ಕರ್ನಾಟಕ ಬಂದ್: ಬಂಧಿತರನ್ನು ಬಿಡುಗಡೆ ಮಾಡಿ; ಈ ಒಗ್ಗಟ್ಟು ನೆರೆ ರಾಜ್ಯಕ್ಕೆ ಎಚ್ಚರಿಕೆ ಗಂಟೆಯಾಗಬೇಕು- ಎಚ್‌ಡಿ ಕುಮಾರಸ್ವಾಮಿ

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ನಡೆಸುತ್ತಿರುವ ಕರ್ನಾಟಕ ಬಂದ್ ವೇಳೆ ಬಂಧಿತರಾಗಿರುವ ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಶುಕ್ರವಾರ ಒತ್ತಾಯಿಸಿದ್ದಾರೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ
Updated on

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ನಡೆಸುತ್ತಿರುವ ಕರ್ನಾಟಕ ಬಂದ್ ವೇಳೆ ಬಂಧಿತರಾಗಿರುವ ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಶುಕ್ರವಾರ ಒತ್ತಾಯಿಸಿದ್ದಾರೆ.

ನೆರೆಯ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಕನ್ನಡ ಮತ್ತು ರೈತಪರ ಸಂಘಟನೆಗಳ ‘ಕನ್ನಡ ಒಕ್ಕೂಟ’ ಇಂದಿನ ಕರ್ನಾಟಕ ಬಂದ್‌ಗೆ ಕರೆ ನೀಡಿದೆ.

ಕಾವೇರಿ ವಿಚಾರವಾಗಿ ರಾಜ್ಯದ ದಕ್ಷಿಣ ಭಾಗಗಳಲ್ಲಿ ರೈತರು ಮತ್ತು ಕನ್ನಡ ಪರ ಸಂಘಟನೆಗಳು ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದು, ಕುಮಾರಸ್ವಾಮಿ, 'ಕನ್ನಡ ಕುಟುಂಬ'ದ ಒಗ್ಗಟ್ಟು ಜಾಗೃತವಾಗಬೇಕು. ಇದು ನೆರೆಯ ರಾಜ್ಯಕ್ಕೆ ಎಚ್ಚರಿಕೆಯ ಗಂಟೆಯಾಗಬೇಕು ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಕಾವೇರಿ ಹೋರಾಟಕ್ಕೆ ಇಡೀ ಕರುನಾಡು ಮಿಡಿದಿದೆ. ಇಂದಿನ ಬಂದ್‌ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಡು, ನುಡಿ, ನೆಲ, ಜಲದ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು. ಕನ್ನಡ ಕುಟುಂಬದಲ್ಲಿ ಹಾಸುಹೊಕ್ಕಾಗಿರುವ ಈ ಸಾಮರಸ್ಯ, ಐಕ್ಯತೆ ನೆರೆ ರಾಜ್ಯಗಳಿಗೆ ಎಚ್ಚರಿಕೆ ಗಂಟೆ ಆಗಬೇಕು' ಎಂದಿದ್ದಾರೆ. 

ಮುಂದುವರಿದು ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಕನ್ನಡ ಭಾವನೆಗಳನ್ನು ದಮನ ಮಾಡಬಾರದು. ಈಗಾಗಲೇ ವಶಕ್ಕೆ ಪಡೆದಿರುವ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com