭೀರವಾಗಿ ಗಾಯಗೊಂಡ ಬಾಲಕಿಗೆ ಚಿಕಿತ್ಸೆ ಮುಂದುವರೆದಿದೆ.
ಇದನ್ನು ಓದಿ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ 6 ಕಾರುಗಳು ಮಧ್ಯೆ ಭೀಕರ ಅಪಘಾತ: ಸ್ಥಳದಲ್ಲೇ ಮೂವರ ದುರ್ಮರಣ
ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಲ್ಸನ್ ಗಾರ್ಡನ್ ರೆಸಿಡೆಂಟ್ ವೆಲ್ ಫೇರ್ ಅಸೋಸಿಯೇಶನ್ ನ ಉಪಾಧ್ಯಕ್ಷ ಎಂಝಡ್ ಅಲಿ ಪ್ರಕಾರ, ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಬೃಹತ್ ಮರವೊಂದು ಬುಡ ಸಮೇತ ಕಿತ್ತು ಬಿದ್ದಿರುವ ಘಟನೆ ನಡೆದಿದೆ. ಮರದಿಂದಾಗಿ ಒಂದಲ್ಲ ಮೂರು ವಿದ್ಯುತ್ ಕಂಬಗಳು ಬಿದ್ದಿದ್ದು, ಒಂದು ಕಂಬ ತಲೆಗೆ ಬಡಿದು ಮಹಿಳೆ ಸಾವನ್ನಪ್ಪಿದ್ದಾರೆ.
ಬಿಬಿಎಂಪಿ ಅರಣ್ಯ ಕೋಶ ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ನಿಗಮದ (ಬೆಸ್ಕಾಂ) ಅಧಿಕಾರಿಗಳು ಸೋಮವಾರ ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಮರವನ್ನು ತೆರವುಗೊಳಿಸಿದರು. ಮಂಗಳವಾರ ಬೆಳಗ್ಗೆ ಬಿಬಿಎಂಪಿ ಹಣಕಾಸು ಮತ್ತು ಬೆಂಗಳೂರು ದಕ್ಷಿಣ ವಲಯದ ವಿಶೇಷ ಆಯುಕ್ತ ಶಿವಾನಂದ ಕಲ್ಕೆರೆ ಅವರು ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ವರದಿ ಕೇಳಿದ್ದಾರೆ.
ಸುತ್ತಮುತ್ತಲಿನ ಎಲ್ಲಾ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಮತ್ತು ಹೊಸ ಮರದ ಸಸಿಗಳನ್ನು ನೆಡಲು ನಾವು ಬಿಬಿಎಂಪಿಗೆ ಸೂಚಿಸಿದ್ದೇವೆ ಎಂದು ಅಲಿ ಹೇಳಿದ್ದಾರೆ.