

ಕೊಪ್ಪಳ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಹೆಚ್ಚಿನ ಚರ್ಚೆಗೆ ಗ್ರಾಸವಾಗಿರುವಂತೆಯೇ ಸಿಎಂ ಆಪ್ತರೆಂದು ಗುರುತಿಸಿಕೊಂಡಿರುವ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನದ ಹುದ್ದೆಗಳು ಖಾಲಿಯಿಲ್ಲ. 2028ರ ತನಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಾರೆ. ಬಳಿಕ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎನ್ನುವ ಆಸೆ ನನ್ನದು ಎಂದರು.
ಪಕ್ಷವನ್ನು ಅಧಿಕಾರಕ್ಕೆ ತರಲು ಡಿ.ಕೆ. ಶಿವಕುಮಾರ್ ಅವರ ಪಾತ್ರ ಅತ್ಯಂತ ಮಹತ್ವದ್ದು. ಮುಂದೆ ಅವರು ಸಿಎಂ ಆಗಲಿ ಎಂಬ ಆಸೆ ನನಗೂ ಇದೆ. ಆದರೆ ಈಗ ಸಿಎಂ ಹುದ್ದೆ ಖಾಲಿ ಇಲ್ಲ. ಅಲ್ಲದೆ, ಕೆಪಿಸಿಸಿ ಅಧ್ಯಕ್ಷರ ಹುದ್ದೆಯೂ ಖಾಲಿ ಇಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲೇ ಮುಂದಿನ ಚುನಾವಣೆಗೆ ಹೋಗುತ್ತೇವೆ ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ. ಸಿಎಂ ಬದಲಾವಣೆಯ ಬಗ್ಗೆ ಯಾವುದೇ ನಿರ್ಧಾರ ಹೈಕಮಾಂಡ್‌ನ ಕೈಯಲ್ಲಿದೆ ಎಂದು ಜಮೀರ್ ಹೇಳಿದರು.
ಶಿವಕುಮಾರ್ ಅಪಾರ ದೈವಭಕ್ತರಾಗಿದ್ದು, ಮೊದಲಿನಿಂದಲೂ ದೇವಸ್ಥಾನಗಳಿಗೆ ಹೋಗುವುದು ಸಾಮಾನ್ಯ. ಅವರು ದೇವಸ್ಥಾನಕ್ಕೆ ಹೋಗುವುದಕ್ಕೂ, ಸಿಎಂ ಸ್ಥಾನದ ಪೈಪೋಟಿ ಅಂತಾ ಹೇಳುವುದಕ್ಕೂ ಸಂಬಂಧವಿಲ್ಲ. ನವೆಂಬರ್ ನಲ್ಲಿ ಯಾವ ಕ್ರಾಂತಿಯೂ ಇಲ್ಲ. ಇದೆಲ್ಲವೂ ಬಿಜೆಪಿ ಸೃಷ್ಟಿ ಎಂದರು.
ಸಚಿವ ಸತೀಶ ಜಾರಕಿಹೊಳಿ ಅವರ ಇತ್ತೀಚಿನ ದೆಹಲಿ ಪ್ರವಾಸವನ್ನು ‘ದಲಿತ ಸಿಎಂ’ ಕೂಗಿನ ಜೊತೆ ಸಂಬಂಧಿಸಿ ನೋಡುವ ಅಗತ್ಯವಿಲ್ಲ ನಮ್ಮ ಪಕ್ಷದಲ್ಲಿ ಎಲ್ಲ ನಿರ್ಧಾರಗಳೂ ಹೈಕಮಾಂಡ್ ಮಟ್ಟದಲ್ಲೇ ಆಗುತ್ತವೆ. ನಾವು ಶಿಸ್ತುಬದ್ಧ ಪಕ್ಷದವರು. ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು.
Advertisement