ಕಾವೇರಿ ನೀರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಸದಾ ಬಿಜೆಪಿ ಬೆಂಬಲವಿರುತ್ತದೆ: ಬಸವರಾಜ ಬೊಮ್ಮಾಯಿ
ಕಾವೇರಿ ನೀರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದ್ದಾರೆ. ಈಗಾಗಲೇ ತಮಿಳುನಾಡಿಗೆ ಹೆಚ್ಚಿನ ನೀರನ್ನು ಹರಿಸಲಾಗಿದ್ದು, ಕಾವೇರಿ ಜಲವಿವಾದ ನ್ಯಾಯಮಂಡಳಿಯ ಆದೇಶವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು ಅವರು ಹೇಳಿದರು.
Published: 28th September 2023 04:56 PM | Last Updated: 28th September 2023 04:56 PM | A+A A-

ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ: ಕಾವೇರಿ ನೀರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ಹೊರಡಿಸಲಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (ಸಿಡಬ್ಲ್ಯುಎಂಎ) ಈ ಹಿಂದೆ ತಮಿಳುನಾಡಿಗೆ ಪ್ರತಿನಿತ್ಯ 10,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿದಾಗಲೇ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪರಿಣಾಮಕಾರಿಯಾಗಿ ವಾದ ಮಂಡಿಸಿದ್ದರೆ, ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅವರು ಹೇಳಿದರು.
ಈಗಾಗಲೇ ತಮಿಳುನಾಡಿಗೆ ಹೆಚ್ಚಿನ ನೀರನ್ನು ಹರಿಸಲಾಗಿದ್ದು, ಕಾವೇರಿ ಜಲವಿವಾದ ನ್ಯಾಯಮಂಡಳಿಯ ಆದೇಶವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು ಅವರು ಹೇಳಿದರು.
ಕುಡಿಯುವ ನೀರಿಗಾಗಿ ಸರ್ಕಾರ ಇತ್ತ ಗಮನಹರಿಸಬೇಕು ಎಂಬ ಕೂಗು ಎದ್ದಿದ್ದು, ಉತ್ತರ ಕರ್ನಾಟಕದ ಬಹುತೇಕ ಪ್ರದೇಶಗಳು ಬರದಿಂದ ತತ್ತರಿಸಿವೆ. ಮಳೆಯ ಅಭಾವದಿಂದ ಖಾರಿಫ್ ಬೆಳೆಯನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ ಎಂದು ದೂರಿದರು.
ಇದನ್ನೂ ಓದಿ: ನಾಳೆ ಕರ್ನಾಟಕ ಬಂದ್: ಇಂದು ಮಧ್ಯರಾತ್ರಿಯಿಂದಲೇ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ!
‘ಇಲ್ಲಿಯವರೆಗೆ ಸರ್ಕಾರ ಅವರಿಗೆ ಪರಿಹಾರ ವಿತರಿಸಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರವಾಹ ಬಂದಾಗ ರೈತರಿಗೆ ಎರಡು ಪಟ್ಟು ಪರಿಹಾರ ನೀಡಿದ್ದೇವೆ. ಬಹುತೇಕ ಸಂದರ್ಭಗಳಲ್ಲಿ ರಾಜ್ಯದ ರೈತರಿಗೆ ನಾವು ಪರಿಹಾರ ಒದಗಿಸಿದ್ದೇವೆ. ಆದರೆ, ರಾಜ್ಯ ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ. ಕಾವೇರಿ ನದಿ ಅಷ್ಟೇ ಅಲ್ಲ ಕೃಷ್ಣೆಯ ಹಿತರಕ್ಷಣೆಗೂ ಸರ್ಕಾರ ಮುಂದಾಗಬೇಕು. ಕೃಷ್ಣಾ ನೀರಿನ ವಿಚಾರದಲ್ಲಿ ಬಿಜೆಪಿ ಸ್ಪಷ್ಟ ನಿಲುವು ಹೊಂದಿದೆ' ಎಂದು ಬೊಮ್ಮಾಯಿ ಹೇಳಿದರು.
ಬಿಜೆಪಿಯ ಮಾಜಿ ಶಾಸಕರನ್ನು ಕಾಂಗ್ರೆಸ್ ಸೆಳೆಯುತ್ತಿರುವ ವಿಚಾರವಾಗಿ ಮಾತನಾಡಿದ ಅವರು, 'ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ವರ್ಚಸ್ಸನ್ನು ಕಳೆದುಕೊಂಡಿದೆ. ಹೀಗಾಗಿ ಕಾಂಗ್ರೆಸ್ ಮತ್ತೆ ಆಪರೇಷನ್‌ಗೆ ಮುಂದಾಗಿದೆ. ಇದು ಅದರ ದೌರ್ಬಲ್ಯವನ್ನು ಸೂಚಿಸುತ್ತದೆ. ಟಿಕೆಟ್ ಸಿಗದ ಕೆಲವರು ಕಾಂಗ್ರೆಸ್‌ಗೆ ಹೋಗಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಯಾವುದೇ ಲಾಭವಾಗುವುದಿಲ್ಲ. ಟಿಕೆಟ್ ಸಿಗದವರು ಹೋಗುವುದು ಸಹಜ. ಅದರ ಬಗ್ಗೆ ನಾವು ಹೆಚ್ಚು ಚಿಂತಿಸುವುದಿಲ್ಲ. ಕಾಂಗ್ರೆಸ್‌ನ ಆಪರೇಶನ್‌ನಿಂದ ರಾಜಕೀಯವಾಗಿ ಯಾವುದೇ ಪ್ರಯೋಜನವಿಲ್ಲ' ಎಂದರು.