ನಗರದ ಶೇ.70ರಷ್ಟು ‌ಪ್ರದೇಶಗಳ ಮಳೆ ಸಮಸ್ಯೆ ‌ನಿವಾರಣೆ; ಕುಮಾರಸ್ವಾಮಿ- ಬಿಜೆಪಿಯವರು ‌ಹತಾಶೆಯ ಮನುಷ್ಯರು: ಡಿ.ಕೆ ಶಿವಕುಮಾರ್

"ನಾವು ಇಷ್ಟೊಂದು ಸಾಧನೆ ಮಾಡಿದ್ದೇವೆ. ಅವರಿಗೆ ಏನನ್ನೂ ಹೇಳಿಕೊಳ್ಳಲು ಆಗುತ್ತಿಲ್ಲವಲ್ಲ. ಜೋಕರ್ ಆಟವಾಡಲು ನನಗೆ ಚಾನ್ಸ್ ಸಿಗಲಿಲ್ಲವಲ್ಲ ಎಂದು ಸಂಕಟ" ಎಂದರು.
Dk shivakumar
ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ಮಳೆ ನೀರಿನಿಂದ ಉಂಟಾಗುವ ಅವಘಡಗಳನ್ನು ತಪ್ಪಿಸಲು ಮೊದಲೇ ಸಜ್ಜಾಗಿದ್ದೆವು. ನಾವು ಶೇ. 70 ರಷ್ಟು ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ನಿವಾರಣೆ ಮಾಡಿದ್ದೇವೆ. ಈಗಾಗಲೇ ಇಡೀ ಬೆಂಗಳೂರಿನಾದ್ಯಂತ 197 ಕಿಮೀ ಉದ್ದದ ಮಳೆನೀರುಗಾಲುವೆ ನಿರ್ಮಾಣದ ಕೆಲಸ ನಡೆಯುತ್ತಿದೆ." ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಬಿಬಿಎಂಪಿ ಮುಖ್ಯ ಕಚೇರಿಯ ವಾರ್ ರೂಮಲ್ಲಿ ಮಾಧ್ಯಮದವರ ಜತೆ ಸೋಮವಾರ ಮಾತನಾಡಿದರು. ನಾನು ಬೆಂಗಳೂರಿನ ಜವಾಬ್ದಾರಿ ತೆಗೆದುಕೊಂಡ ನಂತರ ಮಳೆ ನೀರಿನಿಂದ ತೊಂದರೆಗೆ ಒಳಗಾಗುತ್ತಿದ್ದ 210 ಪ್ರದೇಶಗಳನ್ನು ಗುರುತಿಸಲಾಯಿತು. 166 ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ನಿವಾರಣೆ ‌ಮಾಡಲಾಗಿದೆ. ಇನ್ನು 44 ಪ್ರದೇಶಗಳಲ್ಲಿ ಕೆಲಸ ಬಾಕಿಯಿದ್ದು ಇದರಲ್ಲಿ 24 ಪ್ರದೇಶಗಳಲ್ಲಿ ಕೆಲಸ ನಡೆಯುತ್ತಿದೆ.

ಸಂಚಾರಿ ಪೊಲೀಸರು ಮಳೆ ಬಂದಾಗ ಸಮಸ್ಯೆ ಉಂಟಾಗುವ 132 ಪ್ರದೇಶಗಳನ್ನು ಗುರುತಿಸಿದ್ದಾರೆ. ಇದರಲ್ಲಿ ಏಪ್ರಿಲ್ ವೇಳೆಗೆ 82 ಪ್ರದೇಶಗಳಲ್ಲಿ ಸಮಸ್ಯೆ ನಿವಾರಣೆ ಮಾಡಿದ್ದೇವೆ. 41 ಕೆಲಸಗಳು ಬಾಕಿ ಉಳಿದಿವೆ. ಮಳೆನೀರುಗಾಲುವೆಗೆ ಎಂದೇ 2 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ" ಎಂದು ಹೇಳಿದರು. "ಮಳೆ ಎಂಬುದು ಪ್ರಕೃತಿಯ ನಿಯಮ. ನಾವು ಜನಸಾಮಾನ್ಯರ ಬದುಕಿನ ಬಗ್ಗೆ ಕಾಳಜಿ ಹೊಂದಿದ್ದೇವೆ. ಉಂಟಾಗಿರುವ ಸಮಸ್ಯೆಗಳನ್ನು ನಿವಾರಣೆ ಮಾಡಲು ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಬೆಂಗಳೂರಿನ ಜನತೆ ಯಾವುದೇ ಕಾರಣಕ್ಕೂ ಗಾಬರಿಗೆ ಒಳಗಾಗುವುದು ಬೇಡ" ಎಂದರು.

"ದುರಾದೃಷ್ಟವಶಾತ್ ಮಹಿಳೆಯೊಬ್ಬರ ಮೇಲೆ ಖಾಸಗಿ ಪ್ರದೇಶದಲ್ಲಿದ್ದ ಕಟ್ಟಡದ ಗೋಡೆ ಬಿದ್ದು ಮೃತಪಟ್ಟಿದ್ದಾರೆ. ನಮಗೂ ನಮ್ಮ ಜವಾಬ್ದಾರಿಯ ಬಗ್ಗೆ ಅರಿವಿದೆ" ಎಂದು ಬೇಸರ ವ್ಯಕ್ತಪಡಿಸಿದರು.

Dk shivakumar
ಬೆಂಗಳೂರು ಮಳೆ ಅವಾಂತರ: ಈ ಸಮಸ್ಯೆ ಹೊಸದಲ್ಲ, ನಿಮ್ಮೊಂದಿಗೆ ನಿಲ್ಲುತ್ತೇನೆ; ಡಿ.ಕೆ ಶಿವಕುಮಾರ್

ಸಿಲ್ಕ್‌ ಬೋರ್ಡ್, ಹೆಬ್ಬಾಳದ‌ ನಂತರದ‌ ಭಾಗ, ಯಲಹಂಕ ಇಲ್ಲೆಲ್ಲೇ ಹೆಚ್ಚು ಮಳೆ ಸುರಿದಿದೆ. ಇಲ್ಲಿ ಒಂದೆರಡು ಕಡೆ ರೈಲ್ವೇ ಅಂಡರ್ ಪಾಸ್ ಕೆಲಸ ನಡೆಯುತ್ತದೆ. ಆದ ಕಾರಣ ನೀರು ನಿಂತು ಹೆಚ್ಚು ತೊಂದರೆಯಾಗುತ್ತಿದೆ. ಆದ್ದರಿಂದ ಆ ಇಲಾಖೆಯವರ ಜೊತೆ ಸಮನ್ವಯ ಸಾಧಿಸಿ ಕೆಲಸ ಮಾಡಲಾಗುವುದು" ಎಂದರು.

ಕುಮಾರಸ್ವಾಮಿ ಗ್ರೇಟರ್ ಬೆಂಗಳೂರಲ್ಲ ಲೂಟರ್ ಬೆಂಗಳೂರು ಎಂದು ಕರೆದಿರುವ ಬಗ್ಗೆ ಕೇಳಿದಾಗ, "ಕುಮಾರಸ್ವಾಮಿ ಹಾಗೂ ಬಿಜೆಪಿಯ ನಾಯಕರು ಹತಾಶೆಯ ಮನುಷ್ಯರು" ಎಂದರು.ನಿಮ್ಮನ್ನ ಅಥವಾ ಸರ್ಕಾರವನ್ನು ನೋಡಿ ಹತಾಶೆಗೆ ಒಳಗಾಗಿದ್ದಾರೆಯೇ ಎಂದಾಗ, "ನಾನು ಹಾಗೂ ಸರ್ಕಾರ ಎರಡೂ ನೋಡಿ ಹತಾಶರಾಗಿದ್ದಾರೆ. ನಾವು ಇಷ್ಟೊಂದು ಸಾಧನೆ ಮಾಡಿದ್ದೇವೆ. ಅವರಿಗೆ ಏನನ್ನೂ ಹೇಳಿಕೊಳ್ಳಲು ಆಗುತ್ತಿಲ್ಲವಲ್ಲ. ಜೋಕರ್ ಆಟವಾಡಲು ನನಗೆ ಚಾನ್ಸ್ ಸಿಗಲಿಲ್ಲವಲ್ಲ ಎಂದು ಸಂಕಟ" ಎಂದರು. ಡಿ.ಕೆ.ಶಿವಕುಮಾರ್ ರಿಯಲ್‌ ಎಸ್ಟೇಟ್‌ ಮಾಡುವವರು ಎನ್ನುವ ಬಿಜೆಪಿಯವರ ಟೀಕೆಯ ಬಗ್ಗೆ ಕೇಳಿದಾಗ, "ನಾನು ಇಲ್ಲಿ ಅದನ್ನು ಮಾತನಾಡುವುದಿಲ್ಲ. ಬೇರೆ ವೇದಿಕೆಯಲ್ಲಿ ಮಾತನಾಡುತ್ತೇನೆ. ಆರ್.ಅಶೋಕ್ ಹಾಗು ವಿರೋಧ ಪಕ್ಷದ ಯಾರನ್ನಾದರೂ ಕರೆಯಿರಿ ಮಾಧ್ಯಮಗಳ ಮುಂದೆಯೇ ಚರ್ಚೆ ನಡೆಸೋಣ" ಎಂದು ತಿರುಗೇಟು ನೀಡಿದರು.

ಗ್ರೇಟರ್‌ ಬೆಂಗಳೂರು ವಾಟರ್ ಬೆಂಗಳೂರಾಗಿದೆ ಎನ್ನುವ ವಿಪಕ್ಷಗಳ ಟೀಕೆಗಳ ಬಗ್ಗೆ ಕೇಳಿದಾಗ,‌ "ನಾವು ಬೆಂಗಳೂರಿನ‌ ಎಷ್ಟು ಸಮಸ್ಯೆಗಳನ್ನು ನಿವಾರಣೆ ಮಾಡಿದ್ದೇವೆ ಎಂಬುದರ ಬಗ್ಗೆ ನಮ್ಮ ಜೊತೆ ಚರ್ಚೆಗೆ ಅವರುಗಳು ಬರಲಿ.‌‌ ಕೇವಲ ಆರೋಪ ಮಾಡಿ ಹಿಟ್ ಅಂಡ್ ರನ್ ಮಾಡುವುದಲ್ಲ.‌ ಅವರು ಪಟ್ಟಿ ಮಾಡಿಕೊಂಡು ಬರಲಿ. ನಾವು ಸುಮ್ಮನೇ ಕುಳಿತಿದ್ದೇವ ಎಂಬುದು ತಿಳಿಯಲಿ" ಎಂದು ಹೇಳಿದರು.ನೀವು ಸವಾಲು ಹಾಕಲು ತಯಾರಿದ್ದೀರಾ ಎಂದು ಕೇಳಿದಾಗ, "ನಾನು ಯಾವಾಗಲೂ ‌ತಯಾರಿದ್ದೇನೆ. ಮಾಧ್ಯಮಗಳಲ್ಲಿಯೇ ಇದಕ್ಕೆ ವೇದಿಕೆ ಸಿದ್ಧ ಮಾಡಿ" ಎಂದರು.

ವಿರೋಧ ಪಕ್ಷಗಳು ಬೆಂಗಳೂರಿನ ಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದು ಟೀಕೆ ಮಾಡಿರುವ ಬಗ್ಗೆ ಕೇಳಿದಾಗ, "ಅವರ ಕಾಲದಲ್ಲಿ ಏನಾಗಿದೆ ಎಂಬುದನ್ನು ವಿಪಕ್ಷಗಳು ನೋಡಿಕೊಳ್ಳಲಿ.‌ ನಾವಾದರು ಶೇ.70 ರಷ್ಟು ಪ್ರದೇಶಗಳಲ್ಲಿ ಸಮಸ್ಯೆಗಳನ್ನು ನಿವಾರಣೆ ಮಾಡಿದ್ದೇವೆ. ಬೆಂಗಳೂರು ಯೋಜಿತವಾದ ನಗರವಲ್ಲ. ಆದರೂ ನಾವು ನಮ್ಮ ಕರ್ತವ್ಯ ಮಾಡುತ್ತೇವೆ" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com