ಸೆ.29 ಅಖಂಡ ಕರ್ನಾಟಕ ಬಂದ್: ಹಲವು ಸಂಘಟನೆಗಳು, ವೇದಿಕೆಗಳಿಂದ ಬೆಂಬಲ, ಬಂದ್ ರೂಪುರೇಷೆ ಬಗ್ಗೆ ಇಂದು ನಿರ್ಣಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಮಂಗಳವಾರದ ಬೆಂಗಳೂರು ಬಂದ್‌ನ ನಂತರ ಕನ್ನಡ ಪರ ಸಂಘಟನೆಗಳು ನಾಳೆ ಶುಕ್ರವಾರ ಇನ್ನಷ್ಟು ತೀವ್ರವಾಗಿ ಅಖಂಡ ಕರ್ನಾಟಕ ಬಂದ್‌ಗೆ ಸಿದ್ಧತೆ ನಡೆಸಿವೆ.
Published: 28th September 2023 08:20 AM | Last Updated: 28th September 2023 01:43 PM | A+A A-

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಬೆಂಗಳೂರಿನಲ್ಲಿ ಬುಧವಾರ ನಡೆದ ಪ್ರತಿಭಟನೆ ವೇಳೆ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಕರೆದೊಯ್ಯುತ್ತಿರುವುದು
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಮಂಗಳವಾರದ ಬೆಂಗಳೂರು ಬಂದ್‌ನ ನಂತರ ಕನ್ನಡ ಪರ ಸಂಘಟನೆಗಳು ನಾಳೆ ಶುಕ್ರವಾರ ಇನ್ನಷ್ಟು ತೀವ್ರವಾಗಿ ಅಖಂಡ ಕರ್ನಾಟಕ ಬಂದ್‌ಗೆ ಸಿದ್ಧತೆ ನಡೆಸಿವೆ. ಕರ್ನಾಟಕದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು, ರೈಲು ಸಂಚಾರಕ್ಕೆ ಅಡ್ಡಿಪಡಿಸಲು ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಚಳವಳಿಗಾರರು ಯೋಜಿಸಿದ್ದಾರೆ.
ಬಂದ್‌ಗೆ ಕರೆ ನೀಡಿರುವ ಕನ್ನಡ ಒಕ್ಕೂಟದ ವಿವಿಧ ಮುಖಂಡರು ನಿನ್ನೆ ಬುಧವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಬಂದ್‌ಗೆ ಬೆಂಬಲ ಕೋರಿದರು. ಕೆಎಫ್‌ಸಿಸಿ ಅಧ್ಯಕ್ಷ ಎನ್‌ಎಂ ಸುರೇಶ್ ಬಂದ್‌ಗೆ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದಾರೆ ಮತ್ತು ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಾದ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು, ಚಲನಚಿತ್ರಗಳ ಪ್ರದರ್ಶನ ಇತ್ಯಾದಿಗಳನ್ನು ನಾಳೆ ನಿಲ್ಲಿಸಲಾಗುವುದು ಎಂದು ಹೇಳಿದರು. ಬಂದ್ ಅಂಗವಾಗಿ ಹಮ್ಮಿಕೊಂಡಿರುವ ರ್ಯಾಲಿಯಲ್ಲಿ ಸ್ಟಾರ್ ನಟರು ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
#WATCH | Karnataka: Farmers staged protest near the Cauvery River in Mandya, opposing the state government for releasing water pic.twitter.com/tothffktdT
— ANI (@ANI) September 28, 2023
ಕ್ಯಾಬ್ ಮತ್ತು ಆಟೋರಿಕ್ಷಾ ಚಾಲಕರ ಸಂಘಗಳು ಸಹ ಬಂದ್‌ಗೆ ಬೆಂಬಲ ನೀಡಿವೆ, ಆದರೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಘವು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ ಇಂದು ಸಂಜೆಯೊಳಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಬಗ್ಗೆ ನಿರ್ಧರಿಸುವ ಸಾಧ್ಯತೆ ಇದೆ. ಉದ್ಯಮ ಸಂಸ್ಥೆಗಳು ಮತ್ತು ಹೋಟೆಲ್ ಸಂಘಗಳು ಇನ್ನೂ ಬಂದ್ ಕರೆ ಬಗ್ಗೆ ನಿರ್ಧರಿಸಿಲ್ಲ.
ಇದನ್ನೂ ಓದಿ: ಕಾವೇರಿ, ಮಹಾದಾಯಿ ಪ್ರಕರಣ: ವಕೀಲರಿಗೆ ರೂ.122 ಕೋಟಿಗೂ ಹೆಚ್ಚು ವ್ಯಯಿಸಿದ ರಾಜ್ಯ ಸರ್ಕಾರ!
ಬಂದ್‌ಗೆ ಬೆಂಬಲ ಕೋರಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರು ತೆರೆದ ವಾಹನದಲ್ಲಿ ಮಲ್ಲೇಶ್ವರಂ ಮತ್ತಿತರ ಬಡಾವಣೆಗಳಲ್ಲಿ ಸಂಚರಿಸಿ ಕರ್ನಾಟಕ ಬಂದ್‌ಗೆ ಬೆಂಬಲ ನೀಡುವಂತೆ ವ್ಯಾಪಾರಿಗಳಿಗೆ ಮನವಿ ಮಾಡಿದರು. 1,900 ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದ್ದು, ಕರ್ನಾಟಕದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಬಂಧಿಸಲಾಗುವುದು ಎಂದು ಹೇಳಿದರು.
ನಾವು ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳನ್ನು ಮುಚ್ಚುತ್ತೇವೆ, ರೈಲುಗಳನ್ನು ನಿಲ್ಲಿಸುತ್ತೇವೆ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕುತ್ತೇವೆ. ಮಾಲ್ ಅಥವಾ ಚಿತ್ರಮಂದಿರಗಳು ಇರುವುದಿಲ್ಲ. ಶಾಂತಿಯುತವಾಗಿ ಪ್ರತಿಭಟಿಸುತ್ತೇವೆ ಮತ್ತು ಬಂದ್‌ನಿಂದ ಯಾವುದೇ ವೈದ್ಯಕೀಯ ಸೇವೆಗಳಿಗೆ ತೊಂದರೆಯಾಗುವುದಿಲ್ಲ ಎಂದು ಅವರು ಹೇಳಿದರು.
ನಾಳೆ ರ್ಯಾಲಿ: ನಾಳೆ ಬೆಳಗ್ಗೆ 10.30ಕ್ಕೆ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ರ್ಯಾಲಿ ನಡೆಸಲು ಉದ್ದೇಶಿಸಲಾಗಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು. ಕಾವೇರಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮೌನ ವಹಿಸಿದ್ದಾರೆ ಎಂದು ಟೀಕಿಸಿದ ಅವರು, ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಸೆ. 29ರಂದು ಮೈಸೂರು ರಸ್ತೆ - ಕೆಂಗೇರಿ ನಡುವೆ ರೈಲು ಸೇವೆ ಇರಲ್ಲ
ಗೃಹ ಸಚಿವರು ಏನೆಂದರು?: ಇದೇ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ, ಬಂದ್‌ಗಳು ಯಾವುದೇ ಸಮಸ್ಯೆಗೆ ಪರಿಹಾರವಲ್ಲವಾದರೂ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಜನರಿಗೆ ಇದೆ. ಬಂದ್ ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದ ಅವರು, ರಾಜ್ಯಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗುವುದು ಎಂದು ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಹೇಳಿದ್ದಾರೆ. ಅತ್ತಿಬೆಲೆ ಬಳಿ ಕರ್ನಾಟಕ-ತಮಿಳು ನಾಡು ಗಡಿಯಲ್ಲಿ ಹೆದ್ದಾರಿ ತಡೆ ನಡೆಸಲು ಯತ್ನಿಸಿದ ಸುಮಾರು 50 ಪ್ರತಿಭಟನಾಕಾರರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಪರೀಕ್ಷೆ ಮುಂದೂಡಿಕೆ: ಬಂದ್‌ನಿಂದಾಗಿ ಬೆಂಗಳೂರು ವಿಶ್ವವಿದ್ಯಾಲಯ ನಾಳೆ ನಡೆಯಬೇಕಿದ್ದ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ಪದವಿ ಪರೀಕ್ಷೆಗಳನ್ನು ಶನಿವಾರಕ್ಕೆ ಮುಂದೂಡಿದೆ. ಅದೇ ರೀತಿ, ತುಮಕೂರು ವಿಶ್ವವಿದ್ಯಾಲಯವು ಯುಜಿ ಕೋರ್ಸ್‌ಗಳ ಮೊದಲ ಸೆಮಿಸ್ಟರ್‌ನ ಪೂರಕ ಪರೀಕ್ಷೆಗಳನ್ನು ಅಕ್ಟೋಬರ್ 18 ಕ್ಕೆ ಮತ್ತು ಪಿಜಿ ಕೋರ್ಸ್‌ಗಳ (ಸಿಬಿಸಿಎಸ್-ಇಎಂಎಸ್ ಮತ್ತು ಯುಯುಸಿಎಂಎಸ್) ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು ಅಕ್ಟೋಬರ್ 12 ಕ್ಕೆ ಮುಂದೂಡಿದೆ.