ಬೆಂಗಳೂರು ಬಂದ್‌ನಿಂದಾಗಿ ಅಂದಾಜು 1,500 ರಿಂದ 2,000 ಕೋಟಿ ರೂ. ನಷ್ಟ; ಕರ್ನಾಟಕ ಬಂದ್‌ಗೆ ಅನುಮತಿಯಿಲ್ಲ- ಪರಮೇಶ್ವರ
ಸೆಪ್ಟೆಂಬರ್ 29ರಂದು ಪ್ರತಿಭಟನೆಗೆ ಮಾತ್ರ ಅವಕಾಶವಿದೆ. ಯಾರಾದರೂ ಬಂದ್ ಆಚರಿಸುವಂತೆ ಬಲವಂತ ಮಾಡಿದರೆ, ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಗುರುವಾರ ಹೇಳಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
Published: 28th September 2023 03:26 PM | Last Updated: 28th September 2023 03:26 PM | A+A A-

ಜಿ ಪರಮೇಶ್ವರ
ಬೆಂಗಳೂರು: ಸೆಪ್ಟೆಂಬರ್ 29ರಂದು ಪ್ರತಿಭಟನೆಗೆ ಮಾತ್ರ ಅವಕಾಶವಿದೆ. ಯಾರಾದರೂ ಬಂದ್ ಆಚರಿಸುವಂತೆ ಬಲವಂತ ಮಾಡಿದರೆ, ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಗುರುವಾರ ಹೇಳಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ, ಬಂದ್‌ಗೆ ಕರೆ ನೀಡಿರುವ ಸಂಘಟನೆಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ನ್ಯಾಯಾಲಯದ ನಿರ್ದೇಶನದಂತೆ ಬಂದ್ ಆಚರಿಸುವಂತಿಲ್ಲ. ಅಂತಹ ಯಾವುದೇ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎಂದು ಮೊನ್ನೆ ಬೆಂಗಳೂರು ಬಂದ್ ವೇಳೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ. ಇದನ್ನು ಧಿಕ್ಕರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿಭಟನೆ ಮಾತ್ರ ನಡೆಸಬಹುದು. ಆದರೆ, ಬಂದ್‌ಗೆ ಅವಕಾಶ ನೀಡುವುದಿಲ್ಲ. ಪೊಲೀಸರಿಗೆ ವಿಶೇಷ ಸೂಚನೆ ನೀಡುವ ಅಗತ್ಯವಿಲ್ಲ, ಏನು ಮಾಡಬೇಕೆಂದು ಅವರಿಗೆ ತಿಳಿದಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ನಾಳೆ ಕರ್ನಾಟಕ ಬಂದ್: ಜನಜೀವನ ಮೇಲೆ ಪರಿಣಾಮ ಸಾಧ್ಯತೆ; ಯಾವ ಸೇವೆ ಲಭ್ಯ, ಯಾವುದು ಅಲಭ್ಯ?
ಸೆಪ್ಟೆಂಬರ್ 26 ರಂದು ಬೆಂಗಳೂರು ಬಂದ್‌ನಿಂದಾಗಿ ಅಂದಾಜು 1,500 ರಿಂದ 2,000 ಕೋಟಿ ರೂಪಾಯಿ ನಷ್ಟವಾಗಿದೆ. ಈ ಮಧ್ಯೆ, ಇನ್ನೊಂದು ಬಾರಿ ಬಂದ್ ಆಚರಿಸಿದರೆ, ಅದು ಆರ್ಥಿಕತೆಯ ದೃಷ್ಟಿಯಿಂದ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತದೆ. ಇದನ್ನು ಸಂಘ ಸಂಸ್ಥೆಗಳು ಅರಿಯಬೇಕು. ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು, ಪ್ರತಿಭಟನೆ ನಡೆಸಲಿ. ಆದರೆ, ಬಂದ್ ಮಾಡಲು ಯತ್ನಿಸಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡಬೇಕು
ಕಾನೂನು ಚೌಕಟ್ಟಿನಲ್ಲಿ ನಡೆಸುವ ಪ್ರತಿಭಟನೆಗೆ ಅವಕಾಶ ನೀಡಲಾಗುವುದು. ತಮಿಳುನಾಡು ಸರ್ಕಾರದೊಂದಿಗೆ ಯಾವುದೇ ರಾಜಿ ಇಲ್ಲ. ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಬಿಜೆಪಿ ಮತ್ತು ಜೆಡಿಎಸ್ ಇತ್ತೀಚೆಗೆ ಮೈತ್ರಿ ಮಾಡಿಕೊಂಡಿವೆ. ಸರ್ಕಾರವನ್ನು ದೂಷಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಪ್ರತಿಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.
ಇದನ್ನೂ ಓದಿ: ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ಸುಗಳು ನಾಳೆ ಎಂದಿನಂತೆ ಸಂಚಾರ: ನೌಕರರಿಗೆ ಕಡ್ಡಾಯ ಹಾಜರಾತಿಗೆ ನಿಗಮ ಸೂಚನೆ
ಈಮಧ್ಯೆ, ಶುಕ್ರವಾರ ಬಲವಂತದ ಬಂದ್ ಮಾಡಬಾರದು ಎಂದು ಕರ್ನಾಟಕದ ಡಿಜಿಪಿ ಮತ್ತು ಐಜಿ ಅಲೋಕ್ ಮೋಹನ್ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರಿಗೆ ತೊಂದರೆಯಾದರೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಎಲ್ಲಾ ಎಸ್ಪಿಗಳು ಮತ್ತು ಡಿಸಿಪಿಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ. ಪ್ರತಿಭಟನಾಕಾರರು ಅಂಗಡಿ ಮುಂಗಟ್ಟು ಬಂದ್ ಮಾಡಲು ಮುಂದಾದರೆ, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.