
ಬೆಂಗಳೂರು: ನಗರದ ಅಪಾರ್ಟ್‌ಮೆಂಟ್‌ವೊಂದರ ಕಾರಿಡಾರ್‌ನಲ್ಲಿ ಸುಮಾರು ಎಂಟು ತಿಂಗಳ ಕಾಲ ಶೂ ರ‍್ಯಾಕ್ ಇಟ್ಟಿದ್ದ ವ್ಯಕ್ತಿಗೆ ಅಲ್ಲಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು 24 ಸಾವಿರ ರೂ. ದಂಡ ವಿಧಿಸಿದೆ.
ಎಲೆಕ್ಟ್ರಾನಿಕ್ ಸಿಟಿಯ ಒಂದನೇ ಹಂತದ ಪ್ರೆಸ್ಟೀಜ್ ಸನ್‌ರೈಸ್ ಪಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿಈ ಘಟನೆ ನಡೆದಿದೆ. ಅಲ್ಲದೆ, ಯಾವುದೇ ನಿವಾಸಿಯು ತಮ್ಮ ಜಾಗ ಹೊರತುಪಡಿಸಿ ಅಪಾರ್ಟ್‌ಮೆಂಟ್‌ನ ಕಾಮನ್ ಏರಿಯಾದ ಕಾರಿಡಾರ್‌ಗಳಲ್ಲಿ ಶೂ ರ‍್ಯಾಕ್ ಸೇರಿದಂತೆ ಯಾವುದೇ ವಸ್ತುಗಳನ್ನು ಇಟ್ಟರೆ, ಅಂಥವರಿಗೆ ದಿನಕ್ಕೆ 100 ರೂ. ದಂಡ ವಿಧಿಸುವ ಪರಿಪಾಠವನ್ನು ಅನುಸರಿಸಲಾಗುತ್ತಿದೆ. ಇದೀಗ ಆ ದಂಡದ ಮೊತ್ತವನ್ನು 200 ರೂ.ಗಳಿಗೆ ಹೆಚ್ಚಳ ಮಾಡುವ ಬಗ್ಗೆಯೂ ಸಂಘವು ಚಿಂತನೆ ನಡೆಸಿದೆ.
ಈ ವಸತಿ ಸಂಕೀರ್ಣದಲ್ಲಿ1046 ಫ್ಲ್ಯಾಟ್‌ಗಳಿದ್ದು, ಶೇ 50ಕ್ಕೂ ಅಧಿಕ ನಿವಾಸಿಗಳು ತಮ್ಮ ಮನೆಯ ಶೂ ರ್ಯಾಕ್, ಪಾಟ್‌ಗಳು ಹಾಗೂ ಇನ್ನಿತರ ಬೇಡವಾದ ವಸ್ತುಗಳನ್ನು ಕಾಮನ್ ಏರಿಯಾಗಳಲ್ಲಿ ಇಡುತ್ತಿರುವುದು ಕಂಡುಬಂದಿತ್ತು.
ಅಗ್ನಿಶಾಮಕ ನಿಯಮಗಳ ಪ್ರಕಾರ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ತುರ್ತು ಸಂದರ್ಭಗಳಲ್ಲಿ ಕಾರ್ಯಾಚರಣೆಗಳನ್ನು ನಡೆಸಲು ಕಾರಿಡಾರ್‌ಗಳು ಮುಕ್ತವಾಗಿರಬೇಕು. ಯಾವುದೇ ಅಡೆತಡೆ ಇರಬಾರದೆಂಬ ನಿಯಮವಿದೆ. ಆದರೆ ಅದನ್ನು ನಿವಾಸಿಗಳು ಪಾಲನೆ ಮಾಡುತ್ತಿರಲಿಲ್ಲ. ಹಾಗಾಗಿ ನಿಯಮಾವಳಿಗೆ ವಿರುದ್ಧವಾಗಿದ್ದ ಶೂ ರ್ಯಾಕ್, ಪಾಟ್‌ಗಳು ಸೇರಿದಂತೆ ಎಲ್ಲಾ ವಸ್ತುಗಳನ್ನು ತೆಗೆಯುವಂತೆ ಸಂಘವು ಎಲ್ಲ ನಿವಾಸಿಗಳನ್ನು ಹಲವು ಬಾರಿ ಸಂಪರ್ಕ ಮಾಡಿ ಮನವಿ ಮಾಡಿತ್ತು.
ಸುಮಾರು ಅರ್ಧದಷ್ಟು ನಿವಾಸಿಗಳು ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ತಮ್ಮ ಫ್ಲಾಟ್‌ಗಳ ಹೊರಗೆ ವಸ್ತುಗಳನ್ನು ಇರಿಸಿದ್ದಾರೆ ಎಂದು ಕಂಡುಬಂತು. ಅವರಿಗೆಲ್ಲಾ ನೋಟಿಸ್ ನೀಡಲಾಯಿತು. ನಂತರ ಸಂಭಾಷಣೆಗಳು ನಡೆದವು. ಎರಡು ತಿಂಗಳ ಗಡುವನ್ನು ನಿಗದಿಪಡಿಸಲಾಯಿತು. ಮೊದಲಿಗೆ ವಿರೋಧ ಕಂಡು ಬಂದರೂ ನಿಧಾನವಾಗಿ, ನಾಲ್ಕು ವಾರಗಳಲ್ಲಿ ಒಂದೊಂದಾಗಿ, ಎಲ್ಲರೂ ಪಾಲಿಸಿದರು.
ಜತೆಗೆ ಎಲ್ಲಾ ನಿವಾಸಿಗಳಿಗೆ ಕಾರಿಡಾರ್‌ಗಳಲ್ಲಿ ಇಟ್ಟಿರುವ ತಮ್ಮ ವಸ್ತುಗಳನ್ನು ತೆಗೆದುಕೊಳ್ಳಲು ಎರಡು ತಿಂಗಳು ಕಾಲಾವಕಾಶವನ್ನೂ ನೀಡಲಾಗಿತ್ತು. ಆರಂಭದಲ್ಲಿ ಕೆಲ ನಿವಾಸಿಗಳು ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ನಂತರ ಸಂಘದ ಸತತ ನೋಟಿಸ್‌ಗೆ ಹೆದರಿ, ತಮ್ಮ ಶೂ ರ‍್ಯಾಕ್ ಹಾಗೂ ಮತ್ತಿತರ ವಸ್ತುಗಳನ್ನು ಕಾಮನ್ ಏರಿಯಾದ ಕಾರಿಡಾರ್‌ಗಳಿಂದ ತೆಗೆದು ತಮ್ಮ ಸ್ವಂತ ಜಾಗದಲ್ಲಿಟ್ಟುಕೊಂಡಿದ್ದರು.
ಆದರೆ, ಒಬ್ಬ ನಿವಾಸಿ ಮಾತ್ರ ತೀವ್ರ ಪ್ರತಿರೋಧವೊಡ್ಡಿ, ಕಾರಿಡಾರ್‌ನಲ್ಲಿದ್ದ ಶೂ ರ‍್ಯಾಕ್ ತೆಗೆದಿರಲಿಲ್ಲ. ಆಗ ಸಂಘವು ದಿನಕ್ಕೆ 100 ರೂ.ನಂತೆ ದಂಡ ಪಾವತಿಸುವಂತೆ ಆ ನಿವಾಸಿಗೆ ನೋಟಿಸ್ ನೀಡಿತ್ತು. ಅದಕ್ಕೆ ಆ ನಿವಾಸಿ ಮೊದಲಿಗೆ 15 ಸಾವಿರ ರೂ.ಗಳನ್ನು ಸಂಘಕ್ಕೆ ಪಾವತಿಸಿ ಈವರೆಗಿನ ಉಲ್ಲಂಘನೆಗೆ ಹಾಗೂ ಭವಿಷ್ಯದ ಉಲ್ಲಂಘನೆಗೆ ಸೇರಿಸಿ ದಂಡ ಕಟ್ಟಿರುವುದಾಗಿ ಹೇಳಿದ್ದರು.
ಬಳಿಕವೂ ನಿಯಮ ಉಲ್ಲಂಘನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಈವರೆಗೆ ಆ ನಿವಾಸಿ 24 ಸಾವಿರ ರೂ.ದಂಡ ಕಟ್ಟಿದ್ದಾರೆ. ದಂಡದ ಪ್ರಮಾಣ ಹೆಚ್ಚುತ್ತಿದ್ದರೂ ಅವರು ಕಾರಿಡಾರ್‌ನಲ್ಲಿನ ಶೂ ರಾಕ್ ತೆಗೆದಿಲ್ಲಎಂದು ತಿಳಿದು ಬಂದಿದೆ.
Advertisement